ಪೋಷಕರ ಅನಕ್ಷರತೆ ಬಾಲ್ಯ ವಿವಾಹ ಪ್ರಕರಣ ರದ್ದತಿಗೆ ಆಧಾರವಾಗದು – ಹೈಕೋರ್ಟ್
- by Jagan Ramesh
- February 10, 2026
- 6 Views
ಬೆಂಗಳೂರು: ಬಾಲ್ಯ ವಿವಾಹ ನೆರವೇರಿಸಿದ ಆರೋಪದಲ್ಲಿ ಪೋಷಕರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಅನಕ್ಷರತೆ ಆಧಾರವಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿಸಿದ ಹಿನ್ನೆಲೆಯಲ್ಲಿ ಪೋಕ್ಸೊ ಕಾಯ್ದೆ ಮತ್ತು ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಅಶೋಕ, ಅಶ್ವತ್ಥ ನಾರಾಯಣ, ರಂಗಮ್ಮ, ರಾಮಾಂಜಿನಮ್ಮ ಮತ್ತು ಶ್ರೀರಾಮಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ವಿವಾಹವಾಗಿರುವ ದಂಪತಿಯ ಪೋಷಕರಾಗಿದ್ದಾರೆ. ಮದುವೆ ನಡೆದಾಗ ಯುವತಿಗೆ 16 ವರ್ಷ, 9 ತಿಂಗಳಾಗಿತ್ತು. ಗಂಡು-ಹೆಣ್ಣು ಪರಸ್ಪರ ಪ್ರೀತಿಸುತ್ತಿದ್ದರು. ಅದಕ್ಕಾಗಿ ಮದುವೆ ಮಾಡಲಾಗಿದೆ. ದಂಪತಿಗೆ ಮಗು ಜನಿಸಿದೆ. ಅರ್ಜಿದಾರರು ಅನಕ್ಷರಸ್ಥರಾಗಿದ್ದು, ತಿಳಿವಳಿಕೆಯಿಲ್ಲದೆ ಅವರು ಬಾಲ್ಯ ವಿವಾಹ ನೆರವೇರಿಸಿದ್ದಾರೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು.
ಇದನ್ನು ಒಪ್ಪದ ನ್ಯಾಯಪೀಠ, ಅನಕ್ಷರತೆ ಬಾಲ್ಯ ವಿವಾಹ ಪ್ರಕರಣ ರದ್ದುಪಡಿಸಲು ಆಧಾರವಾಗುವುದಿಲ್ಲ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ನೆರವೇರಿಸಿದ ಪೋಷಕರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಸಾಧ್ಯವಿಲ್ಲ. ಅವರು ಪ್ರಕರಣವನ್ನು ಎದುರಿಸಲೇಬೇಕು. ಪೋಷಕರಿಗೆ ಕರುಣೆ ತೋರುವ ಪ್ರಶ್ನೆಯೇ ಇಲ್ಲ ಎಂದು ತೀಕ್ಷ್ಣವಾಗಿ ನುಡಿಯಿತು.
ಬಾಲ್ಯ ವಿವಾಹ ಪದ್ಧತಿ ನಿಲ್ಲಬೇಕಿದೆ. ಎಲ್ಲರಿಗೂ ಎಚ್ಚರಿಕೆ ಮೂಡಬೇಕಾದರೆ ಬಾಲ್ಯ ವಿವಾಹ ನೆರವೇರಿಸಿದ ಪೋಷಕರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಬಾರದು. ಪೋಷಕರು ಏನೆಂದು ತಿಳಿದುಕೊಂಡಿದ್ದಾರೆ? ಅವರು ಏಕೆ ಬಾಲ್ಯ ವಿವಾಹ ಮಾಡಬೇಕು? ಪೋಷಕರು ಎಚ್ಚೆತ್ತುಕೊಳ್ಳುವುದು ಯಾವಾಗ ಎಂದು ನ್ಯಾಯಪೀಠ ಪ್ರಶ್ನಿಸಿತು.
ಮುಂದುವರಿದು, ಮದುವೆಯಾಗಿರುವ ಯುವತಿಗೆ ಮಗುವಿದೆ. ಈ ಅಂಶ ಪರಿಗಣಿಸಿ ಪೋಕ್ಸೊ ಕಾಯ್ದೆ ರದ್ದುಪಡಿಸಬಹುದು. ಆದರೆ, ಪೋಷಕರ ವಿರುದ್ಧದ ಬಾಲ್ಯ ವಿವಾಹ ಪ್ರಕರಣ ಮುಂದುವರಿಯಬೇಕು. ಈ ವಿಚಾರದಲ್ಲಿ ಅನುಕಂಪ ತೋರುವ ಅಗತ್ಯವಿಲ್ಲ ಎಂದ ನ್ಯಾಯಪೀಠ, ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿತು.
ಪ್ರಕರಣದ ಹಿನ್ನೆಲೆ:
ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು, ಅರ್ಜಿದಾರರ ವಿರುದ್ಧದ ಬಾಲ್ಯ ವಿವಾಹ ಪ್ರಕರಣ ಸಂಬಂಧ 2023ರಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣ ಚಿಕ್ಕಬಳ್ಳಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಎಫ್‌ಟಿಎಸ್‌ಸಿ-1) ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಇದರಿಂದ, ತಮ್ಮ ವಿರುದ್ದದ ಪ್ರಕರಣ ಮತ್ತದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಇಡೀ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
Related Articles
Thank you for your comment. It is awaiting moderation.


Comments (0)