ವೃದ್ಧ ಪಾಲಕರು ಪ್ರತ್ಯೇಕ ವಾಸಿಸುತ್ತಿದ್ದ ಮಾತ್ರಕ್ಕೆ ಮಕ್ಕಳ ಅವಲಂಬಿತರಲ್ಲ ಎನ್ನಲಾಗದು – ಹೈಕೋರ್ಟ್
- by Jagan Ramesh
- May 12, 2025
- 367 Views

ಬೆಂಗಳೂರು: ವೃದ್ಧ ಪಾಲಕರು ಪ್ರತ್ಯೇಕಾಗಿವಾಗಿ ಜೀವನ ನಡೆಸುತ್ತಿದ್ದಾರೆ ಎಂದ ಮಾತ್ರಕ್ಕೆ ಅವರು ತಮ್ಮ ಮಕ್ಕಳ ಅವಲಂಬಿತರಲ್ಲ ಎನ್ನಲಾಗದು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ವೃದ್ಧ ಪಾಲಕರಿಗೂ ಪರಿಹಾರ ಘೋಷಿಸಿ ಆದೇಶಿಸಿದೆ. ಜತೆಗೆ, ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಘೋಷಿಸಿದ್ದ 18,93,308 ರೂ. ಪರಿಹಾರ ಮೊತ್ತವನ್ನು 23,05,000 ರೂ. ಗಳಿಗೆ ಹೆಚ್ಚಳ ಮಾಡಿದೆ.
ರಸ್ತೆ ಅಪಘಾತದ ಪ್ರಕರಣವೊಂದರಲ್ಲಿ ಮೃತ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಪರಿಹಾರ ಘೋಷಣೆ ಮಾಡಿದ್ದ ಕೋಲಾರದ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದ (ಎಂಎಸಿಟಿ) ಆದೇಶ ಪ್ರಶ್ನಿಸಿ ಬಜಾಜ್ ಅಲಯಾನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಹಾಗೂ ಪರಿಹಾರ ಮೊತ್ತ ಹೆಚ್ಚಳ ಕೋರಿ ಮೃತರ ವಾರಸುದಾರರು ಹೈಕೋರ್ಟ್ಗೆ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.
ಈ ಎರಡೂ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಮಾ ಕಂಪನಿಯ ಅರ್ಜಿ ವಜಾಗೊಳಿಸಿದೆ. ಮತ್ತೊಂದೆಡೆ, ಮೃತನ ವಾರಸುದಾರರ ಮೇಲ್ಮನವಿಯನ್ನು ಭಾಗಶಃ ಮಾನ್ಯ ಮಾಡಿ ಪರಿಹಾರವನ್ನು 23 ಲಕ್ಷಗಳಿಗೆ ಹೆಚ್ಚಳ ಮಾಡಿರುವ ಹೈಕೋರ್ಟ್, ಪರಿಹಾರ ಮೊತ್ತದಲ್ಲಿ ಶೇ.50 ಪ್ರಮಾಣವನ್ನು ಪತ್ನಿಗೆ, ತಲಾ ಶೇ.15ರಂತೆ ಇಬ್ಬರು ಮಕ್ಕಳಿಗೆ ನೀಡಬೇಕು. ಉಳಿದ ಮೊತ್ತವನ್ನು ಶೇ.10ರಂತೆ ಮೃತನ ತಂದೆ-ತಾಯಿಗೆ ನೀಡಬೇಕು ಎಂದು ವಿಮಾ ಕಂಪನಿಗೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಕೋಲಾರ ತಾಲೂಕಿನ ಅರಬಿಕೊತ್ತನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷರಾಗಿ ಕೆಲಸ ಮಾಡುತ್ತಿದ್ದ ನಾರಾಯಣಸ್ವಾಮಿ 2009ರ ಡಿಸೆಂಬರ್ 24ರಂದು ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ತಮಿಳುನಾಡಿನ ಗೂಡಲೂರು ಮುಖ್ಯರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಮೃತರಾಗಿದ್ದರು. ಆ ಸಂದರ್ಭದಲ್ಲಿ ಅವರು ಮಾಸಿಕ 18 ಸಾವಿರ ರೂ. ವೇತನ ಪಡೆಯುತ್ತಿದ್ದರು.
ನಾರಾಯಣಸ್ವಾಮಿ ವಾರಸುದಾರರು 25 ಲಕ್ಷ ರೂ. ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿದ್ದ ಕೋಲಾರ ಎಂಎಸಿಟಿ, ಮೃತನ ಕುಟುಂಬ ಸದಸ್ಯರಿಗೆ 18,93,308 ರೂ. ಪರಿಹಾರವನ್ನು ವಾರ್ಷಿಕ ಶೇ.6 ಬಡ್ಡಿಯೊಂದಿಗೆ ಪಾವತಿಸುವಂತೆ ವಿಮಾ ಕಂಪನಿಗೆ 2014ರ ನವೆಂಬರ್ನಲ್ಲಿ ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ವಿಮಾ ಕಂಪನಿ ಹಾಗೂ ಪರಿಹಾರದ ಮೊತ್ತ ಹೆಚ್ಚಿಸುವಂತೆ ಕೋರಿ ನಾರಾಯಣಸ್ವಾಮಿ ಕುಟುಂಬದವರು ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಇನ್ಶೂರೆನ್ಸ್ ಕಂಪನಿ ವಾದವೇನು?
ವಿಚಾರಣೆ ವೇಳೆ ವಾದ ಮಂಡಿಸಿದ್ದ ವಿಮಾ ಸಂಸ್ಥೆ ಪರ ವಕೀಲರು, ಮೃತ ನಾರಾಯಣಸ್ವಾಮಿ ಅವರ ಪ್ರಯಾಣಿಸುತ್ತಿದ್ದ ವಾಹನದ (ವಿಮೆಗೊಳಪಟ್ಟ ವಾಹನ) ಚಾಲಕ ಸಂಭವಿಸಬಹುದಾದ ಅಪಘಾತ ತಪ್ಪಿಸುವ ಸಲುವಾಗಿ ತಿರುವು ತೆಗೆದುಕೊಂಡಿದ್ದಾರೆ. ಆಗ ವಾಹನವು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದರಲ್ಲಿ ವಾಹನ ಚಾಲಕನ ನಿರ್ಲಕ್ಷ್ಯವಿಲ್ಲ ಎಂದು ವಾದಿಸಿದ್ದರು.
ಜತೆಗೆ, ಮೃತರ ಪಾಲಕರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಅವರನ್ನು ಮೃತ ವ್ಯಕ್ತಿಯ ಅವಲಂಬಿತರು ಎಂದು ಪರಿಗಣಿಸಲಾಗದು. ಇದಲ್ಲದೆ, ಮೃತ ನಾರಾಯಣಸ್ವಾಮಿ ಅವರ ಮಗನಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ಲಭ್ಯವಾಗಿದೆ. ಇದರಿಂದ, ಮಗನನ್ನೂ ಅವಲಂಬಿತರೆಂದು ಪರಿಗಣಿಸುವ ಅಗತ್ಯವಿಲ್ಲ. ಉದ್ಯೋಗ ದೊರೆತಿರುವ ಕಾರಣ, ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ ಭವಿಷ್ಯದ ಆದಾಯ ನಷ್ಟ ಉಂಟಾಗಿಲ್ಲ. ಈ ಅಂಶಗಳನ್ನು ಪರಿಗಣಿಸುವಲ್ಲಿ ನ್ಯಾಯಾಧಿಕರಣ ವಿಫಲವಾಗಿದ್ದು, ಅದು ಘೋಷಿಸಿರುವ ಪರಿಹಾರ ಮೊತ್ತ ಹೆಚ್ಚಿನ ಪ್ರಮಾಣದ್ದಾಗಿದೆ ಎಂದು ಆಕ್ಷೇಪಿಸಿದ್ದರು.
ಸಂಸ್ಥೆಯ ವಾದ ಒಪ್ಪದ ಕೋರ್ಟ್:
ಇನ್ಶೂರೆನ್ಸ್ ಕಂಪನಿಯ ವಾದ ತಿರಸ್ಕರಿಸಿರುವ ನ್ಯಾಯಪೀಠ, ಅನೇಕ ಸಂದರ್ಭಗಳಲ್ಲಿ ಮಕ್ಕಳು ಉದ್ಯೋಗ ನಿಮಿತ್ತ ಬೇರೆಡೆ ವಾಸಿಸುತ್ತಿದ್ದರೂ, ಪಾಲಕರು ಆ ಮಕ್ಕಳ ಅವಲಂಬಿತರಾಗಿ ತಮ್ಮ ಊರುಗಳಲ್ಲೇ ವಾಸಿಸುತ್ತಿರುತ್ತಾರೆ. ಆದ್ದರಿಂದ, ಮೃತ ವ್ಯಕ್ತಿಯ ಪಾಲಕರು ಆತನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಅವರನ್ನು ಅವಲಂಬಿತರಲ್ಲ ಎಂಬ ವಾದ ಒಪ್ಪಲಾಗದು ಎಂದು ಸ್ಪಷ್ಟವಾಗಿ ಹೇಳಿದೆ.
ಮೃತರ ಮಗನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ದೊರೆತಿರುವುದರಿಂದ ಅವರ ಕುಟುಂಬಕ್ಕೆ ಭವಿಷ್ಯದ ಆದಾಯ ನಷ್ಟವಾಗಿಲ್ಲ. ಈ ಪ್ರಕರಣದಲ್ಲಿ ಮಗನನ್ನು ಮೃತರ ಅವಲಂಬಿತರೆನಿಸಿಕೊಳ್ಳುವುದಿಲ್ಲ ಎನ್ನುವುದು ವಿಮಾ ಸಂಸ್ಥೆಯ ವಾದವಾಗಿದೆ. ಆದರೆ, ಸೆಬಾಸ್ಟಿಯನ್ ಲಾಕ್ರಾ ಹಾಗೂ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್, ಮೃತರ ವಿಮೆ, ಪಿಂಚಣಿ ಮತ್ತು ಗ್ರಾಚ್ಯೂಟಿ ಮೊತ್ತದಲ್ಲಿ ಪರಿಹಾರ ಮೊತ್ತವನ್ನು ಕಡಿತ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ. ಅಪಘಾತ ಸಂಭವಿಸಿದ ದಿನದಂದು ಮಗ ನಾರಾಯಣ ಸ್ವಾಮಿ ಅವರ ಅವಲಂಬಿತರಾಗಿದ್ದರು. 2010ರ ಅಕ್ಟೋಬರ್ 11ರಂದು ಅವರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ದೊರೆತಿದೆ ಎಂದಿರುವ ನ್ಯಾಯಾಲಯ, ಕಂಪನಿಯ ವಾದ ತಳ್ಳಿಹಾಕಿದೆ.
MFA 598/2015
C/W
MFA 761/2015
Related Articles
Thank you for your comment. It is awaiting moderation.
Comments (0)