ಜೀವಿತಾವಧಿ ಶಿಕ್ಷೆ ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಮೇಲ್ಮನವಿ; ಎಸ್‌ಪಿಪಿ ನೇಮಕಾತಿ ಬಗ್ಗೆ ಮಾಹಿತಿ ಕೇಳಿದ ಹೈಕೋರ್ಟ್

ಬೆಂಗಳೂರು: ಮನೆ ಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಮೇಲ್ಮನವಿ ಕುರಿತು ವಾದ ಮಂಡಿಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನು (ಎಸ್‌ಪಿಪಿ) ನೇಮಕ ಮಾಡಲಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ರದ್ದು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿ ಕುರಿತು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಸರ್ಕಾರದ ಪರ ವಕೀಲರಿಗೆ ಈ ಸೂಚನೆ ನೀಡಿ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಸರ್ಕಾರದ ಪರ ವಕೀಲರು, ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯದಲ್ಲಿ ವಾದ ಮಂಡಿಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಲಾಗಿತ್ತು. ಅದರಂತೆ, ಮೇಲ್ಮನವಿಯಲ್ಲೂ ವಾದ ಮಂಡಿಸಲು ಎಸ್‌ಪಿಪಿ ನೇಮಕ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ತಿಳಿಯಬೇಕಿದೆ. ಈ ಸಂಬಂಧ ಮಾಹಿತಿ ಪಡೆಯಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಮೇಲ್ಮನವಿಯಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಲು ಎಸ್‌ಪಿಪಿ ನೇಮಕ ಮಾಡಲಾಗಿದೆಯೇ ಅಥವಾ ಮಾಡಲಾಗುವುದೇ ಎಂಬ ಬಗ್ಗೆ ಮಾಹಿತಿ ಪಡೆದು ತಿಳಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿತು. ಜತೆಗೆ, ಪ್ರಕರಣಕ್ಕೆ ಸಂಬಂಧಿಸಿದ ಸಮಗ್ರ ಸಾರಾಂಶವನ್ನು ಸಲ್ಲಿಸುವಂತೆ ಪ್ರಜ್ವಲ್ ಪರ ವಕೀಲರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.

ಪ್ರಜ್ವಲ್ ಆಕ್ಷೇಪವೇನು?
ಪ್ರಕರಣದ ಸಂತ್ರಸ್ತೆ ನುಡಿದಿರುವ ಸಾಕ್ಷಿ ಮತ್ತು ಆಕೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳಲ್ಲಿ ವ್ಯತ್ಯಾಸವಿದೆ. ಘಟನೆಯ ಬಗ್ಗೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಪೊಲೀಸರು ಗನ್ನಿಗಢದ ಫಾರ್ಮ್‌ ಹೌಸ್‌ಗೆ ಬಂದಿದ್ದರು. ಅವರನ್ನು ನೋಡಿ ಸಂತ್ರಸ್ತೆ ಭೀತಿಗೊಂಡು ಅಲ್ಲಿಂದ ಪರಾರಿಯಾಗಿದ್ದಾಗಿ ತಿಳಿಸಿದ್ದಾರೆ. ಆನಂತರ, ಪೊಲೀಸರು ಆಕೆಯನ್ನು ಎಸ್‌ಐಟಿಯ ಬೆಂಗಳೂರು ಕಚೇರಿಗೆ ಕರೆದೊಯ್ದು, ದೂರು ದಾಖಲಿಸಲು ಮನವಿ ಮಾಡಿದ್ದರು ಎಂದು ಹೇಳಲಾಗಿದೆ. ಇದರ ಪ್ರಕಾರ ನೋಡುವುದಾದರೆ ಪೊಲೀಸರು ಸಂತ್ರಸ್ತೆಯನ್ನು ಹಿಂಬಾಲಿಸಿ, ಆಕೆಯಿಂದ ಬಲವಂತದಿಂದ ದೂರು ಪಡೆದಿದ್ದಾರೆ ಎಂಬುದನ್ನು ತಿಳಿಯುತ್ತದೆ ಎಂದು ಮೇಲ್ಮನವಿಯಲ್ಲಿ ಆರೋಪಿಸಲಾಗಿದೆ.

ಆರೋಪಿತ ಘಟನೆಯು 2021ರ ಜನವರಿ 1ರಿಂದ 2022ರ ಜನವರಿ 31ರವರೆಗೆ ನಡೆದಿದ್ದು, 2024ರ ಮೇ 10ರಂದು ಸಂತ್ರಸ್ತೆ ಪೊಲೀಸರನ್ನು ಬಸವನಗುಡಿಯಲ್ಲಿ ಅತ್ಯಾಚಾರ ಎಸಗಿದ್ದ ಸ್ಥಳಕ್ಕೆ ಕರೆದೊಯ್ದಿದ್ದರು. ಇಲ್ಲಿ ಕೃತ್ಯ ನಡೆದ ಹಾಸಿಗೆ ಮತ್ತು ಮಂಚ ತೋರಿಸಿದ್ದು, ಪ್ರಾಸಿಕ್ಯೂಷನ್‌ನ 6ನೇ ಸಾಕ್ಷಿಯಾದ ಲಿಂಗನಮೂರ್ತಿ ಅವರು ಹಾಸಿಗೆಯಲ್ಲಿ ಕೆಲವು ಕಲೆಗಳು ಪತ್ತೆಯಾಗಿದ್ದವು ಎಂದು ತಿಳಿಸಿದ್ದಾರೆ. ಮೂರು ವರ್ಷಗಳಾದರೂ ಹಾಸಿಗೆಯ ಮೇಲಿನ ಬಟ್ಟೆಯನ್ನು ತೊಳೆಯದಿರಲು ಹೇಗೆ ಸಾಧ್ಯ ಎಂಬ ಬಗ್ಗೆ ವಿಚಾರಣಾ ನ್ಯಾಯಾಲಯಕ್ಕೆ ಯಾವುದೇ ಪ್ರಶ್ನೆ ಉದ್ಭವಿಸಿಲ್ಲ ಎಂದು ವಿಚಾರಣಾ‌ ನ್ಯಾಯಾಲಯದ ತೀರ್ಪಿನ ಬಗ್ಗೆ ಆಕ್ಷೇಪಿಸಲಾಗಿದೆ.

ಗನ್ನಿಗಢದ ಫಾರ್ಮ್‌ ಹೌಸ್‌ನಲ್ಲಿ ಕಾರ್ಮಿಕರು ಉಳಿದುಕೊಳ್ಳಲು ನಿರ್ಮಿಸಲಾಗಿದ್ದ ಮನೆಯಲ್ಲಿ 2024ರ ಮೇ 28ರಂದು ಕೆಲ ಉಡುಪು ಮತ್ತು ತಲೆಗೂದಲನ್ನು ತನಿಖಾಧಿಕಾರಿ ಪತ್ತೆ ಮಾಡಿದ್ದಾಗಿ ತಿಳಿಸಿದ್ದಾರೆ. ಆದರೆ, ಸಂತ್ರಸ್ತೆಯು ತನಿಖಾಧಿಕಾರಿಯನ್ನು ಅಲ್ಲಿಗೆ ಕರೆದೊಯ್ಯದಿದ್ದರೂ ಅವರಿಗೆ ಕನಸು ಬಿದ್ದಿದ್ದಾರೂ ಹೇಗೆ? ಸಂತ್ರಸ್ತೆಯ ಗೈರಿನಲ್ಲಿ ತನಿಖಾಧಿಕಾರಿಯು ಉಡುಪು ಮತ್ತು ತಲೆಗೂದಲನ್ನು ಜಪ್ತಿ ಮಾಡಿರುವುದು ಗಂಭೀರ ಲೋಪವಾಗಿದ್ದು, ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎನ್ನುವುದು ಪ್ರಜ್ವಲ್ ವಾದವಾಗಿದೆ.

ಉಡುಪಿನಲ್ಲಿ ವೀರ್ಯದ ಕಲೆ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಸಂತ್ರಸ್ತೆ 2022ರಲ್ಲಿ ಕೆಲಸ ತೊರೆದಿದ್ದು, ಎಲ್ಲ ಕೊಠಡಿಗಳನ್ನು ಲಾಕ್‌ ಮಾಡಲಾಗಿತ್ತು ಎಂದು 8ನೇ ಪ್ರಾಸಿಕ್ಯೂಷನ್‌ ಸಾಕ್ಷಿ ಹೇಳಿದ್ದಾರೆ. ಎರಡನೇ ಕೊಠಡಿಯು ಬ್ಯಾಟರಿ, ಖಾಲಿ ಬಾಕ್ಸ್‌ಗಳು, ಬಣ್ಣದ ಡಬ್ಬಿಗಳು, ಕಾರ್ಪೆಟ್‌ ಇಡುವ ಸ್ಥಳವಾಗಿ ಭಾಸವಾಗುತ್ತಿತ್ತು ಎಂದು ಹೇಳಲಾಗಿದೆ. ಮೂರು ವರ್ಷಗಳಿಂದ ಬೀಗಬಿದ್ದಿದ್ದ ಈ ಕೊಠಡಿಯಲ್ಲಿ ವೀರ್ಯದ ಕಲೆ ಮತ್ತು ತಲೆಗೂದಲು ಪತ್ತೆಯಾಗುವುದಾದರೂ ಹೇಗೆ ಎಂದು ಪ್ರಜ್ವಲ್ ತಮ್ಮ ಮೇಲ್ಮನವಿಯಲ್ಲಿ ಆಕ್ಷೇಪವೆತ್ತಿದ್ದಾರೆ.

ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ:
ಮನೆ ಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ತೀರ್ಮಾನಿಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಕಳೆದ ಆಗಸ್ಟ್ 2ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದರು.

ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376(2)(ಕೆ)-ಪ್ರಬಲ ಸ್ಥಾನದಲ್ಲಿದ್ದುಕೊಂಡು ಮಹಿಳೆ ಮೇಲೆ ಅತ್ಯಾಚಾರ) ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ಹಾಗೂ 5 ಲಕ್ಷ ರೂ. ದಂಡ, 376(2)(ಎನ್)-(ಮಹಿಳೆಯ ಮೇಲೆ ಪದೇಪದೆ ಅತ್ಯಾಚಾರ) ಅಪರಾಧಕ್ಕೆ ಜೀವನ ಪರ್ಯಂತ ಸೆರೆವಾಸ ಹಾಗೂ 5 ಲಕ್ಷ ರೂ. ದಂಡದ ಗರಿಷ್ಠ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿತ್ತು.

ಇದಲ್ಲದೆ, ಸೆಕ್ಷನ್ 354 (ಎ)-(ಲೈಂಗಿಕ ದೌರ್ಜನ್ಯ) ಅಡಿಯ ಅಪರಾಧಕ್ಕೆ 3 ವರ್ಷ ಜೈಲು, 25 ಸಾವಿರ ರೂ. ದಂಡ; ಸೆಕ್ಷನ್ 354 (ಬಿ)-(ವಿವಸ್ತ್ರಗೊಳಿಸುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ ಅಥವಾ ಬಲಪ್ರಯೋಗ) ಅಡಿಯ ಅಪರಾಧಕ್ಕೆ 7 ವರ್ಷ ಕಾರಾಗೃಹ ಶಿಕ್ಷೆ, 50 ಸಾವಿರ ರೂ. ದಂಡ; ಸೆಕ್ಷನ್ 354 (ಸಿ)-(ಮಹಿಳೆಯ ಖಾಸಗಿ ದೃಶ್ಯಗಳನ್ನು ನೋಡುವುದು ಅಥವಾ ಸೆರೆಹಿಡಿಯುವುದು) ಅಪರಾಧಕ್ಕೆ 3 ವರ್ಷ ಜೈಲು, 25 ಸಾವಿರ ರೂ. ದಂಡ; ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯ ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ; ಸೆಕ್ಷನ್ 201 (ಅಪರಾಧದ ಸಾಕ್ಷ್ಯ ನಾಶ) ಅಡಿಯ ಅಪರಾಧಕ್ಕೆ 3 ವರ್ಷ ಸೆರೆವಾಸ, 25 ಸಾವಿರ ರೂ. ದಂಡ; ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಸೆಕ್ಷನ್ 66(ಇ)-(ವ್ಯಕ್ತಿಯ ಖಾಸಗಿತನ ಉಲ್ಲಂಘಿಸಿ ಚಿತ್ರ ಸೆರೆ ಹಿಡಿಯುವುದು ಹಾಗೂ ಹಂಚುವುದು) ಅಡಿಯ ಅಪರಾಧಕ್ಕೆ 3 ವರ್ಷ ಜೈಲು, 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿತ್ತು.

ಒಟ್ಟು ದಂಡದ ಮೊತ್ತ 11.60 ಲಕ್ಷ ರೂ. ಗಳಲ್ಲಿ 11.25 ಲಕ್ಷ ರೂ. ಗಳನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದ ನ್ಯಾಯಾಲಯ, ಎಲ್ಲ ಶಿಕ್ಷೆಗಳೂ ಏಕಕಾಲಕ್ಕೆ ಜಾರಿಯಾಗಲಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿತ್ತು.

Related Articles

Comments (0)

Leave a Comment