ರೇಣುಕಾಸ್ವಾಮಿ ಕೊಲೆ ಪ್ರಕರಣ; ದಾಖಲೆಗಳನ್ನು ಅಂಗೀಕರಿಸುವಂತೆ ಸರ್ಕಾರಿ ಅಭಿಯೋಜಕರಿಂದ ಸೆಷನ್ಸ್ ಕೋರ್ಟ್‌ಗೆ ಮನವಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಒಟ್ಟು 10 ದಾಖಲೆಗಳನ್ನು ಅಂಗೀಕರಿಸುವಂತೆ ತನಿಖಾಧಿಕಾರಿಗಳ ಪರ ಸರ್ಕಾರ ಸರ್ಕಾರಿ ಅಭಿಯೋಜಕರು ಸೋಮವಾರ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ಗೆ ಮನವಿ ಮಾಡಿದರು.

ಪ್ರಕರಣದ ವಿಚಾರಣೆ ನಡೆಸಿದ‌ ನ್ಯಾಯಾಧೀಶ ಐ.ಪಿ.ನಾಯ್ಕ್‌ ಅವರ ಮುಂದೆ ತನಿಖಾಧಿಕಾರಿಗಳ ಪರವಾಗಿ ಹಾಜರಾದ ಸರ್ಕಾರಿ ಅಭಿಯೋಜಕರು, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 294 ಅಡಿಯಲ್ಲಿ ಅರ್ಜಿ ಸಲ್ಲಿಸಿದರು. ಪ್ರಕರಣದ ಮುಖ್ಯ ವಿಚಾರಣೆಗೆ ಒಳಪಡಿಸಬಹುದಾದ ಸಾಕ್ಷಿಗಳು ಮತ್ತು ಸಾಕ್ಷ್ಯಧಾರಗಳ ವಿವರಗಳನ್ನು ಹೊಂದಿರುವ ಒಟ್ಟು 10 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಅವುಗಳನ್ನು ಆರೋಪಿಗಳ ಒಪ್ಪಿಗೆ ಮೇರೆಗೆ ಅಂಗೀಕರಿಸಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಆರೋಪಿಗಳ ಪರ ವಕೀಲರು, ಸರ್ಕಾರಿ ಅಭಿಯೋಜಕರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ, ನಮ್ಮ ನಿಲುವು ತಿಳಿಸಲಾಗುವುದು. ಅದಕ್ಕಾಗಿ 2 ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಇದನ್ನು ಆಲಿಸಿದ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರ ಮನವಿಗೆ ನಿಮ್ಮ ನಿಲುವು/ಅಭಿಪ್ರಾಯವನ್ನು ತಿಳಿಸಬೇಕು ಎಂದು ಆರೋಪಿಗಳ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ನವೆಂಬರ್ 19ಕ್ಕೆ ಮುಂದೂಡಿದರು.

ವಿಸಿ ಮೂಲಕ ಹಾಜರಾದ ದರ್ಶನ್:
ಪ್ರಕರಣದ ವಿಚಾರಣೆಗೆ ಜೈಲಿನಿಂದ ದರ್ಶನ್‌ ಮತ್ತಿತರ ಆರೋಪಿಗಳು ವಿಡಿಯೋ ಕಾನ್ಫರೆನ್ಸ್‌ (ವಿಸಿ) ಮೂಲಕ ಹಾಜರಾಗಿದ್ದರು. 4ನೇ ಆರೋಪಿ ರಾಘವೇಂದ್ರ ಮತ್ತು 16ನೇ ಆರೋಪಿ ಕೇಶವಮೂರ್ತಿ ಹೊರತುಪಡಿಸಿ ಜಾಮೀನು ಮೇಲಿರುವ ಉಳಿದ 8 ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಕೇಶವಮೂರ್ತಿ ಮತ್ತು ರಾಘವೇಂದ್ರ ಪರ ವಕೀಲರು ವಿಚಾರಣೆಯಿಂದ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಧೀಶರು ಪುರಸ್ಕರಿಸಿದರು. ಜೈಲಿನಲ್ಲಿರುವ 6ನೇ ಆರೋಪಿ ಜಗದೀಶ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಚಿತ್ರದುರ್ಗ ಜಿಲ್ಲಾ ಕಾರಗೃಹಕ್ಕೆ ಸ್ಥಳಾಂತರಿಸಲು ಕೋರಿ ಜೈಲು ಅಧಿಕಾರಿಗಳ ಅರ್ಜಿ ಸಲ್ಲಿಸಿದ್ದಾರೆ ಎಂದು ಸರ್ಕಾರಿ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದರು.

Related Articles

Comments (0)

Leave a Comment