ಕ್ಷುಲ್ಲಕ ಕಾರಣದ ಆಧಾರದಲ್ಲಿ ಜನಸ್ನೇಹಿ ಕಾರ್ಯಕ್ರಮ ನಿಷೇಧಿಸಲಾಗದು – ಕರ್ನಾಟಕ ಹೈಕೋರ್ಟ್
- by Jagan Ramesh
- May 19, 2025
- 135 Views

ಬೆಂಗಳೂರು: ಕಾನೂನುಬದ್ಧವಾದ ಜನೋಪಯೋಗಿ ಯೋಜನೆಯನ್ನು ಕ್ಷುಲ್ಲಕ ಕಾರಣಗಳ ಆಧಾರದ ಮೇಲೆ ನಿಷೇಧಿಸುವುದರಿಂದ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, 500 ಮೀಟರ್ ಅಂತರದಲ್ಲಿ ಎರಡು ಜನೌಷಧಿ ಕೇಂದ್ರ ತೆರೆಯಲು ಅನುಮತಿಸದಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯೊಂದನ್ನು ವಜಾಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಶೀಲಾ ಭಟ್ ಎಂಬುವರಿಗೆ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ತೆರಯಲು ಅನುಮತಿಸಿರುವುದನ್ನು ಪ್ರಶ್ನಿಸಿ ಅದೇ ಜಿಲ್ಲೆಯ ಪುತ್ತೂರು ತಾಲೂಕಿನ ಸವಿನಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ.
ಪ್ರತಿವಾದಿಯಾಗಿರುವ ಶೀಲಾ ಭಟ್ ಅವರಿಗೆ ಜನೌಷಧಿ ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ. ಆದರೆ, ಸವಿನಯ ಅವರಿಗೆ ಜನೌಷಧಿ ಕೇಂದ್ರ ಸ್ಥಾಪಿಸಲು ತಾತ್ವಿಕ ಒಪ್ಪಿಗೆ ಮಾತ್ರ ನೀಡಲಾಗಿದೆ. ಹೀಗಿರುವಾಗ, ತಮಗೆ ಮಂಜೂರಾಗಿರುವ ಕೇಂದ್ರ ಹಾಗೂ ಶೀಲಾ ಭಟ್ ಅವರಿಗೆ ಮಂಜೂರಾಗಿರುವ ಕೇಂದ್ರದ ನಡುವಿನ ಅಂತರ ಒಂದು ಕಿಲೋ ಮೀಟರ್ ಎಂದು ವಾದಿಸುವ ಹಕ್ಕನ್ನು ಸವಿನಯ ಅವರು ಹೊಂದಿಲ್ಲ. ಒಂದು ವೇಳೆ, ಅರ್ಜಿದಾರರಿಗೆ ಮಂಜೂರಾಗಿರುವ ಕೇಂದ್ರ ಈಗಾಗಲೇ ಅಸ್ವಿತ್ವದಲ್ಲಿದ್ದು, 500 ಮೀಟರ್ ಅಂತರದಲ್ಲಿ ಮತ್ತೊಂದು ಜನೌಷಧಿ ಕೇಂದ್ರಕ್ಕೆ ಮಂಜೂರಾತಿ ನೀಡಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಜನೋಪಯೋಗಿ ಯೋಜನೆ ನಿಷೇಧಿಸಲಾಗದು:
ಅತ್ಯಂತ ಕಡಿಮೆ ಅಂತರದಲ್ಲಿ ಮತ್ತೊಂದು ಜನೌಷಧಿ ಕೇಂದ್ರ ತೆರೆಯಲು ಅನುಮತಿಸಿದರೆ ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎನ್ನುವುದು ಅರ್ಜಿದಾರರ ಅಳಲಾಗಿದೆ. ಆದರೆ, ವಾಸ್ತವಿಕ ಚಿತ್ರಣ ಅದಲ್ಲ. ಹಲವರಿಗಾಗಿ ರೂಪಿಸಿರುವ ಕಲ್ಯಾಣ ಕಾರ್ಯಕ್ರಮದ ಉದ್ದೇಶವನ್ನು ನ್ಯಾಯಾಲಯ ರಕ್ಷಿಸಬೇಕೇ ಹೊರತು ಕೆಲವರ ಭಾವನೆಯಲ್ಲ. ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎಂಬ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು. ಕ್ಷುಲ್ಲಕ ಕಾರಣಗಳ ಆಧಾರದಲ್ಲಿ ಕಾನೂನುಬದ್ಧವಾದ ಜನಸ್ನೇಹಿ ಕಾರ್ಯಕ್ರಮವನ್ನು ನಿಷೇಧಿಸುವುದರಿಂದ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಮಾಡಿದಂತಾಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಪ್ರಕರಣವೇನು?
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಬ್ರಾ ಗ್ರಾಮದಲ್ಲಿ ಜನೌಷಧಿ ಕೇಂದ್ರ ಆರಂಭಿಸಲು ಅಧಿಸೂಚನೆ ಪ್ರಕಟವಾದ ಬೆನ್ನಲ್ಲೇ ಸವಿನಯ ಅವರು 2023ರ ನವೆಂಬರ್ 20ರಂದು ಮಹಿಳಾ ಉದ್ಯಮಿ ವಿಭಾಗದಡಿ ಪ್ರಾಥಮಿಕ ಕೃಷಿ ಪತ್ತಿನ ಕಟ್ಟಡದ ನೆಲಮಹಡಿಯಲ್ಲಿ ಜನೌಷಧಿ ಕೇಂದ್ರ ಆರಂಭಿಸುವ ಅರ್ಜಿ ಹಾಕಿದ್ದು, ಅದಕ್ಕೆ ತಾತ್ವಿಕ ಒಪ್ಪಿಗೆ ದೊರೆತಿತ್ತು. ಜತೆಗೆ, ಪೂರಕ ದಾಖಲೆಗಳನ್ನು ಒದಗಿಸಿ, ಒಪ್ಪಿಗೆ ನೀಡಿ ಸ್ಟೋರ್ ಕೋಡ್ ನೀಡುವಂತೆ ಕೋರಿದ್ದರು.
ಈ ಮಧ್ಯೆ, ಶೀಲಾ ಭಟ್ ಸಹ ಅರ್ಜಿ ಹಾಕಿದ್ದು, ಅವರಿಗೆ ಜನೌಷಧಿ ಕೇಂದ್ರ ಮಂಜೂರಾತಿ ದೊರೆತು, ಸ್ಟೋರ್ ಕೋಡ್ ನೀಡಲಾಗಿತ್ತು. ಇದರಿಂದ, ಶೀಲಾ ಭಟ್‌ಗೆ ಸ್ಟೋರ್ ಕೋಡ್ ನೀಡಿರುವುದನ್ನು ರದ್ದುಪಡಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ಸವಿನಯ ಅವರು ಮನವಿ ಸಲ್ಲಿಸಿದ್ದರು. ಅಲ್ಲಿ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.
Comments (0)