ಬಳ್ಳಾರಿ ಖನಿಜ ಪ್ರತಿಷ್ಠಾನದ ನಿಧಿ ವರ್ಗಾವಣೆ ಆದೇಶ ಪ್ರಶ್ನಿಸಿ ಅರ್ಜಿ; ಸರ್ಕಾರದ ಸ್ಪಷ್ಟನೆ ಕೇಳಿದ ಹೈಕೋರ್ಟ್

ಬೆಂಗಳೂರು: ಗಣಿ ಬಾಧಿತ ಪ್ರದೇಶಗಳ ಅಭಿವೃದ್ದಿಗಾಗಿ ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಮೂಲಕ ಸಂಗ್ರಹಿಸಲಾಗಿರುವ ನಿಧಿಯ ಮೊತ್ತದ ಶೇ.28 ಪ್ರಮಾಣವನ್ನು ನೂತನವಾಗಿ ರಚಿಸಲಾಗಿರುವ ವಿಜಯನಗರ ಜಿಲ್ಲೆಗೆ ವರ್ಗಾಯಿಸುವಂತೆ ಹೊರಡಿಸಲಾದ ಆದೇಶಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ತೋರಣಗಲ್‌ನ ಧರಣಿ ಮಹಿಳಾ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವೈ.ಜಿ. ದಿಲೀಪ್ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಬಿ.ಜಿ. ಚಿದಾನಂದ ಅರಸ್ ವಾದ ಮಂಡಿಸಿ, ಗಣಿ ಬಾಧಿತ ಪ್ರದೇಶಗಳ ಅಭಿವೃದ್ದಿಗಾಗಿ ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಮೂಲಕ ಸಂಗ್ರಹಿಸಲಾಗಿರುವ 1,700 ಕೋಟಿ ರೂ.ಗಳಲ್ಲಿ ಈಗಾಗಲೇ ನೂತನ ವಿಜಯನಗರ ಜಿಲ್ಲೆಗೆ 600 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ನಿಧಿಯ ಮೊತ್ತದಲ್ಲಿ 2022ರ ನಂತರದಿಂದ ಪ್ರತಿ ವರ್ಷ ಶೇ.28 ಪ್ರಮಾಣವನ್ನು ವಿಜಯನಗರ ಜಿಲ್ಲೆಗೆ ವರ್ಗಾಯಿಸುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ (ಗಣಿ-1) ಅಧೀನ ಕಾರ್ಯದರ್ಶಿ 2022ರ ಮಾಚ್14ರಂದು ಆದೇಶ ಹೊರಡಿಸಿದ್ದಾರೆ. ಆದರೆ, ಈ ಆದೇಶ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ (ಪಿಎಂಕೆಕೆಕೆವೈ) ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ವಿವರಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ 2.33 ಲಕ್ಷ ಹೆಕ್ಟೇರ್ ಗಣಿ ಬಾಧಿತ ಪ್ರದೇಶವಿದ್ದು, ಅದರ ಅಭಿವೃದ್ಧಿಗೆ ಹೆಚ್ಚಿನ ಹಣ ಬೇಕಾಗುತ್ತದೆ. ವಿಜಯನಗರ ಜಿಲ್ಲೆಯಲ್ಲಿ 76 ಸಾವಿರ ಹೆಕ್ಟೇರ್ ಗಣಿ ಬಾಧಿತ ಪ್ರದೇಶವಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಸಂಗ್ರಹವಾಗುವ ನಿಧಿಯ ಶೇ.28 ಪ್ರಮಾಣವನ್ನು ವಿಜಯನಗರ ಜಿಲ್ಲೆಗೆ ಕೊಟ್ಟರೆ, ಬಳ್ಳಾರಿ ಜಿಲ್ಲೆಯ ಜನರಿಗೆ ಅನ್ಯಾಯವಾಗಲಿದೆ. ಆದ್ದರಿಂದ, ಆದೇಶ ರದ್ದುಪಡಿಸಬೇಕು ಹಾಗೂ ನಿಧಿ ವರ್ಗಾವಣೆ ಮಾಡುವುದಕ್ಕೆ ನಿರ್ಬಂಧ ಹೇರಬೇಕು ಎಂದು ಮನವಿ ಮಾಡಿದರು.

ಮಾರ್ಗಸೂಚಿ ಉಲ್ಲಂಘನೆಯಾಗಿಲ್ಲ:
ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ವಾದ ಮಂಡಿಸಿ, ನಿಧಿ ವರ್ಗಾವಣೆ ಕುರಿತ ಆದೇಶದಲ್ಲಿ ಮಾರ್ಗಸೂಚಿ ಉಲ್ಲಂಘನೆ ಆಗಿಲ್ಲ, ಅದನ್ನು ಸಾಬೀತುಪಡಿಸಲಾಗುವುದು ಎಂದರು. ರಾಜ್ಯ ಸರ್ಕಾರದ ಪರ ವಕೀಲೆ ನಿಲೋಫರ್ ಅಕ್ಬರ್, ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ನಿಧಿಯಿಂದ ವಿಜಯನಗರ ಜಿಲ್ಲೆಗೆ ಹೋಗುವ ಹಣ ಆ ಜಿಲ್ಲೆಯ ಬಡ ಜನರು, ವಿಶೇಷವಾಗಿ ಮಹಿಳೆಯರ ಅಭಿವೃದ್ಧಿಗೆ ಬಳಕೆಯಾಗುತ್ತದೆ. ಆದ್ದರಿಂದ, ನಿಧಿಯ ಹಣ ವರ್ಗಾವಣೆ ಆದೇಶಕ್ಕೆ ಯಾವುದೇ ಮಧ್ಯಂತರ ತಡೆ ನೀಡಬಾರದು ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ಹಂತದಲ್ಲಿ ನೋಟಿಸ್ ಜಾರಿ ಅಥವಾ ಮಧ್ಯಂತರ ಆದೇಶ ನೀಡಲಾಗದು. ನಿಧಿ ವರ್ಗಾವಣೆ ಆದೇಶಕ್ಕೆ ಸಂಬಂಧಿಸಿದಂತೆ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವರಣೆ ನೀಡಲಿ. ಆನಂತರ ಬಳಿಕ ಮುಂದಿನ ಕ್ರಮದ ಬಗ್ಗೆ ಪರಿಶೀಲಿಸೋಣ ಎಂದು ತಿಳಿಸಿ, ವಿಚಾರಣೆಯನ್ನು 2025ರ ಜನವರಿ 7ಕ್ಕೆ ಮುಂದೂಡಿತು.

ಪ್ರಕರಣವೇನು?
ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನಲ್ಲಿ ಸಂಗ್ರಹವಾಗಿರುವ ಸಂಪೂರ್ಣ ನಿಧಿಯಲ್ಲಿ ಶೇ.28 ಪ್ರಮಾಣವನ್ನು ವಿಜಯನಗರ ಜಿಲ್ಲೆಗೆ ವರ್ಗಾಯಿಸಬೇಕು. ಅಲ್ಲದೆ, ಸಂಡೂರು ತಾಲೂಕಿನಲ್ಲಿ ಇನ್ನು ಮಂದೆ ಸಂಗ್ರಹಿಸಬಹುದಾದ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಲ್ಲಿ ಶೇ.28 ಅನ್ನು ಪ್ರತಿ ವರ್ಷ ವಿಜಯನಗರ ಜಿಲ್ಲೆಗೆ ಹಂಚಿಕೆ ಮಾಡಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಗಣಿ-1) ಅಧೀನ ಕಾರ್ಯದರ್ಶಿ 2022ರ ಮಾರ್ಚ್ 14ರಂದು ಆದೇಶ ಹೊರಡಿಸಿದ್ದರು. ಈ ಆದೇಶದಂತೆ, ವಿಜಯನಗರ ಜಿಲ್ಲೆಗೆ ನಿಧಿಯ ಹಣ ಹಂಚಿಕೆ ಮಾಡುವ ಸಂಬಂಧ ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ವಿಜಯನಗರ ಜಿಲ್ಲಾಧಿಕಾರಿಗಳಿಗೆ ಸರ್ಕಾರ 2024ರ ಜುಲೈ 10ರಂದು ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Related Articles

Comments (0)

Leave a Comment