ಬಿಎಸ್‌ವೈ ವಿರುದ್ಧದ ಪೋಕ್ಸೊ ಪ್ರಕರಣ; ಆದೇಶ ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಪೋಕ್ಸೊ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಕಾಗ್ನೈಜೆನ್ಸ್ (ವಿಚಾರಣೆಗೆ ಪರಿಗಣಿಸಿದ) ತೆಗೆದುಕೊಂಡಿದ್ದ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಬಿ.ಎಸ್‌. ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ಕಾಗ್ನೈಜೆನ್ಸ್ ತೆಗೆದುಕೊಂಡಿದ್ದ ವಿಚಾರಣಾ‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಿ.ಎಸ್. ಯಡಿಯೂರಪ್ಪ ಎರಡನೇ ಬಾರಿ ಸಲ್ಲಿಸಿರುವ ಅರ್ಜಿ ಕುರಿತು ಗುರುವಾರ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶ ಕಾಯ್ದಿರಿಸಿತು.

ಇದಕ್ಕೂ ಮುನ್ನ ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, ಸಂತ್ರಸ್ತೆಯ ಹೇಳಿಕೆಯನ್ನಷ್ಟೇ ಪರಿಗಣಿಸಿ, ಕಾಗ್ನೈಜೆನ್ಸ್ ತೆಗೆದುಕೊಳ್ಳಲಾಗಿದೆ ಎಂದು ವಿಚಾರಣಾ ನ್ಯಾಯಾಲಯ ಹೇಳಬೇಕಿತ್ತು, ಅದನ್ನೂ ಮಾಡಿಲ್ಲ. ಹೊಸದಾಗಿ ಪ್ರಕರಣವನ್ನು ಪರಿಗಣಿಸುವಂತೆ ಸಮನ್ವಯ ಪೀಠವು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿತ್ತು. ಇದನ್ನೂ ಮಾಡಲಾಗಿಲ್ಲ. ಪ್ರಕರಣವನ್ನು ವಿಚಾರಣೆಗೆ ಪರಿಗಣಿಸುವಾಗ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ವಿವೇಚನೆ ಬಳಸಿಲ್ಲ ಎಂದು ಆಕ್ಷೇಪಿಸಿದರು.

ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್, ಸಂತ್ರಸ್ತೆಯ ತಾಯಿ ಹಾಗೂ ಯಡಿಯೂರಪ್ಪ ನಡುವಿನ ಆಡಿಯೊ ರೆಕಾರ್ಡಿಂಗ್ ನಾಶಪಡಿಸಲಾಗಿದೆ. ಅದು ಇಲ್ಲ ಎಂದಾದರೆ ಯಡಿಯೂರಪ್ಪ ಅವರು 2 ಲಕ್ಷ ರೂ. ಗಳನ್ನು ಸಂತ್ರಸ್ತೆಗೆ ಏಕೆ ನೀಡಿದ್ದರು? ಪ್ರಕರಣದ ಸಹ ಆರೋಪಿಯಾದ ಅರುಣ್, ಸಂತ್ರಸ್ತೆಯ ತಾಯಿಯ ಮೊಬೈಲ್ ಕಸಿದು ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದ ಆಡಿಯೊ ರೆಕಾರ್ಡಿಂಗ್ ಡಿಲೀಟ್ ಮಾಡಿಸಿದ್ದಾರೆ. ಆದರೆ, ಸಂತ್ರಸ್ತೆ ಮೊಬೈಲ್ನಲ್ಲಿ ಅಸಲಿ ಆಡಿಯೊ ಇದೆ ಎಂದರು.

ವಾದ ಮುಂದುವರಿಸಿದ ರವಿವರ್ಮ ಕುಮಾರ್, ಈ ಆಡಿಯೊದಲ್ಲಿರುವ ಧ್ವನಿಯು ಯಡಿಯೂರಪ್ಪ ಅವರದ್ದೇ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ಖಾತ್ರಿಪಡಿಸಿದೆ. ಸಂತ್ರಸ್ತೆಯನ್ನು ಖಾಸಗಿ ಕೊಠಡಿಗೆ ಕರೆದೊಯ್ದು ಬಿಎಸ್‌ವೈ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಆನಂತರ, ಸಂತ್ರಸ್ತೆಯು ಅಳುತ್ತಾ ಹೊರಬಂದಿದ್ದಾರೆ. ಪ್ರಕರಣದ ಕಾಗ್ನೈಜೆನ್ಸ್ ತೆಗೆದುಕೊಳ್ಳುವಾಗ ಇದನ್ನೂ ವಿಚಾರಣಾ ನ್ಯಾಯಾಲಯ ಪರಿಗಣಿಸಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿ ಕುರಿತ ಆದೇಶ ಕಾಯ್ದಿರಿಸಲಾಗಿದೆ. ವಾಸ್ತವಿಕ ಅಂಶಗಳಿಗೆ ಸಂಬಂಧಿಸಿದ ವಿವರಣೆಯನ್ನು (ಶನಿವಾರ) ನೀಡಲಾಗುವುದು ಎಂದು ಮೌಖಿಕವಾಗಿ ಹೇಳಿತು.

Related Articles

Comments (0)

Leave a Comment