ಸಮನ್ಸ್ ಜಾರಿಗೊಳಿಸಿಲ್ಲ, ಇಡಿ ಅಧಿಕಾರಿಗಳು ವಿವೇಚನೆ ಬಳಸಿಲ್ಲ; ಕೆ.ಸಿ. ವೀರೇಂದ್ರ ಪತ್ನಿ ಚೈತ್ರಾ ವಾದ
- by Jagan Ramesh
- September 10, 2025
- 329 Views

ಬೆಂಗಳೂರು: ಆನ್ಲೈನ್ ಮತ್ತು ಆಫ್ಲೈನ್ ಅಕ್ರಮ ಬೆಟ್ಟಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಸಮನ್ಸ್ ಜಾರಿಗೊಳಿಸದೆಯೇ ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್) ಕಾಯ್ದೆಯಡಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ ಎಂದು ವೀರೇಂದ್ರ ಪತ್ನಿ ಚೈತ್ರಾ ಪರ ವಕೀಲರು ಹೈಕೋರ್ಟ್ನಲ್ಲಿ ವಾದ ಮಂಡಿಸಿದರು.
ವೀರೇಂದ್ರ ಅವರ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಿ, ತಕ್ಷಣವೇ ಅವರನ್ನು ಬಿಡುಗಡೆಗೊಳಿಸಲು ಆದೇಶಿಸುವಂತೆ ಕೋರಿ ಆರ್.ಡಿ. ಚೈತ್ರಾ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಚೈತ್ರಾ ಪರ ವಕೀಲರು ವಾದ ಮಂಡಿಸಿ, ವಿರೇಂದ್ರ ವಿರುದ್ಧ 2011ರಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕೇಸ್ ದಾಖಲಿಸಲಾಗಿತ್ತು. ಆ ಪ್ರಕರಣದ ಆರೋಪಗಳಿಂದ 2014ರಲ್ಲಿ ಅವರು ಖುಲಾಸೆಯಾಗಿದ್ದರು. ಇದೇ ಪ್ರಕರಣ ಸಂಬಂಧ 2015ರ ಮತ್ತೊಂದು ಎಫ್ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ. 2016ರಲ್ಲಿ ದಾಖಲಾದ ಪ್ರಕರಣದಲ್ಲಿ ಕೆ.ಸಿ. ವೀರೇಂದ್ರ ಅವರು ಆರೋಪಿಯಾಗಿರಲಿಲ್ಲ. 2022ರ ದಾಖಲಾದ ಪ್ರಕರಣ ಸಂಬಂಧ ಆರೋಪಪಟ್ಟಿಯಲ್ಲಿ ವಿರೇಂದ್ರ ಹೆಸರು ಕೈಬಿಡಲಾಗಿತ್ತು. ಮತ್ತೆರಡು ಪ್ರಕರಣಗಳು 2024ರಲ್ಲಿ ಮುಕ್ತಾಯಗೊಂಡಿವೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ವಿರೇಂದ್ರ ಅವರು ಸಿಕ್ಕಿಂನಲ್ಲಿದ್ದಾಗ ಮನೆ, ವ್ಯಾಪಾರ ಸ್ಥಳಲ್ಲಿ ಇಡಿ ದಾಳಿ ನಡೆಸಿದೆ. ಅಂದರೆ ವಿರೇಂದ್ರ ಅವರು ಅನುಪಸ್ಥಿತಿಯಲ್ಲಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಪಿಎಂಎಲ್ ಕಾಯ್ದೆಯಡಿ ಯಾವುದೇ ಅನುಸೂಚಿತ ಪ್ರಕರಣವಿಲ್ಲದಿದ್ದರೂ ವೀರೇಂದ್ರ ಅವರನ್ನು ಬಂಧಿಸಲಾಗಿದೆ ಎಂದು ಆಕ್ಷೇಪಿಸಿದರು.
ಪಿಎಂಎಲ್ ಕಾಯ್ದೆಯಡಿ ಶಾಸಕರನ್ನು ಬಂಧಿಸುವ ಮುನ್ನ ಸಮನ್ಸ್ ನೀಡಬೇಕು. ಆದರೆ, ಈ ಪ್ರಕರಣದಲ್ಲಿ ಬಂಧನ ಮಾಡುವವರೆಗೂ ಸಮನ್ಸ್ ನೀಡಿಲ್ಲ. ಬಂಧನ ಮೆಮೊವನ್ನು ಸಕಾಲಕ್ಕೆ ನೀಡಿಲ್ಲ. ಯಾವ ಆಧಾರದಲ್ಲಿ ಬಂಧಿಸಲಾಗುತ್ತಿದೆ ಎಂಬುದಕ್ಕೆ ಸೂಕ್ತ ಕಾರಣಗಳನ್ನೂ ನೀಡಿಲ್ಲ. ಮತ್ತೆ ಕೆಲ ಪ್ರಕರಣಗಳಲ್ಲಿ ಅರ್ಜಿದಾರರ ಪತಿಯ ಅವರ ವಿರುದ್ಧ ಯಾವುದೇ ನೇರ ಸಾಕ್ಷ್ಯಾಧಾರಗಳಿಲ್ಲ. ವೀರೇಂದ್ರ ಅವರ ಬಂಧನದಲ್ಲಿ ಇಡಿ ಅಧಿಕಾರಿಗಳು ಸೂಕ್ತ ವಿವೇಚನೆ ಬಳಸಿಲ್ಲ. ಆದ್ದರಿಂದ, ವಿರೇಂದ್ರ ಅವರ ಬಂಧನವನ್ನು ಕಾನೂನುಬಾಹಿರ ಎಂಬುದಾಗಿ ಘೋಷಿಸಬೇಕು ಎಂದು ಕೋರಿದರು.
ಸುಮಾರು ಒಂದೂವರೆ ತಾಸು ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಕಾಲಾವಕಾಶದ ಕೊರೆತೆಯಿಂದ ಅರ್ಜಿ ವಿಚಾರಣೆಯನ್ನು ಗುರುವಾರ ಮಧ್ಯಾಹ್ನಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.
Comments (0)