ಚಿನ್ನ ಕಳ್ಳ ಸಾಗಣೆ ಪ್ರಕರಣ; ರನ್ಯಾ ರಾವ್ ಆಸ್ತಿ ಜಪ್ತಿಗೆ ಇಡಿ ಹೊರಡಿಸಿದ್ದ ತಾತ್ಕಾಲಿಕ ಆದೇಶಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ನಟಿ ರನ್ಯಾ ಹರ್ಷವರ್ಧಿನಿ ಅಲಿಯಾಸ್‌ ರನ್ಯಾ ರಾವ್‌ ಆಸ್ತಿಗಳ ಜಪ್ತಿಗೆ ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌) ಕಾಯ್ದೆಯಡಿ ಜಾರಿ ನಿರ್ದೇಶನಾಲಯ (ಇಡಿ) ಹೊರಡಿಸಿದ್ದ ತಾತ್ಕಾಲಿಕ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಇಡಿ ಆದೇಶ ಪ್ರಶ್ನಿಸಿ ರನ್ಯಾ ರಾವ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ನೀಡಿದೆ. ಜತೆಗೆ, ಅರ್ಜಿ ಸಂಬಂಧ ಇಡಿಗೆ ನೋಟಿಸ್‌ ಜಾರಿಗೊಳಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ಅರ್ಜಿ ವಿಚಾರಣೆ ಮುಂದೂಡಿದೆ.

ಮೇಲ್ನೋಟಕ್ಕೆ ಇಡಿ ತನ್ನ ವ್ಯಾಪ್ತಿ ಇಲ್ಲದಿದ್ದರೂ ಸಹ ಆರೋಪಿ 2025ಕ್ಕೂ ಮುನ್ನ ಸಂಪಾದನೆ ಮಾಡಿರುವ ಆಸ್ತಿ ಜಪ್ತಿಗೆ ತಾತ್ಕಾಲಿಕ ಆದೇಶ ಹೊರಡಿಸಿದೆ. ಪಾವನ ದಿಬ್ಬೂರ್‌ ಪ್ರಕರಣದಲ್ಲಿ ಸುಪ್ರೀಂ‌ಕೋರ್ಟ್ ಹೊರಡಿಸಿರುವ ಆದೇಶದಂತೆ ಈ ಬಗ್ಗೆ ಪರಿಶೀಲನೆ ನಡೆಸಬೇಕಾಗುತ್ತದೆ. ಆದ್ದರಿಂದ, ಇಡಿಯ ಆದೇಶಕ್ಕೆ ಮುಂದಿನ ಆದೇಶದವರೆಗೆ ಮಧ್ಯಂತರ ತಡೆ ನೀಡಲಾಗುವುದು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ರನ್ಯಾ ರಾವ್ ವಾದವೇನು?
ಇದಕ್ಕೂ ಮುನ್ನ ರನ್ಯಾ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಹಾಲಿ ಆರೋಪಿಸಲಾಗಿರುವ ಚಿನ್ನ ಕಳ್ಳ ಸಾಗಣೆ ಪ್ರಕರಣ 2025ರಲ್ಲಿ ನಡೆದಿದೆ. ಆದರೆ, ಅದಕ್ಕೂ ಮುನ್ನ ಅರ್ಜಿದಾರರು ಸಂಪಾದಿಸಿರುವ ಆಸ್ತಿಗಳು ಜಪ್ತಿಯ ವಿಷಯವಾಗುವುದಿಲ್ಲ ಎಂದು ತಿಳಿಸಿದ್ದರಲ್ಲದೆ, ಪಾವನ ದಿಬ್ಬೂರ್‌ ಹಾಗೂ ಇಡಿ ನಡುವಿನ ಪ್ರಕಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ಆದೇಶವನ್ನು ಉಲ್ಲೇಖಿಸಿ, ನಿಗದಿತ ಅಪರಾಧದ ಮೊದಲು ಸ್ವಾಧೀನಪಡಿಸಿಕೊಂಡ ಆಸ್ತಿಗಳನ್ನು ತಾತ್ಕಾಲಿಕ ಜಪ್ತಿಯಲ್ಲಿ ಸೇರಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ, ಇಡಿ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು.

ಪ್ರಕರಣವೇನು?
2025ರ ಮಾರ್ಚ್ 3ರ ಸಂಜೆ 6.30ಕ್ಕೆ ದುಬೈನಿಂದ ಬೆಂಗಳೂರಿಗೆ ಬಂದಿಳಿದಿದ್ದ ರನ್ಯಾ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಪರಿಶೀಲಿಸಿದ್ದರು. ಮೊದಲಿಗೆ ರನ್ಯಾ ಅವರ ಕೈ ಚೀಲ ಪರಿಶೀಲಿಸಿದಾಗ ಅದರಲ್ಲಿ ಏನೂ ಪತ್ತೆಯಾಗಿರಲಿಲ್ಲ. ಬಳಿಕ ಮಹಿಳಾ ಡಿಆರ್‌ಐ ಅಧಿಕಾರಿಯು ರನ್ಯಾರನ್ನು ಪರಿಶೀಲಿಸುವ ಉದ್ದೇಶದಿಂದ ಲಿಖಿತವಾಗಿ ಒಪ್ಪಿಗೆ ಪಡೆದಿದ್ದರು. ಈ ಸಂದರ್ಭದಲ್ಲಿ ಆಕೆಯ ನಡುವಿನ ಭಾಗ, ಮಂಡಿಯ ಕೆಳಭಾಗದಲ್ಲಿ ಮೀನಖಂಡದಲ್ಲಿ ಚಿನ್ನದ ಬಾರ್‌ಗಳನ್ನು ಮೆಡಿಕಲ್‌ ಅದೆಸೀವ್‌ ಬ್ಯಾಂಡೇಜ್‌ ಬಳಸಿ ಅಂಟಿಸಲಾಗಿತ್ತು.

ತಪಾಸಣೆ ಸಂದರ್ಭದಲ್ಲಿ ರನ್ಯಾ ಬಳಿ 12,56,43,362 ರೂ. ಮೌಲ್ಯದ 14,213.05 ಗ್ರಾಂ ತೂಕದ ಚಿನ್ನ ಪತ್ತೆಯಾಗಿತ್ತು. ಅದನ್ನು ಆಧರಿಸಿ ಕಸ್ಟಮ್ಸ್‌ ಕಾಯ್ದೆ 1962ರ ಸೆಕ್ಷನ್‌ 135(1)(ಜಿ) ಅಡಿ ಹಾಗೂ ಕಾಫಿಪೋಸಾ ಕಾಯ್ದೆಯಡಿ ರನ್ಯಾ ಅವರನ್ನು ಬಂಧಿಸಲಾಗಿತ್ತು. ಚಿನ್ನ ಕಳ್ಳ ಸಾಗಾಣೆ ಮಾಡಲು ರನ್ಯಾ ರಾವ್‌ 2023ರ ನಂತರ 34 ಬಾರಿ ದುಬೈ ಪ್ರವಾಸ ಕೈಗೊಂಡಿದ್ದಾರೆ ಎಂದು ಡಿಆರ್‌ಐ ಆರೋಪಿಸಿದೆ.

ಬೆಂಗಳೂರಿನ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ಮತ್ತು ಸೆಷನ್ಸ್‌ ನ್ಯಾಯಾಲಯಗಳು ರನ್ಯಾಗೆ ಜಾಮೀನು ನಿರಾಕರಿಸಿದ್ದು, ಸದ್ಯ ಅವರು ನ್ಯಾಯಾಂಗ ಬಂಧನಲ್ಲಿದ್ದಾರೆ. ಈ ಮಧ್ಯೆ, ಇಡಿ ರನ್ಯಾ ರಾವ್‌ಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಲು ಪಿಎಂಎಲ್‌ ಕಾಯ್ದೆ 2002ರ ಸೆಕ್ಷನ್‌ 5(1)ರ ಅಡಿಯಲ್ಲಿ ತಾತ್ಕಾಲಿಕ ಆದೇಶ ಹೊರಡಿಸಿತ್ತು. ಇದನ್ನು ರನ್ಯಾ ರಾವ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

Related Articles

Comments (0)

Leave a Comment