ಜೋಡಿ ಸುರಂಗ ಯೋಜನೆಗೆ ಲಾಲ್‌ಬಾಗ್‌ನಲ್ಲಿ ಮರ ಕಡಿಯುವುದಿಲ್ಲ; ರಾಜ್ಯ ಸರ್ಕಾರದಿಂದ ಹೈಕೋರ್ಟ್‌ಗೆ ಸ್ಪಷ್ಟನೆ

ಬೆಂಗಳೂರು: ನಗರದ ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗಿನ ಉದ್ದೇಶಿತ ಜೋಡಿ ಸುರಂಗ ಮಾರ್ಗದ ಯೋಜನೆಗಾಗಿ ಲಾಲ್‌ಬಾಗ್ ಸಸ್ಯ ತೋಟದೊಳಗಿನ ಮರಗಳನ್ನು ಕಡಿಯುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಸುರಂಗ ಮಾರ್ಗದ ಟೆಂಡರ್ ರದ್ದು ಕೋರಿ ಕಲಾವಿದ ಪ್ರಕಾಶ್ ಬೆಳವಾಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗಿಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಈ ವೇಳೆ ನ್ಯಾಯಪೀಠ, ಉದ್ದೇಶಿತ ಯೋಜನೆಗಾಗಿ ಲಾಲ್‌ಬಾಗ್‌ನಲ್ಲಿ ಮರಗಳನ್ನು ಕತ್ತರಿಸಲಾಗುತ್ತಿದೆಯೇ? ಎಂದು ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರನ್ನು ಕುರಿತು ಪ್ರಶ್ನಿಸಿತು. ಇದಕ್ಕೆ ಎಜಿ ಅವರು ಇಲ್ಲ ಎಂದು ಉತ್ತರಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆಯವರೆಗೆ ಲಾಲ್‌ಬಾಗ್‌ನಲ್ಲಿ ಯಾವುದೇ ಮರಗಳನ್ನು ಕತ್ತರಿಸುವುದಿಲ್ಲ ಎಂದು ಅಡ್ವೊಕೇಟ್‌ ಜನರಲ್‌ ತಿಳಿಸಿದ್ದಾರೆ. ಆದ್ದರಿಂದ, ಯಾವುದೇ ಆದೇಶ ಅಥವಾ ಮಧ್ಯಂತರ ಆದೇಶದ ಅಗತ್ಯವಿಲ್ಲ ಎಂದು ದಾಖಲಿಸಿತು.

ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಡಿ.ಆರ್‌. ರವಿಶಂಕರ್‌ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು, ಇದು ಕಾಗದದ ಮೇಲಿರುವ ಇನ್ನಷ್ಟೇ ಕಾರ್ಯಗತವಾಗಬೇಕಿರುವ ಯೋಜನೆಯಾದರೂ ಸರ್ಕಾರ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಆರಂಭಿಸಿದೆ ಎಂದರು.

ಆಗ ನ್ಯಾಯಪೀಠ, ಇದೇ ಮನವಿಯನ್ನೊಳಗೊಂಡಿರುವ ಮತ್ತೊಂದು ಪಿಐಎಲ್‌ ವಿಚಾರಣೆ ನಡೆಸಿದ್ದು, ಅದನ್ನು ಡಿಸೆಂಬರ್‌ 9ಕ್ಕೆ ನಿಗದಿಗೊಳಿಸಲಾಗಿದೆ. ಯೋಜನೆಗಾಗಿ ಲಾಲ್‌ಬಾಗ್‌ನಲ್ಲಿ ಮರಗಳನ್ನು ಕತ್ತರಿಸಲಾಗುತ್ತದೆಯೇ ಎಂದು ಸರ್ಕಾರವನ್ನು ಕೇಳಲಾಗಿತ್ತು. ಈಗ ಎಜಿ ಇಲ್ಲ ಎಂದಿದ್ದಾರೆ. ಆದ್ದರಿಂದ, ನಿಮ್ಮ ವಾದವನ್ನೂ ಆಲಿಸಲಾಗುವುದು. ಅಷ್ಟೊರೊಳಗೆ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು ಎಂದು ತಿಳಿಸಿತಲ್ಲದೆ, ಅರ್ಜಿ ವಿಚಾರಣೆಯನ್ನು ಡಿಸೆಂಬರ್‌ 9ಕ್ಕೆ ಮುಂದೂಡಿತು.

Related Articles

Comments (0)

Leave a Comment