ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ವಿಚಾರ; ಮತ್ತೊಮ್ಮೆ ಶಾಂತಿ ಸಭೆ ನಡೆಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by Jagan Ramesh
- October 30, 2025
- 49 Views
 
                            ಬೆಂಗಳೂರು/ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನಡೆಸಲು ಉದ್ದೇಶಿಸಿರುವ ಪಥಸಂಚಲನಕ್ಕೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನವೆಂಬರ್ 5ರಂದು ಮತ್ತೊಮ್ಮೆ ಶಾಂತಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಪಥಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಿರುವ ಮನವಿ ಪರಿಗಣಿಸಲು ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಕೋರಿ ಆರ್ಎಸ್ಎಸ್ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ನವೆಂಬರ್ 5ರಂದು ಸಂಜೆ 5 ಗಂಟೆಗೆ ಹೈಕೋರ್ಟ್ನ ಬೆಂಗಳೂರು ಪ್ರಧಾನ ಪೀಠದಲ್ಲಿನ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಸಭೆ ನಡೆಸಬೇಕು. ಸಭೆಯಲ್ಲಿ ಅರ್ಜಿದಾರರು, ಅವರ ಪರ ವಕೀಲರು ಸೇರಿ ಸಂಬಂಧಪಟ್ಟ ಎಲ್ಲರೂ ಭಾಗವಹಿಸಬೇಕು. ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಗೆ ಹಾಜರಾಗಲು ಬಯಸುವವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ನವೆಂಬರ್ 7ರ ಮಧ್ಯಾಹ್ನ 2.30 ಕ್ಕೆ ಮುಂದೂಡಿತು.
ಮೊದಲ ಸಭೆಗೆ ಹಾಜರಾಗದ ಅರ್ಜಿದಾರರು:
ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ನ್ಯಾಯಾಲಯದ ನಿರ್ದೇಶನದಂತೆ ಅಕ್ಟೋಬರ್ 28ರಂದು ನಡೆದ ಶಾಂತಿ ಸಭೆಗೆ ಪಥಸಂಚಲನಕ್ಕೆ ಅನುಮತಿ ಕೋರಿರುವ ಸಂಘಟನೆಯ ಸದಸ್ಯರು ಭಾಗಿಯಾಗಿದ್ದರು. ಈ ಸೀಮಿತ ಅವಧಿಯಲ್ಲಿಯೇ ಪಥಸಂಚಲನ ನಡೆಸಲು ಅನುಮತಿ ಬೇಕಾಗಿದೆ. ಇತರ ಸಂಘಟನೆಗಳು ರ್ಯಾಲಿ ನಡೆಸುವುದಕ್ಕೆ ನಮಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದರು.
ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಹೈಕೋರ್ಟ್ ಆದೇಶದಂತೆ ಸಭೆ ಆಯೋಜನೆ ಮಾಡಲಾಗಿತ್ತು. ಆದರೆ, ಸಭೆಗೆ ಅರ್ಜಿದಾರರೇ ಗೈರು ಹಾಜರಾಗಿದ್ದರು. ಹಾಗಾಗಿ, ಯಾವುದೇ ತೀರ್ಮಾನವಾಗಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅರುಣ್ ಶ್ಯಾಮ್, ಅರ್ಜಿದಾರರ ಮನೆಯಲ್ಲಿ ಸಾವು ಸಂಭವಿಸಿತ್ತು. ಆದ ಕಾರಣ ಅವರು ಸಭೆಗೆ ಹಾಜರಾಗಿರಲಿಲ್ಲ. ಇತರ ಪ್ರತಿನಿಧಿಗಳು ಹಾಜರಿದ್ದರು ಎಂದು ತಿಳಿಸಿದರು.
ವಾದ ಮುಂದುವರಿಸಿದ ಅಡ್ವೊಕೇಟ್ ಜನರಲ್, ಸಭೆಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಆದರೂ, ಸಭೆಗೆ ಹಾಜರಾಗುತ್ತಿಲ್ಲ. ಅಗತ್ಯವಿದ್ದಲ್ಲಿ ಮತ್ತೊಂದು ದಿನ ಸಭೆ ಆಯೋಜಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರಲ್ಲದೆ, ರಾಜ್ಯ ಸರ್ಕಾರ ಈ ಪ್ರಕರಣಕ್ಕೆ ಅಂತಿಮ ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದರೆ, ಅರ್ಜಿದಾರರು ಸರ್ಕಾರಕ್ಕೆ ಸಹಕರಿಸದೆ ಇದೀಗ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಲು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಅವರ ನಡೆ ಸಂಪೂರ್ಣ ರಾಜಕೀಯಪ್ರೇರಿತವಾಗಿದೆ ಎಂದು ಆಕ್ಷೇಪಿಸಿದರು.
ಆಗ ನ್ಯಾಯಪೀಠ, ಶಾಂತಿಯುತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ಸಭೆ ನಡೆಸಿ, ನಿರ್ಧಾರ ಕೈಗೊಂಡು ಹಾಜರಾಗಲು ಸೂಚನೆ ನೀಡಲಾಗಿತ್ತು. ಅರ್ಜಿ ಸಲ್ಲಿಸಿರುವವರು ಸಭೆಗೆ ಹಾಜರಾಗಬೇಕಿತ್ತು. ಅವರ ಬದಲಾಗಿ ಇತರರು ಹಾಜರಾಗಿ ಹೇಳಿಕೆ ನೀಡುವುದು ಸರಿಯಾಗುವುದಿಲ್ಲ. ಗೊಂದಲ ಪರಿಹರಿಸುವುದು ನ್ಯಾಯಾಲಯದ ಉದ್ದೇಶವಾಗಿದೆ ಎಂದು ಹೇಳಿತು. ಅದಕ್ಕೆ ಅರುಣ್ ಶ್ಯಾಮ್ ಅವರು, ಈಗ ಮತ್ತೆ ಸಭೆ ಕರೆದರೆ ಅದಕ್ಕೆ ಅರ್ಜಿದಾರರು ಹಾಜರಾಗಲು ಸಿದ್ಧರಿದ್ದಾರೆ ಎಂದು ತಿಳಿಸಿದರು.
ಇತರ ಕಾರ್ಯಕ್ರಮಗಳಿಗೂ ಮಾನದಂಡವಾಗಬೇಕು:
ಇದನ್ನು ಪರಿಗಣಿಸಿದ ನ್ಯಾಯಪೀಠ, ಮತ್ತೊಮ್ಮೆ ಶಾಂತಿ ಸಭೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು. ಇದೇ ವೇಳೆ, ಸಭೆಯಲ್ಲಿ ಕೈಗೊಳ್ಳುವ ನಿರ್ಧಾರ ಮುಂದಿನ ದಿನಗಳಲ್ಲಿ ಇತರ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದಕ್ಕೂ ಮಾನದಂಡವಾಗಬೇಕು. ಸೌಹಾರ್ದಯುತವಾಗಿ ಎಲ್ಲವೂ ಬಗೆಹರಿಯಬೇಕು ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿತು.
Related Articles
                            Thank you for your comment. It is awaiting moderation.
                        
                                        
                    
                    
                 
                            
                                            
 
                                                                                                                                                     
                                                                                                                                                     
                                                                                                                                                     
                                                                                                                                                     
                                                                                                                                                     
                                                                                                                                                    
Comments (0)