ಮಧುಕರ್ ಅಂಗೂರ್ ವಿರುದ್ಧದ ಅತ್ಯಾಚಾರ ಪ್ರಕರಣ; ಎಸ್‌ಪಿಪಿ ನೇಮಕ ಆದೇಶ ರದ್ದುಪಡಿಸಿದ ಹೈಕೋರ್ಟ್
- by Prashanth Basavapatna
- September 17, 2025
- 110 Views
ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ.ಮಧುಕರ್ ಜಿ. ಅಂಗೂರ್ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಾದ ಮಂಡಿಸಲು ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ (ಎಸ್‌ಪಿಪಿ) ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಸಿ.ಎಚ್. ಹನುಮಂತರಾಯ ಅವರನ್ನು ಎಸ್‌ಪಿಪಿಯಾಗಿ ನೇಮಕ ಮಾಡಿ 2016ರ ಫೆಬ್ರವರಿ 26ರಂದು ರಾಜ್ಯ ಗೃಹ ಇಲಾಖೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮಧುಕರ್ ಅಂಗೂರ್ ಮತ್ತವರ ಪತ್ನಿ ಪ್ರಿಯಾಂಕಾ ಅಂಗೂರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ವಿಶೇಷ ಸರ್ಕಾರಿ ಅಭಿಯೋಜಕರ ನೇಮಕದಲ್ಲಿ ಗೃಹ ಇಲಾಖೆ ವಿವೇಚನೆ ಬಳಿಸಿಲ್ಲ ಎಂದು ತಿಳಿಸಿ, ನೇಮಕಾತಿ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್, ಹೊಸ ವಿಶೇಷ ಸರ್ಕಾರಿ ಅಭೀಯೋಜಕರ ನೇಮಕ ಆಗುವ ವರೆಗೆ ಅಭಿಯೋಜನಾ ನಿರ್ದೇಶನಾಲಯದ ಪಟ್ಟಿಯಲ್ಲಿರುವ ಅಭಿಯೋಜಕರು ಪ್ರಕರಣ ಮುಂದುವರಿಸಬೇಕು ಎಂದು ಹೇಳಿದೆ.
ಜತೆಗೆ, ವಿಶೇಷ ಸರ್ಕಾರಿ ಅಭಿಯೋಜಕರ ನೇಮಕಕ್ಕೆ ಸಂಬಂಧಿಸಿದ ನಡಾವಳಿ ಮತ್ತು ಆದೇಶ ನಾಶವಾಗಿದೆ. ಈ ದಾಖಲೆಗಳನ್ನು ಡಿ ಗ್ರೂಪ್ ದಾಖಲೆಗಳೆಂದು ತಪ್ಪಾಗಿ ಭಾವಿಸಿ ಅದರ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಅಧಿಕಾರಿ ಕಡತಗಳನ್ನು ನಾಶಪಡಿಸಿದ್ದಾರೆ ಎಂದು ಗೃಹ ಇಲಾಖೆಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ತಪ್ಪಿತಸ್ಥ ಅಧಿಕಾರಿ ವಿರುದ್ದ ಇಲಾಖಾ ವಿಚಾರಣೆ ನಡೆಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಗೃಹ ಇಲಾಖೆಗೆ ನಿರ್ದೇಶಿಸಿದೆ.
ಪ್ರಕರಣವೇನು?
ಸಂಬಂಧಿ ಮಹಿಳೆಯೊಬ್ಬರ ಮೇಲೆ ನಿರಂತರ ಅತ್ಯಾಚಾರವೆಸಗಿದ ಆರೋಪದಲ್ಲಿ ಮಡಿವಾಳ ಪೊಲೀಸರು ಮಧುಕರ್ ಅಂಗೂರ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಲು ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಅವರನ್ನು ಎಸ್‌ಪಿಪಿಯಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿತ್ತು. ಎಸ್‌ಪಿಪಿ ನೇಮಕಾತಿಯಲ್ಲಿ ನಿಯಮ ಪಾಲನೆಯಾಗಿಲ್ಲ ಎಂದು ಆಕ್ಷೇಪಿಸಿ ಮಧುಕರ್ ಅಂಗೂರ್ ಹೈಕೋರ್ಟ್ ಮೊರೆ ಹೋಗಿದ್ದರು.
Related Articles
Thank you for your comment. It is awaiting moderation.


Comments (0)