ಕೆರೆ ಪ್ರದೇಶದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಪ್ರಶ್ನಿಸಿ ಪಿಐಎಲ್; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
- by Jagan Ramesh
- September 3, 2024
- 83 Views
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಪ್ರದೇಶದಲ್ಲಿ ಅಕ್ರಮವಾಗಿ ಕಾಲೇಜು ಕಟ್ಟಡ ನಿರ್ಮಿಸಿರುವುದನ್ನು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ತೆಂಕಕಾರಂದೂರು ಗ್ರಾಮದ ನಿವಾಸಿ ಅಶೋಕ್ ಆಚಾರ್ಯ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಡಿ.ಆರ್. ರವಿಶಂಕರ್ ಅವರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ, ಪಂಚಾಯತ್ರಾಜ್ ಇಂಜಿನಿಯರಿಂಗ್ ಇಲಾಖೆಯ ಬೆಳ್ತಂಗಡಿ ಉಪ ವಿಭಾಗದ ಸಹಾಯಕ ಕಾರ್ಯಕಾರಿ ಇಂಜಿನಿಯರ್, ಸಣ್ಣ ನೀರಾವರಿ ಹಾಗೂ ಇಂಜಿನಿಯರಿಂಗ್ ಇಲಾಖೆಯ ಬೆಳ್ತಂಗಡಿ ಉಪ ವಿಭಾಗದ ಕಾರ್ಯಕಾರಿ ಇಂಜಿನಿಯರ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕುವೆಟ್ಟು ಗ್ರಾ.ಪಂ ಪಿಡಿಒ, ಕಟ್ಟಡದ ಮಾಲೀಕ ಬಿ. ಸುಮಂತ್ ಕುಮಾರ್ ಜೈನ್ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟಂಬರ್ 18ಕ್ಕೆ ಮುಂದೂಡಿತು.
ಅರ್ಜಿದಾರರ ಆಕ್ಷೇಪವೇನು?
ಕೆರೆ ಪ್ರದೇಶದ 30 ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸುವಂತಿಲ್ಲ ಎಂಬ ನಿಯಮವಿದೆ. ಹೀಗಿದ್ದರೂ, ಇನ್ಫಿನಿಟಿ ಲರ್ನಿಂಗ್ ಫೌಂಡೇಷನ್ ಅಧ್ಯಕ್ಷ ಬಿ. ಸುಮಂತ್ ಕುಮಾರ್ ಜೈನ್ ಎಂಬುವರು ಗುರುವಾಯನ ಕೆರೆ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಸರ್ವೇ ಸಂಖ್ಯೆ 13/2, 13/10, 13/16, 13/17ಗಳಲ್ಲಿ ಸ್ವಲ್ಪ ಭಾಗವನ್ನು ಒತ್ತುವರಿ ಮಾಡಿ 2020ರಲ್ಲಿ ನಾಲ್ಕು ಮಹಡಿಯ ಕಟ್ಟಡ ನಿರ್ಮಿಸಿದ್ದಾರೆ. ಅಲ್ಲಿ ಎಕ್ಸೆಲ್ ಪಿಯು ಕಾಲೇಜು ನಡೆಸುತ್ತಿದ್ದಾರೆ. ಮೇಲಾಗಿ ಈಗ ಕೆರೆಗೆ ಹೊಂದಿಕೊಂಡ ಸರ್ವೇ ನಂ.168/2 ಮತ್ತು 168/3ಗಳಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲಾಗುತ್ತಿದೆ. ಆದ್ದರಿಂದ, ಅಕ್ರಮ ಕಟ್ಟಡ ತೆರವುಗೊಳಿಸಬೇಕು ಹಾಗೂ ಪ್ರಗತಿಯಲ್ಲಿರುವ ಕಟ್ಟಡ ನಿರ್ಮಾಣ ಕಾರ್ಯಕ್ಕೆ ತಡೆ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.
Related Articles
Thank you for your comment. It is awaiting moderation.
Comments (0)