ದಲಿತ ಮಹಿಳೆಯರ ಬಗ್ಗೆ ಹೇಳಿಕೆ; ಯತ್ನಾಳ್ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ
- by Jagan Ramesh
- September 17, 2025
- 27 Views

ಬೆಂಗಳೂರು: “ಭಾರತೀಯರನ್ನು ಭಾರತೀಯರಂತೆ ನೋಡದೆ, ಆ ಜಾತಿ, ಈ ಜಾತಿ ಎಂದು ನೋಡುತ್ತಿರುವುದೇ ಸಮಸ್ಯೆಯ ಮೂಲವಾಗಿದೆ” ಎಂದು ಮೌಖಿಕವಾಗಿ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, “ಚಾಮುಂಡಿ ದೇವಿಗೆ ಹೂ ಹಾಕುವವರು ಸನಾತನ ಧರ್ಮೀಯರೇ ಆಗಿರಬೇಕು, ಸಾಮಾನ್ಯ ದಲಿತ ಮಹಿಳೆಗೂ ಆ ಅಧಿಕಾರವಿಲ್ಲ” ಎಂಬ ವಿವಾದಾದತ್ಮಕ ಹೇಳಿಕೆ ನೀಡಿದ ಆರೋಪ ಪ್ರಕರಣದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಮಧ್ಯಂತರ ಆದೇಶ ಮಾಡಿದೆ. ಇದೇ ವೇಳೆ, ಪ್ರಕರಣದ ತನಿಖೆಗೆ ಸಹಕರಿಸುವಂತೆ ಯತ್ನಾಳ್ ಅವರಿಗೆ ನ್ಯಾಯಾಲಯ ನಿರ್ದೇಶಿಸಿದೆ.
ಕೊಪ್ಪಳದ ಮಲ್ಲಿಕಾರ್ಜುನ ಪೂಜಾರ ಎಂಬುವರು ನೀಡಿದ್ದ ದೂರಿನ ಅನ್ವಯ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಬಸನಗೌಡ ಪಾಟೀಲ ಯತ್ನಾಳ್ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ನೀಡಿತು.
ಹೇಳಿಕೆ ತಿರುಚಲಾಗಿದೆ:
ಇದಕ್ಕೂ ಮುನ್ನ ಯತ್ನಾಳ್ ಪರ ವಕೀಲ ವೆಂಕಟೇಶ್ ದಳವಾಯಿ ವಾದ ಮಂಡಿಸಿ, ಅರ್ಜಿದಾರರು ನೀಡಿದ್ದಾರೆ ಎನ್ನಲಾದ ಹೇಳಿಕೆಯ ವಿಡಿಯೊ ತುಣುಕನ್ನೊಳಗೊಂಡ ಪೆನ್‌ಡ್ರೈವ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ಮೊಬೈಲ್‌ನಲ್ಲೂ ಅವರ ಹೇಳಿಕೆಯನ್ನು ನ್ಯಾಯಪೀಠ ಪರಿಶೀಲಿಸಬಹುದು. ಯತ್ನಾಳ್ ಹೇಳಿಕೆಯನ್ನು ತಿರುಚಲಾಗಿದೆ, ಅವರ ಹೇಳಿಕೆಯನ್ನು ತಪ್ಪಾಗಿ ಭಾವಿಸಿ, ಪ್ರಕರಣ ದಾಖಲಿಸಲಾಗಿದೆ ಎಂದರು.
ಆಗ ನ್ಯಾಯಪೀಠ, ದಳವಾಯಿ ಮತ್ತು ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ ಅವರ ಸಮ್ಮುಖದಲ್ಲಿ ಯತ್ನಾಳ್ ಅವರು ನೀಡಿದ್ದ ಹೇಳಿಕೆಯನ್ನು ಮೊಬೈಲ್‌ನಲ್ಲಿ ವೀಕ್ಷಿಸಿತು.
ವಾದ ಮುಂದುವರಿಸಿದ ವೆಂಕಟೇಶ್ ದಳವಾಯಿ ಅವರು, ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಟೀಕಿಸುವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದ ಅರ್ಜಿದಾರರು, “ಸನಾತನ ಧರ್ಮದ ಅನುಯಾಯಿಗಳು ಮಾತ್ರ ದಸರಾ ಉದ್ಘಾಟಿಸಬೇಕು. ಒಬ್ಬ ದಲಿತ ಮಹಿಳೆಗೂ ಆ ಅಧಿಕಾರವಿದೆ. ಆದರೆ, ಅನ್ಯ ಧರ್ಮದವರು ಅದನ್ನು ಉದ್ಘಾಟಿಸಲಾಗದು” ಎಂದು ಹೇಳಿದ್ದರು. ಈ ಹೇಳಿಕೆಯನ್ನು ಸನಾತನ ಧರ್ಮಕ್ಕೆ ಸೇರಿದ ವ್ಯಕ್ತಿ ಮಾತ್ರ ದಸರಾ ಉದ್ಘಾಟಿಸಬೇಕು. ದಲಿತ ಸಮುದಾಯಕ್ಕೆ ಸೇರಿದ ಮಹಿಳೆಗೂ ಆ ಅಧಿಕಾರವಿಲ್ಲ ಎಂದು ತಪ್ಪಾಗಿ ವರದಿ ಮಾಡಲಾಗಿದೆ. ಈ ವರದಿ ಆಧರಿಸಿ ದೂರು ದಾಖಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಈ ವಾದವನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಸರ್ಕಾರ ಬಲವಂತದ ಕ್ರಮ ಕೈಗೊಳ್ಳಬಾರದು. ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂದು ಮಧ್ಯಂತರ ಆದೇಶ ನೀಡಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಭಾರತೀಯರನ್ನು ಭಾರತೀಯರಂತೆ ನೋಡಿದಿರುವುದೇ ಸಮಸ್ಯೆ:
ಅರ್ಜಿ ಸಂಬಂಧ ಆದೇಶ ನೀಡಿದ ಬಳಿಕ ನ್ಯಾಯಪೀಠ, ಯಾವುದೇ ರಾಜಕೀಯ ಪಕ್ಷಗಳು ಸಮಾಜದ ಒಂದು ವರ್ಗವನ್ನು ಓಲೈಸುವುದರಿಂದಲೇ ಈ ಎಲ್ಲ ಸಮಸ್ಯೆಗಳು ಉದ್ಭವಿಸುತ್ತವೆ. ಭಾರತೀಯರನ್ನು ಭಾರತೀಯರಂತೆ ಕಾಣದೆ, ಆ ಜಾತಿ, ಈ ಧರ್ಮ ಎಂದು ನೋಡುತ್ತಿರುವುದೇ ಸಮಸ್ಯೆಯ ಮೂಲವಾಗಿದೆ. ಇದು ನಮ್ಮ ದೈನಂದಿನ ಬದುಕಿನ ಮೇಲೂ ಪರಿಣಾಮ ಬೀರುತ್ತಿದೆ. ನಾವಿ ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರದಿಂದ ನುಡಿಯಿತು.
ಇದಕ್ಕೆ ಪ್ರತಿಕ್ರಿಯಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ, ಪ್ರಪಂಚ ಒಂದು ಜಾಗತಿಕ ಗ್ರಾಮವಾಗಿದೆ. ಅಲ್ಲಿ ಸಹಬಾಳ್ವೆ ಅತ್ಯಗತ್ಯವಾಗಿದೆ. ಆದರೆ, ಇಂಥ ವ್ಯಕ್ತಿಗಳು ಸಹಬಾಳ್ವೆಗೆ ಅವಕಾಶವನ್ನೇ ಕೊಡುವುದಿಲ್ಲ. ಮನುಷ್ಯರನ್ನು ಮನುಷ್ಯರು ಎಂದು ಪರಿಗಣಿಸುವುದನ್ನು ಇವರು ಕಲಿಯಬೇಕಿದೆ ಎಂದರು.
ಪ್ರಕರಣವೇನು?
2025ರ ಸೆಪ್ಟೆಂಬರ್ 16ರಂದು ಕೊಪ್ಪಳ ಠಾಣೆಯಲ್ಲಿ ಮಲ್ಲಿಕಾರ್ಜುನ ಪೂಜಾರ ಎಂಬುವರು ದೂರು ದಾಖಲಿಸಿ, ಸೆಪ್ಟೆಂಬರ್ 12ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ್ದ ಬಸನಗೌಡ ಪಾಟೀಲ ಅವರು, “ಚಾಮುಂಡಿ ದೇವಿಗೆ ಹೂ ಹಾಕುವವರು ಸನಾತನ ಧರ್ಮೀಯರೇ ಆಗಿರಬೇಕು, ಸಾಮಾನ್ಯ ದಲಿತ ಮಹಿಳೆಗೂ ಆ ಅಧಿಕಾರವಿಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಫೇಸ್‌ಬುಕ್‌ನಲ್ಲಿ ಗಮನಿಸಿರುವುದಾಗಿ ಆರೋಪಿಸಿದ್ದರು. ದೂರು ಆಧರಿಸಿ, ಪೊಲೀಸರು ಬಸನಗೌಡ ಪಾಟೀಲ ಅವರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಝೀರೋ ಎಫ್‌ಐಆರ್ (ಠಾಣೆಗಳ ವ್ಯಾಪ್ತಿ ಕೇಳದೆ ದಾಖಲಿಸುವ ಎಫ್‌ಐಆರ್) ದಾಖಲಿಸಿದ್ದರು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
Related Articles
Thank you for your comment. It is awaiting moderation.
Comments (0)