ಆಯುಷ್ ಇಲಾಖೆ ಮುಚ್ಚುವ ಪ್ರಸ್ತಾವನೆ ಇಲ್ಲ; ಹೈಕೋರ್ಟ್‌ಗೆ ಮೌಖಿಕ ಹೇಳಿಕೆ ನೀಡಿದ ಸರ್ಕಾರ

ಬೆಂಗಳೂರು: ಆಯುಷ್ ಇಲಾಖೆಯನ್ನು ಮುಚ್ಚುವ ಪ್ರಸ್ತಾವ ರಾಜ್ಯ ಸರ್ಕಾರದ ಮುಂದೆ ಇಲ್ಲ. ಆಡಳಿತ ವ್ಯವಸ್ಥೆ ಸುಧಾರಿಸಲು ಆಂತರಿಕವಾಗಿ ಮಾರ್ಪಾಡು ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೌಖಿಕವಾಗಿ ತಿಳಿಸಿದೆ.

ಔಷಧಗಳ ಅಮಲ್ಜಾರಿ ವಿಭಾಗ ಮತ್ತು ಪರೀಕ್ಷಾ ಪ್ರಯೋಗಾಲಯವನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಜತೆ ವಿಲೀನಗೊಳಿಸುವುದಕ್ಕೆ ಆಕ್ಷೇಪಿಸಿ ರಾಜ್ಯ ಔಷಧ ಉತ್ಪಾದಕರ ಸಂಘ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ ಪ್ರಸಾದ್‌ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪಿ. ಪ್ರಸನ್ನ ಕುಮಾರ್‌, ಆಯುಷ್‌ ಇಲಾಖೆಯನ್ನು ಅಲೋಪತಿ ಔಷಧಿಗಳ ಇಲಾಖೆಯ ಜತೆ ವಿಲೀನಗೊಳಿಸುವ ಸಂಬಂಧ ಸರ್ಕಾರ ಆದೇಶ ಮಾಡಿದೆ. ಇದು ಔಷಧ ಮತ್ತು ಕಾಂತಿವರ್ಧಕ ಕಾಯ್ದೆಗೆ ವಿರುದ್ಧವಾಗಿದೆ. ಇದರಿಂದ, ಅರ್ಜಿದಾರರ ಸ್ಥಳಗಳನ್ನು ಪ್ರಸ್ತಾವಿತ ಔಷಧ ಮತ್ತು ಕಾಂತಿವರ್ಧಕ ನಿಯಮಗಳಡಿ ಅನರ್ಹ ಇನ್‌ಸ್ಪೆಕ್ಟರ್‌ಗಳು ಪರಿಶೀಲನೆ ಮಾಡಲು ಅವಕಾಶ ಮಾಡಿಕೊಡಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಡೆಪ್ಯೂಟಿ ಸಾಲಿಸಿಟರ್‌ ಜನರಲ್‌ ಎಚ್‌. ಶಾಂತಿ ಭೂಷಣ್‌, ಔಷಧ ಪರವಾನಗಿ ಪ್ರಾಧಿಕಾರವನ್ನು ಔಷಧ ನಿಯಂತ್ರಕರ ಕಚೇರಿಯೊಂದಿಗೆ ವಿಲೀನಗೊಳಿಸುವುದು ಔಷಧ ಮತ್ತು ಕಾಂತಿವರ್ಧಕ ನಿಯಮಗಳು ಮತ್ತು ಕಾಯ್ದೆಗೆ ವಿರುದ್ಧವಾಗಿದೆ ಎಂದರು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ರೊಬೆನ್‌ ಜಾಕಬ್‌, 2025ರ ಜುಲೈ 29ರಂದು ಹೊರಡಿಸಿರುವ ಆದೇಶವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿ ಬರುವ ಆಯುಷ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆಹಾರ ಮತ್ತು ಸುರಕ್ಷತೆ ಮತ್ತು ಔಷಧ ನಿಯಂತ್ರಕರ ಆಯುಕ್ತಾಲಯಗಳಿಗೆ ಸಂಬಂಧಿಸಿದ ಆಂತರಿಕ ವ್ಯವಸ್ಥೆಯಾಗಿದೆ. 2024ರ ಡಿಸೆಂಬರ್ 13ರಂದು ಔಷಧ ನಿಯಂತ್ರಕರ ಕಚೇರಿಯನ್ನು ಆಹಾರ ಮತ್ತು ಸುರಕ್ಷತಾ ಆಯುಕ್ತಾಲಯದ ಜತೆ ವಿಲೀನಗೊಳಿಸಲಾಗಿದ್ದು, ಇದು ಆಡಳಿತಾತ್ಮಕ ವ್ಯವಸ್ಥೆಯಾಗಿದೆ. ಆಯುಷ್‌ ಆಯುಕ್ತಾಲಯವು ಔಷಧ ಜಾರಿ ಮತ್ತು ವಿಶ್ಲೇಷಣೆ ಮತ್ತು ಆಯುಷ್‌ ಆಸ್ಪತ್ರೆಗಳ ಉಸ್ತುವಾರಿ ಮಾಡಲಿದೆ ಎಂದು ತಿಳಿಸಿದರು.

ಔಷಧ ಜಾರಿ ಮತ್ತು ವಿಶ್ಲೇಷಣಾ ಆಡಳಿತವು ಆಹಾರ ಮತ್ತು ಔಷಧ ಆಯುಕ್ತಾಲಯದ ಮೇಲೆ ಬರಲಿದೆ. ಆಯುಷ್‌ ಔಷಧ ಉತ್ಪಾದನಾ ಘಟಕಗಳ ಪರಿಶೀಲನೆಯಲ್ಲಿ ಸಮರ್ಥತೆ ಖಾತ್ರಿಪಡಿಸಲು ಕಾಯ್ದೆಯ ಸೆಕ್ಷನ್‌ 33ಜಿ ಅಡಿ ಮತ್ತು ಸಂಬಂಧಿತ ನಿಯಮದಡಿ ಉಲ್ಲೇಖಿತವಾಗಿರುವ ಪ್ರಕಾರ ಅರ್ಹರನ್ನು ನೇಮಕ ಮಾಡಲಾಗುತ್ತದೆ. ಈ ಸಂಬಂಧ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಹಾಲಿ ಇರುವ ಆಯುಷ್‌ ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ ಯಾವುದೇ ವಿಲೀನ ನಡೆಸುವುದಿಲ್ಲ ಎಂದು ಸರ್ಕಾರ ಹೇಳಿದೆ. ರಾಜ್ಯ ಔಷಧ ಉತ್ಪಾದಕರ ಸಂಘದ ಸದಸ್ಯರ ಸ್ಥಳಗಳ ಪರಿಶೀಲನೆಗೆ ಅರ್ಹ ಇನ್‌ಸ್ಪೆಕ್ಟರ್‌ ನೇಮಕಾತಿಗೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸಲು ರಾಜ್ಯ ಸರ್ಕಾರ ಸ್ವತಂತ್ರವಾಗಿದೆ ಎಂದು ಆದೇಶಿಸಿ, ಅರ್ಜಿ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿತು.

ಆಯುಷ್‌ ಇಲಾಖೆಯ ಆಯುರ್ವೇದ, ಸಿದ್ಧ ಮತ್ತು ಯುನಾನಿ ಔಷಧಿಗಳ ಅಮಲುಜಾರಿ ವಿಭಾಗ ಮತ್ತು ಪರೀಕ್ಷಾ ಪ್ರಯೋಗಾಲಯವನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯೊಂದಿಗೆ ವಿಲೀನಗೊಳಿಸಿ ಸರ್ಕಾರ 2025ರ ಜುಲೈ 29ರಂದು ಆದೇಶಿಸಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

Related Articles

Comments (0)

Leave a Comment