ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನ; ಅ.28ರಂದು ಶಾಂತಿ ಸಭೆ ನಡೆಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by Jagan Ramesh
- October 24, 2025
- 68 Views
ಬೆಂಗಳೂರು/ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 2ರಂದು ಪಥಸಂಚಲನ ನಡೆಸಲು ಅನುಮತಿ ಕೋರಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸೇರಿ ಎಲ್ಲ ಸಂಘಟನೆಗಳೊಂದಿಗೆ ಅಕ್ಟೋಬರ್ 28ರಂದು ಶಾಂತಿ ಸಭೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ಹೈಕೋರ್ಟ್, ಸಭೆಯ ನಿರ್ಣಯವನ್ನು ಅಕ್ಟೋಬರ್ 30ರಂದು ನ್ಯಾಯಾಲಯಕ್ಕೆ ತಿಳಿಸುವಂತೆ ಸೂಚಿಸಿದೆ.
ಚಿತ್ತಾಪುರದಲ್ಲಿ ಅಕ್ಟೋಬರ್ 19ರಂದು ಪಥಸಂಚಲನ ನಡೆಸಲು ಅನುಮತಿ ನಿರಾಕರಿಸಿದ್ದ ತಹಶೀಲ್ದಾರ್ ಕ್ರಮವನ್ನು ಆಕ್ಷೇಪಿಸಿ ಆರ್‌ಎಸ್‌ಎಸ್ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಸಲ್ಲಿಸಿದ್ದ ರಿಟ್ ಅರ್ಜಿ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ (ಕಲಬುರಗಿ) ಈ ಆದೇಶ ಮಾಡಿತು.
ಹೈಕೋರ್ಟ್ ಹೇಳಿದ್ದೇನು?
ಅಕ್ಟೋಬರ್ 19ರಂದು ಈ ನ್ಯಾಯಾಲಯವು ವಾಸ್ತವ ಸ್ಥಿತಿಗತಿ ಮತ್ತು ಅರ್ಜಿದಾರರು ಸಲ್ಲಿಸಿರುವ ಮನವಿಯಯನ್ನು ಪರಿಗಣಿಸುವಂತೆ ನಿರ್ದೇಶಿಸಿತ್ತು. ಇದಕ್ಕೆ ಅನುಗುಣವಾಗಿ ಸರ್ಕಾರ ವರದಿ ಸಲ್ಲಿಸಿದೆ. ಸಭೆ/ಪ್ರತಿಭಟನೆ ನಡೆಸಲು ಸಂಬಂಧಿತ ಪ್ರಾಧಿಕಾರವು ವಿವಿಧ ಸಂಘಟನೆಗಳ ಜತೆ ಶಾಂತಿಸಭೆ ನಡೆಸಿ, ನಿರ್ಧರಿಸಲಿದೆ. ಅಕ್ಟೋಬರ್ 19ರಿಂದ ಇಲ್ಲಿಯವರೆಗೆ ಚಿತ್ತಾಪುರ ನಗರದಲ್ಲಿ ಒಂದು ರೀತಿಯ ಉದ್ವಿಘ್ನ ಸ್ಥಿತಿ ಇದೆ. ಮಾಧ್ಯಮಗಳಲ್ಲಿ ಹಲವು ಸಂಘಟನೆಗಳು ಪಥಸಂಚಲನದ ಪರ ಮತ್ತು ವಿರೋಧದ ಹೇಳಿಕೆ ನೀಡುತ್ತಿದ್ದು, ಅನುಮತಿಸಿದರೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರ ಜತೆ ಸ್ಥಳೀಯಾಡಳಿತ ಶಾಂತಿಸಭೆ ನಡೆಸಲು ನಿರ್ಧರಿಸಿದೆ. ಈ ಸಂಬಂಧಿತ ವರದಿ ಮತ್ತು ವಾದವನ್ನು ಪರಿಗಣಿಸಿ, ಪ್ರತಿವಾದಿ ಸ್ಥಳೀಯಾಡಳಿತವು ಅಕ್ಟೋಬರ್ 28ರಂದು ಶಾಂತಿಸಭೆ ನಡೆಸಬೇಕು. ಅಕ್ಟೋಬರ್ 30ರ ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ರಾಜ್ಯ ಸರ್ಕಾರದ ವಾದವೇನು?
ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಅವರು, ಮಾಧ್ಯಮಗಳಲ್ಲಿ ವಿವಿಧ ಸಂಘಟನೆಗಳು ಪಥಸಂಚಲನದ ಪರ ಮತ್ತು ವಿರುದ್ಧ ಹೇಳಿಕೆ ನೀಡುತ್ತಿರುವುದರ ಪರಿಣಾಮ ಇಡೀ ನಗರದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಒಂದು ವೇಳೆ ಪಥಸಂಚಲನಕ್ಕೆ ಅನುಮತಿ ನೀಡಿದರೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಸಂಘಟಕರೊಂದಿಗೆ ಶಾಂತಿ ಸಮಿತಿ ಸಭೆ ನಡೆಸಲು ನಿರ್ಧರಿಸಿದ್ದಾರೆ. ಎರಡು ವಾರಗಳಲ್ಲಿ ಈ ವಿಷಯವನ್ನು ಪರಿಹರಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಪಥಸಂಚಲನದ ಮಾರ್ಗದಲ್ಲಿ ನವೆಂಬರ್ 2ರಂದು ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರದಿಯಲ್ಲಿ ತಿಳಿಸಲಾಗಿದೆ. ಆದ್ದರಿಂದ, ಯಾವುದೇ ಸಂಘಟನೆಗೂ ಪಥಸಂಚಲನಕ್ಕೆ ಅನುಮತಿ ನೀಡಬಾರದು, ಪರಿಸ್ಥಿತಿ ತಿಳಿಯಾದ ನಂತರ ಕೆಲವು ವಾರಗಳ ಬಳಿಕ ಪಥಸಂಚಲನ ನಡೆಸುವುದು ಸೂಕ್ತ ಎಂದು ವರದಿಯಲ್ಲಿ ತಿಳಿಸಲಾಗಿದೆ. ವಾಸ್ತವಿಕ ಪರಿಸ್ಥಿತಿ ಪರಿಗಣಿಸಿ, ಅರ್ಜಿದಾರರ ಮನವಿಯನ್ನು ಬಾಕಿ ಇರಿಸಲಾಗಿದೆಯೇ ಹೊರತು ಅದನ್ನು ತಿರಸ್ಕರಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಅರ್ಜಿದಾರರ ಮನವಿ ಕುರಿತು ಯಾವಾಗ ತೀರ್ಮಾನ ಕೈಗೊಳ್ಳುತ್ತೀರಿ ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಅಡ್ವೊಕೇಟ್ ಜನರಲ್, ಶಾಂತಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಎರಡು ವಾರಗಳ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಅದಕ್ಕೆ ನ್ಯಾಯಪೀಠ, ಸಮಸ್ಯೆ ಬಗೆಹರಿಯುವ ಮಾರ್ಗದ ಬಗ್ಗೆ ನಿಮ್ಮ ವರದಿಯಲ್ಲಿ ಸ್ಪಷ್ಟತೆಯಿಲ್ಲ. ನಿಮ್ಮ ಆಡಳಿತ ಸಾಮರ್ಥ್ಯ ಸಾಬೀತುಪಡಿಸಲು ಇದು ಸಕಾಲ. ಎಲ್ಲರಿಗೂ ಸಮಾಧಾನಕರವಾಗುವ ರೀತಿಯಲ್ಲಿ ಸಮಸ್ಯೆ ಬಗೆಹರಿಸಿ ಎಂದು ಸಲಹೆ ನೀಡಿತು. ಇದಕ್ಕೆ ಶಶಿಕಿರಣ ಶೆಟ್ಟಿ ಅವರು, ವಿವಿಧ ಸಂಘಟನೆಗಳು ಪಥಸಂಚಲನಕ್ಕೆ ಅನುಮತಿ ಕೋರಿವೆ. ಆವುಗಳಲ್ಲಿ ಯಾವುದನ್ನೂ ಪರಿಗಣಿಸಿಲ್ಲ. ಎಲ್ಲರೂ ತಂತಮ್ಮ ಪಥಸಂಚಲನದ ಬಗ್ಗೆ ಒಂದೊಂದು ರೀತಿಯ ಹೇಳಿಕೆ ನೀಡಿದ್ದಾರೆ. ಆದ್ದರಿಂದ, ಎರಡು ವಾರಗಳಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಕೇಂದ್ರದ ಪಡೆ ನಿಯೋಜಿಸಬಹುದು:
ಸರ್ಕಾರದ ವಾದವನ್ನು ಆಕ್ಷೇಪಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್, ಕಳೆದ ಭಾನುವಾರದ ವಿಚಾರಣೆ ವೇಳೆ ನಾವು, ನವೆಂಬರ್ 2 ರಂದು ಪಥಸಂಚಲನ ನಡೆಸಲು ಒಪ್ಪಿಕೊಂಡಿದ್ದೇವೆ. ಆದರೆ, ಸರ್ಕಾರ ವಿನಾಕಾರಣ ಸಮಸ್ಯೆ ಸೃಷ್ಟಿಸುತ್ತಿದೆ. ಪಥಸಂಚಲನ ತಡೆಯಲು ಇತರ ಸಂಘಟನೆಗಳೂ ಅದೇ ದಿನ ಮೆರವಣಿಗೆ ನಡೆಸಲು ಉದ್ದೇಶಿಸಿವೆ ಎಂದು ದೂರಿದರು.
ಕಳೆದ ವಿಚಾರಣೆಯಲ್ಲೇ ನಾವು ಮಾರ್ಗದ ವಿವರವನ್ನು ನೀಡುವ ಬಗ್ಗೆ ಒಪ್ಪಂದವಾಗಿತ್ತು. ನಾವು ಸರ್ಕಾರಕ್ಕೆ ಸಾಕಷ್ಟು ಸಮಯ ನೀಡಿದ್ದೇವೆ. ಈಗ ಹತ್ತು ಸಂಘಟನೆಗಳು ಮುಂದೆ ಬಂದು ಒಂದೇ ದಿನ ಮತ್ತು ಒಂದೇ ಸಮಯದಲ್ಲಿ ಪಥಸಂಚಲನ ನಡೆಸಲು ಬಯಸುತ್ತಿವೆ ಎಂದು ಹೇಳಲಾಗುತ್ತಿದೆ. ಸರ್ಕಾರ ಸೂಕ್ತ ರಕ್ಷಣೆ ನೀಡಲಿ ಮತ್ತು ಇತರ ಸಂಘಟನೆಗಳ ಮೆರವಣಿಗೆ ಅಥವಾ ಪಥಸಂಚಲನಕ್ಕೆ ಬೇರೆ ದಿನ ನಿಗದಿಪಡಿಸಲಿ. ಪಥಸಂಚಲನ ನಡೆಸುವುದು ನಮ್ಮ ಮೂಲಭೂತ ಹಕ್ಕು. ಪಥಸಂಚಲನಕ್ಕೆ ಬೇಕೆಂದೇ ಅಡ್ಡಿ ಸೃಷ್ಟಿ ಮಾಡಲಾಗುತ್ತಿದೆ. ಒಂದು ವೇಳೆ ರಾಜ್ಯ ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ ನಿರ್ವಹಿಸಲು ಸಾಧ್ಯವಾಗದೇ ಹೋದರೆ ಕೇಂದ್ರದ ಪಡೆ ನಿಯೋಜಿಸಬಹುದು. ಅದಕ್ಕಾಗಿ ನಾವು ಮನವಿ ಮಾಡಲು ಸಿದ್ಧರಿದ್ದೇವೆ ಎಂದರು.
ಶೀಘ್ರ ನಿರ್ಣಯ ಕೈಗೊಳ್ಳುವುದು ಉತ್ತಮ:
ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ಎಲ್ಲ ಸಂಘಟನೆಗಳೊಂದಿಗೆ ಇದೇ 28ರಂದು ಶಾಂತಿ ಸಭೆ ನಡೆಸಬೇಕು. ಚಿತ್ತಾಪುರದಲ್ಲಿನ ಪರಿಸ್ಥಿತಿ ಪರಿಗಣಿಸಿ, ಸೂಕ್ತ ನಿರ್ಧಾರ ಕೈಗೊಳ್ಳಬೇಕು ಮತ್ತು ಸಭೆಯಲ್ಲಿ ಕೈಗೊಂಡ ನಿರ್ಣಯದ ವರದಿಯನ್ನು ಕೋರ್ಟ್‌ಗೆ ತಿಳಿಸಬೇಕು ಎಂದು ಆದೇಶಿಸಿತು.
ಇದೇ ವೇಳೆ, ಶಾಂತಿ ಸಭೆಯನ್ನು ಎಲ್ಲಿ, ಯಾವ ಸಮಯಕ್ಕೆ ನಡೆಸಲಾಗುತ್ತದೆ ಎಂಬ ಮಾಹಿತಿಯನ್ನು ಒಂದು ದಿನದ ಒಳಗೆ ಅರ್ಜಿದಾರರ ಪರ ವಕೀಲರೂ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ತಿಳಿಸಲಾಗುವುದು ಎಂಬ ಎಜಿ ಹೇಳಿಕೆಯನ್ನು ದಾಖಲಿಸಿದ ನ್ಯಾಯಪೀಠ, ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕು. ಇದನ್ನು ಹೆಚ್ಚು ಎಳೆಯದಿರುವುದು ಒಳಿತು. ಶೀಘ್ರ ನಿರ್ಣಯ ಕೈಗೊಳ್ಳುವುದರಿಂದ ಸಮಾಜ ಹಾಗೂ ಎಲ್ಲರಿಗೂ ಒಳ್ಳೆಯದಾಗುತ್ತದೆ. ಈ ವಿಚಾರದಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಮೌಖಿಕವಾಗಿ ತಿಳಿಸಿ, ವಿಚಾರಣೆಯನ್ನು ಅಕ್ಟೋಬರ್ 30ರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)