ಅಪಘಾತಕ್ಕೆ ರಸ್ತೆಗುಂಡಿಯೂ ಕಾರಣವೆಂದು ಕೋರ್ಟ್ ಮೆಟ್ಟಿಲೇರಿದ್ದ ವಿಮಾ ಕಂಪನಿ; ಮುಂದೇನಾಯ್ತು?
- by Jagan Ramesh
- May 16, 2025
- 36 Views

ಬೆಂಗಳೂರು: ರಸ್ತೆ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯ ಹಾಗೂ ಅತಿಯಾದ ವೇಗ ಮಾತ್ರವಲ್ಲ, ರಸ್ತೆ ಗುಂಡಿಯೂ ಕಾರಣವಾಗಿದೆ. ಆದ್ದರಿಂದ, ಬಿಬಿಎಂಪಿ ಅಧಿಕಾರಿ ಹಾಗೂ ಗುತ್ತಿಗೆದಾರರನನ್ನೂ ಪಕ್ಷಗಾರರನ್ನಾಗಿ ಮಾಡಬೇಕೆಂಬ ವಿಮಾ ಕಂಪನಿಯ ಮನವಿಯನ್ನು ಹೈಕೋರ್ಟ್ ಸಾರಾಸಗಟಾಗಿ ತಳ್ಳಿಹಾಕಿದೆ.
ರಸ್ತೆಗುಂಡಿಗಳೂ ಅಪಘಾತಕ್ಕೆ ಕಾರಣವಾಗಿರುವುದರಿಂದ ಪಾಲಿಕೆ ಅಧಿಕಾರಿ ಹಾಗೂ ಗುತ್ತಿಗೆದಾರರನ್ನೂ ಹೊಣೆಗಾರರನ್ನಾಗಿಸಿ, ಪ್ರಕರಣದಲ್ಲಿ ಅವರನ್ನೂ ಪಕ್ಷಗಾರರನ್ನಾಗಿಸಬೇಕು ಎಂದು ಕೋರಿ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ಆದೇಶದಲ್ಲೇನಿದೆ?
ಪ್ರಕರಣದ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ, ಕಾರು ಚಾಲಕನ ಅತಿಯಾದ ವೇಗ ಹಾಗೂ ಅಜಾಗರೂಕ ಚಾಲನೆಯಿಂದಾಗಿ ಅಪಘಾತ ಸಂಭವಿಸಿದೆ. ಜತೆಗೆ, ಘಟನಾ ಸ್ಥಳದಿಂದ ಚಾಲಕ ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಕಾರು ಸಹ ಭಾಗಿಯಾಗಿದೆ. ಪರಿಹಾರ ಕೋರಿ ಅರ್ಜಿ ಸಲ್ಲಿಸಿರುವವರು ರಸ್ತೆ ಗುಂಡಿಗಳಿಂದಾಗಿಯೇ ಅಪಘಾತವಾಗಿದೆ ಎಂದು ಎಲ್ಲಿಯೂ ಹೇಳಿಲ್ಲ. ಘಟನೆಗೆ ಚಾಲಕನ ವೇಗದ ಮತ್ತು ನಿರ್ಲಕ್ಷ್ಯ ಚಾಲನೆ ಕಾರಣವೆಂದು ಹೇಳಲಾಗಿದೆ. ಆದರೆ, ಆರೋಪಪಟ್ಟಿಯಲ್ಲಿ ಮಾತ್ರ ಘಟನೆಗೆ ರಸ್ತೆ ಗುಂಡಿಯೂ ಕಾರಣವೆಂದು ಉಲ್ಲೇಖಿಸಲಾಗಿದೆ. ಕಾನೂನಿನಲ್ಲಿ ಪರಿಹಾರಕ್ಕೆ ಇಬ್ಬರು ಹೊಣೆಗಾರರನ್ನು ನಿಗದಿಪಡಿಸಲಾಗದು. ಈ ಪ್ರಕರಣದಲ್ಲಿ ಅಪಘಾತಕ್ಕೆ ಯಾವ ವ್ಯಕ್ತಿ ಕಾರಣನಾಗಿರುತ್ತಾನೆಯೋ ಆತನೇ ಪರಿಹಾರ ಕೋರಲಾಗದು. ಘಟನೆಯಲ್ಲಿ ಆತನ ನಿರ್ಲಕ್ಷ್ಯದ ಪಾತ್ರವೂ ಇದೆ. ಇದೊಂದು ಸಮಗ್ರ ನಿರ್ಲಕ್ಷ್ಯದ ಪ್ರಕರಣವೇ ಹೊರತು, ಪೂರಕ ನಿರ್ಲಕ್ಷ್ಯದ ಪ್ರಕರಣವಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಪ್ರಕರಣವೇನು?
ಕೇರಳದ ಪಟ್ಟಣಂತಿಟ್ಟದ ನಿವಾಸಿ ಆರ್.ಎಂ. ರಾಹುಲ್ ಎಂಬಾತ 2022ರ ಅಕ್ಟೋಬರ್ 19ರಂದು ಬೆಂಗಳೂರಿನಲ್ಲಿ ಮೋಟಾರ್ ಸೈಕಲ್‌ನಲ್ಲಿ ತೆರಳುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ರಾಹುಲ್ ಹಾಗೂ ಹಿಂಬದಿ ಸವಾರ ಅಲಪ್ಪುಳದ ಅರ್ಷಿದ್ ಅಜಿಶದ್ ಗಾಯಗೊಂಡಿದ್ದರು. ಕೆಲದಿನಗಳ ನಂತರ ಅರ್ಷಿದ್ ಮೃತಪಟ್ಟಿದ್ದರು. ಮೃತನ ಕುಟುಂಬದವರು 20 ಲಕ್ಷ ರೂ. ಪರಿಹಾರ ಕೋರಿ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದಲ್ಲಿ (ಎಂಎಸಿಟಿ) ಅರ್ಜಿ ಸಲ್ಲಿಸಿದ್ದರು.
ಈ ಮಧ್ಯೆ ಪೊಲೀಸರು, ಅಪಘಾತಕ್ಕೆ ಕೇವಲ ಕಾರು ಚಾಲಕನ ಅಜಾಗರೂಕ ಚಾಲನೆ ಮಾತ್ರವಲ್ಲ ರಸ್ತೆ ಗುಂಡಿಯೂ ಕಾರಣವಾಗಿದೆ ಎಂದು ತಿಳಿಸಿ, ಕಾರು ಚಾಲಕ ಪವನ್ ಕುಮಾರ್, ಬೈಕ್ ಚಾಲಕ ರಾಹುಲ್ ಜತೆಗೆ ಬಿಬಿಎಂಪಿ ಗುತ್ತಿಗೆದಾರರನ್ನೂ ಆರೋಪಿ ಎಂದು ತೋರಿಸಿ ಅವರ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ವಿಮಾ ಕಂಪನಿಯಿಂದ ಮಧ್ಯಂತರ ಅರ್ಜಿ:
ಇದರ ಬೆನ್ನಲ್ಲೇ ಕಾರ್‌ಗೆ ವಿಮೆ ಮಾಡಿಸಿದ್ದ ಐಸಿಐಸಿಐ ಲೋಂಬರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ ಎಂಎಸಿಟಿಗೆ ಮಧ್ಯಂತರ ಅರ್ಜಿ ಸಲ್ಲಿಸಿ, ಗುತ್ತಿಗೆದಾರರು ಡಾಂಬರು ಹಾಕುವಾಗ ಕಳಪೆ ಕಾಮಗಾರಿ ಮಾಡಿದ ಪರಿಣಾಮ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಆ ಗುಂಡಿಗಳೂ ಅಪಘಾತಕ್ಕೆ ಕಾರಣವಾಗಿವೆ. ಆದ್ದರಿಂದ, ಪ್ರಕರಣದಲ್ಲಿ ನಿರ್ಲಕ್ಷ್ಯಕ್ಕೆ ಯಾರು ಯಾರು ಎಷ್ಟು ಪ್ರಮಾಣದಲ್ಲಿ ಹೊಣೆಗಾರರಾಗಿದ್ದಾರೆ ಎಂಬುದನ್ನು ನಿರ್ಧರಿಸಲು ಬೈಕ್ ಮಾಲೀಕ, ಬೈಕ್ ವಿಮಾದಾರರು, ಬಿಬಿಎಂಪಿ ಗುತ್ತಿಗೆದಾರರು ಮತ್ತು ಬಿಬಿಎಂಪಿ ಅಧಿಕಾರಿಯನ್ನೂ ಪ್ರತಿವಾದಿಯನ್ನಾಗಿ ಮಾಡಬೇಕು ಎಂದು ಕೋರಿತ್ತು. ವಿಮಾ ಕಂಪನಿಯ ಮಧ್ಯಂತರ ಅರ್ಜಿಯನ್ನು 2024ರ ಜುಲೈ 1ರಂದು ನ್ಯಾಯಮಂಡಳಿ ತಿರಸ್ಕರಿಸಿತ್ತು. ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ವಿಮಾ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿತ್ತು.
Related Articles
Thank you for your comment. It is awaiting moderation.
Comments (0)