ನಿರ್ಮಿತಿ ಕೇಂದ್ರಗಳಿಗೂ ಆರ್ಟಿಐ ಕಾಯ್ದೆ ಅನ್ವಯ; ಮಾಹಿತಿ ನಿರಾಕರಿಸಿದ್ದ ಕೇಂದ್ರಕ್ಕೆ ₹50 ಸಾವಿರ ದಂಡ ವಿಧಿಸಿದ ಹೈಕೋರ್ಟ್
- by Jagan Ramesh
- August 13, 2025
- 60 Views

ಬೆಂಗಳೂರು: ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯ ಸೆಕ್ಷನ್ 2(ಎಚ್) ಪ್ರಕಾರ ನಿರ್ಮಿತಿ ಕೇಂದ್ರಗಳೂ ಸಾರ್ವಜನಿಕ ಪ್ರಾಧಿಕಾರ ಎನಿಸಿಕೊಳ್ಳಲಿದ್ದು, ಕಾಯ್ದೆಯಡಿಯಲ್ಲಿ ಲಭ್ಯವಿರುವ ಮಾಹಿತಿ ಬಹಿರಂಗಪಡಿಸಲು ಬದ್ಧವಾಗಿರುತ್ತದೆ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಮಾಹಿತಿ ನಿರಾಕರಿಸಿದ್ದ ಚಿತ್ರದುರ್ಗದ ನಿರ್ಮಿತಿ ಕೇಂದ್ರಕ್ಕೆ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ವ್ಯಕ್ತಿಯೊಬ್ಬರು ಆರ್ಟಿಐ ಅಡಿಯಲ್ಲಿ ಕೋರಲಾಗಿದ್ದ ಮಾಹಿತಿ ಒದಗಿಸುವಂತೆ ರಾಜ್ಯ ಮಾಹಿತಿ ಹಕ್ಕು ಆಯೋಗ ನೀಡಿದ್ದ ಆದೇಶ ಪ್ರಶ್ನಿಸಿ ಚಿತ್ರದುರ್ಗದ ನಿರ್ಮಿತಿ ಕೇಂದ್ರದ ಸಾರ್ವಜನಿಕ ಮಾಹಿತಿ ಅಧಿಕಾರಿಯೂ (ಪಿಐಒ) ಆದ ಯೋಜನಾ ನಿರ್ದೇಶಕರು ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಇಲಾಖೆಗಳು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಒಳಪಟ್ಟಿರಲಿದ್ದು, ಕಾಯ್ದೆಯಡಿ ಕೋರಿದ ಮಾಹಿತಿ ಲಭ್ಯವಾಗುವಂತೆ ಮಾಡಬೇಕಾಗುತ್ತದೆ. ಈ ಪ್ರಕರಣದಲ್ಲಿ ಪಾರದರ್ಶಕತೆ ನಿಗ್ರಹಿಸಲು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಮಾಡಿದ ಪ್ರಯತ್ನ ಒಪ್ಪುವಂಥದ್ದಲ್ಲ. ಇಂಥ ನಡವಳಿಕೆಯ ಮೂಲಕ, ಅರ್ಜಿದಾರರಾದ ನಿರ್ಮಿತಿ ಕೇಂದ್ರವು ಮಾಹಿತಿ ಮತ್ತು ವಿವರಗಳನ್ನು ಬಹಿರಂಗಪಡಿಸುವುದನ್ನು ಯಶಸ್ವಿಯಾಗಿ ತಪ್ಪಿಸಿದೆ. ಆದ್ದರಿಂದ, ನಿರ್ಮಿತಿ ಕೇಂದ್ರಕ್ಕೆ ದಂಡ ವಿಧಿಸಬೇಕಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಂತಿಮವಾಗಿ, ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರ ನಿರ್ಮಿತಿ ಕೇಂದ್ರಕ್ಕೆ 50 ಸಾವಿರ ರೂ. ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಆದೇಶದ ಪ್ರತಿ ದೊರೆತ ಮೂರು ವಾರಗಳ ಒಳಗೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ (ಕೆಎಸ್ಎಲ್ಎಸ್ಎ) ಪಾವತಿಸಬೇಕೆಂದು ಆದೇಶಿಸಿದೆ.
ಸರ್ಕಾರದಿಂದ ಆರ್ಥಿಕ ನೆರವು:
ನಿರ್ಮಿತಿ ಕೇಂದ್ರದ ನಿಯಂತ್ರಣ ಮತ್ತು ಮೇಲ್ವಿಚಾರಣೆಯನ್ನು ಸರ್ಕಾರಿ ಅಧಿಕಾರಿಗಳು ನಡೆಸುತ್ತಾರೆ. ಸರ್ಕಾರಿ ಸಂಸ್ಥೆಯೇ ಆಗಿರುವ ವಸತಿ ಮತ್ತು ನಗರಾಭಿವೃದ್ಧಿ ನಿಗಮದಿಂದ (ಹುಡ್ಕೊ) ನಿರ್ಮಿತಿ ಕೇಂದ್ರಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಈ ಹಣವನ್ನು ಸಾರ್ವಜನಿಕ ಕಾರ್ಯಗಳ ಅನುಷ್ಠಾನಕ್ಕೆ ಬಳಸಲಾಗುತ್ತದೆ. ಆದ್ದರಿಂದ, ನಿರ್ಮಿತಿ ಕೇಂದ್ರಗಳು ನಿರ್ವಹಿಸುವ ಕೆಲಸಗಳನ್ನೂ ಸರ್ಕಾರಿ ಕೆಲಸಗಳೆಂದು ಪರಿಗಣಿಸಲಾಗುತ್ತದೆ. ಸರ್ಕಾರದಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆರ್ಥಿಕ ನೆರವು ಪಡೆಯುವ ಯಾವುದೇ ಸಂಸ್ಥೆ ಸಾರ್ವಜನಿಕ ಪ್ರಾಧಿಕಾರವಾಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಶಿಫಾರಸಿನ ಮೇರೆಗೆ ನಿರ್ಮಿತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಿರ್ಮಿತಿ ಕೇಂದ್ರದ ಕೆಲಸಗಳ ಮೇಲ್ವಿಚಾರಣೆಗಾಗಿ ಕಾರ್ಯದರ್ಶಿಗಳು, ಮುಖ್ಯ ಇಂಜಿನಿಯರ್ಗಳು ಇನ್ನಿತರ ಸರ್ಕಾರಿ ಅಧಿಕಾರಿಗಳನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ನಿರ್ಮಿತಿ ಕೇಂದ್ರದ ದೈನಂದಿನ ಚಟುವಟಿಕೆಯನ್ನು ರಾಜ್ಯ ಸರ್ಕಾರಕ್ಕೆ ಸೇರಿದ ಅಧಿಕಾರಿಗಳು ನಡೆಸುತ್ತಾರೆ, ಅವರಲ್ಲಿ ಹಲವರು ಭಾರತೀಯ ಆಡಳಿತ ಸೇವೆ (ಐಎಎಸ್) ಮತ್ತು ಕರ್ನಾಟಕ ಆಡಳಿತ ಸೇವೆಗೆ (ಕೆಎಎಸ್) ಸೇರಿದವರಾಗಿದ್ದಾರೆ. ಇದರಿಂದ, ನಿರ್ಮಿತಿ ಕೇಂದ್ರ ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣದಲ್ಲಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಪೀಠ ಹೇಳಿದೆ.
ಪ್ರಕರಣವೇನು?
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಭಾರತ ಕೃಷಿಕ ಸಮಾಜದ ಅಧ್ಯಕ್ಷ ಎಚ್. ಆರ್. ತಿಮ್ಮಯ್ಯ ಆರ್ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿ, ನಿರ್ಮಿತಿ ಕೇಂದ್ರದ ಆರ್ಥಿಕ ವಹಿವಾಟಿಗೆ ಸಂಬಂಧಿಸಿದ ಮಾಹಿತಿ ಕೋರಿದ್ದರು. ನಿರ್ಮಿತಿ ಕೇಂದ್ರ ಸಾರ್ವಜನಿಕ ಪ್ರಾಧಿಕಾರವಲ್ಲ. ಆದ್ದರಿಂದ, ಮಾಹಿತಿ ಒದಗಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಇದನ್ನು ರಾಜ್ಯ ಮಾಹಿತಿ ಆಯೋಗದಲ್ಲಿ ಪ್ರಶ್ನಿಸಲಾಗಿತ್ತು.
ವಿಚಾರಣೆ ನಡೆಸಿದ್ದ ರಾಜ್ಯ ಮಾಹಿತಿ ಆಯುಕ್ತರು, ತಿಮ್ಮಯ್ಯ ಅವರು ಕೋರಿರುವ ಮಾಹಿತಿ ನೀಡುವಂತೆ ನಿರ್ಮಿತಿ ಕೇಂದ್ರಕ್ಕೆ ನಿರ್ದೇಶಿಸಿದ್ದರಲ್ಲದೆ, 25 ಸಾವಿರ ರೂ. ದಂಡವನ್ನೂ ವಿಧಿಸಿ, 2017ರ ಆಗಸ್ಟ್ 29ರಂದು ಆದೇಶ ಹೊರಡಿಸಿದ್ದರು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು.
Related Articles
Thank you for your comment. It is awaiting moderation.
Comments (0)