ಕಾಲ್ತುಳಿತ ಪ್ರಕರಣ, 10 ದಿನದಲ್ಲಿ ನ್ಯಾಯಾಂಗ ತನಿಖೆ ವರದಿ ಕೈಸೇರುವ ಸಾಧ್ಯತೆ; ಹೈಕೋರ್ಟ್ಗೆ ಎಜಿ ಹೇಳಿಕೆ
- by Jagan Ramesh
- July 1, 2025
- 33 Views

ಬೆಂಗಳೂರು: ಆರ್ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಂಗ ತನಿಖೆಯ ವರದಿ ಮುಂದಿನ 10 ದಿನಗಳಲ್ಲಿ ಸಿಗುವ ಸಾಧ್ಯತೆಯಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಕಾಲ್ತುಳಿತ ಪ್ರಕರಣ ಸಂಬಂಧ ಮಾಧ್ಯಮ ವರದಿಗಳನ್ನು ಆಧರಿಸಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಂಗ ತನಿಖೆಯ ವರದಿ ಸುಮಾರು ಹತ್ತು ದಿನಗಳಲ್ಲಿ ಬರುವ ಸಾಧ್ಯತೆಯಿದೆ. ಅದನ್ನು ನ್ಯಾಯಾಲಯಕ್ಕೆ ಒದಗಿಸಲಾಗುವುದು. ಆದ್ದರಿಂದ, ಅರ್ಜಿ ವಿಚಾರಣೆಯನ್ನು 10 ದಿನಗಳ ನಂತರಕ್ಕೆ ಮಂದೂಡಬೇಕು ಎಂದು ಕೋರಿದರು.
ಈ ವೇಳೆ ನ್ಯಾಯಪೀಠ, ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿರುವ ವಸ್ತುಸ್ಥಿತಿ ವರದಿ/ದಾಖಲೆಗಳನ್ನು ಏಕೆ ಮುಚ್ಚಿದ ಲಕೋಟೆಯಲ್ಲಿಯೇ ಇರಿಸಬೇಕು? ಎಂದು ಎಜಿಯನ್ನು ಪ್ರಶ್ನಿಸಿತು.
ಪ್ರಕರಣದಲ್ಲಿ ಅಮೈಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ಹಿರಿಯ ವಕೀಲೆ ಸುಶೀಲಾ ಅವರು, ಈಗಾಗಲೇ ಹಲವು ಬಾರಿ ವಿಚಾರಣೆ ಮುಂದೂಡಿಕೆಯಾಗಿದೆ. ಸರ್ಕಾರ ಸಲ್ಲಿಸಿರುವ ದಾಖಲೆಗಳು ಏಕೆ ಬಹಿರಂಗಪಡಿಸಬಾರದು ಎಂಬುದಕ್ಕೆ ಸರ್ಕಾರ ನ್ಯಾಯಸಮ್ಮತವಾದ ಕಾರಣ ನೀಡುತ್ತಿಲ್ಲ. 10-15 ದಿನಗಳ ನಂತರ ದಾಖಲೆಗಳನ್ನು ಬಹಿರಂಗಪಡಿಸುವ ರಾಜ್ಯದ ನಿಲುವನ್ನು ನಮ್ಮ ನ್ಯಾಯ ವಿತರಣಾ ವ್ಯವಸ್ಥೆ ಅನುಮೋದಿಸುವುದಿಲ್ಲ. ವರದಿಯು ಪಾರದರ್ಶಕವಾಗಿರಬೇಕಿದೆ. ಅದನ್ನು ಸಾರ್ವಜನಿಕರು ನೋಡಬೇಕಾಗುತ್ತದೆ ಎಂದು ಆಕ್ಷೇಪಿಸಿದರು.
ಎಜಿ ಪ್ರತಿಕ್ರಿಯಿಸಿ, ಮ್ಯಾಜಿಸ್ಟೀರಿಯಲ್ ವಿಚಾರಣೆ ಅಥವಾ ನ್ಯಾಯಾಂಗ ಆಯೋಗದ ಸ್ಥಿತಿಗತಿ ವರದಿಯನ್ನು ಬಳಸಿಕೊಳ್ಳಬಾರದು. ಸ್ವತಂತ್ರ ಹಾಗೂ ನಿಷ್ಪಕ್ಷಪಾತ ವಿಚಾರಣೆ ನಡೆಯಬೇಕಿದೆ. ಆ ಉದ್ದೇಶದಿಂದ ವರದಿ ಬಹಿರಂಗವಾಗಬಾರದು. ಅದನ್ನು ಮುಚ್ಚಿದ ಲಕೋಟೆಯಲ್ಲಿ ಇಡುವಂತೆ ಕೋರಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.
Comments (0)