ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಬಾಕಿ ಇರುವುದೇ ಕೆಎಸ್‌ಬಿಸಿ ಚುನಾವಣೆ ನಡೆಸದಿರಲು ಕಾರಣವೇ?; ಬಿಸಿಐನಿಂದ ಸ್ಪಷ್ಟನೆ ಕೇಳಿದ ಹೈಕೋರ್ಟ್
- by LegalSamachar
- August 14, 2025
- 235 Views

ಬೆಂಗಳೂರು: ವಕೀಲಿಕೆ ಪ್ರಮಾಣಪತ್ರ (Certificate of Practice-COP) ನೀಡುವ ಕುರಿತ ರಿಟ್ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವುದೇ ಕರ್ನಾಟಕ ವಕೀಲರ ಪರಿಷತ್ (ಕೆಎಸ್‌ಬಿಸಿ)ಗೆ ಚುನಾವಣೆ ನಡೆಸದಿರಲು ಕಾರಣವೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಭಾರತೀಯ ವಕೀಲರ ಪರಿಷತ್ (ಬಿಸಿಐ) ಹಾಗೂ ಕೆಎಸ್‌ಬಿಸಿಗೆ ಹೈಕೋರ್ಟ್ ಸೂಚಿಸಿದೆ.
ಕೆಎಸ್‌ಬಿಸಿ ಆಡಳಿತ ಮಂಡಳಿಯ ನಿಗದಿತ 5 ವರ್ಷಗಳ ಅವಧಿ 2023ರ ಜೂನ್‌ನಲ್ಲೇ ಪೂರ್ಣಗೊಂಡಿದ್ದು, ಹಾಲಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಲು ನಿರ್ದೇಶಿಸುವಂತೆ ಕೋರಿ ವಕೀಲ ರೆಹಮತ್ ಉಲ್ಲಾ ಕೊತ್ವಾಲ್ ಸಲ್ಲಿಸಿರುವ ಅರ್ಜಿ ಕುರಿತು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, 2025ರ ಜುಲೈ 31ರಂದು ಬಿಸಿಐ ಹೊರಡಿಸಿರುವ ಸಂವಹನದಲ್ಲಿ ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಲಾಗಿದೆ. ಹೀಗಿರುವಾಗ, ಸಿಒಪಿ ನೀಡುವ ವಿಚಾರವಾಗಿ ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ ಬಾಕಿ ಇರುವುದು ಚುನಾವಣೆ ನಡೆಸದಿರಲು ಒಂದು ಕಾರಣವೇ ಎಂಬ ಬಗ್ಗೆ ಈ ನ್ಯಾಯಾಲಯಕ್ಕೆ ಸ್ಪಷ್ಟೀಕರಣ ಬೇಕಿದೆ. ಆದ್ದರಿಂದ, ಈ ಕುರಿತು ಮುಂದಿನ ವಿಚಾರಣೆ ವೇಳೆ ಪ್ರತಿಕ್ರಿಯಿಸಬೇಕೆಂದು ಬಿಸಿಐ ಹಾಗೂ ಕೆಎಸ್‌ಬಿಸಿಗೆ ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 30ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ, ಕೆಎಸ್‌ಬಿಸಿ ಪರ ವಕೀಲ ಟಿ.ಪಿ. ವಿವೇಕಾನಂದ ವಾದ ಮಂಡಿಸಿ, ಸಿಒಪಿ ವಿತರಣೆಗೆ ಸಂಬಂಧಿಸಿದಂತೆ ಸ್ವೀಕರಿಸಲಾಗಿರುವ ಅರ್ಜಿಗಳಲ್ಲಿ ಅಂದಾಜು 29 ಸಾವಿರ ಅರ್ಜಿಗಳನ್ನು ಇನ್ನೂ ಪರಿಶೀಲನೆಯಲ್ಲಿದೆ. ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೆ ನ್ಯಾಯಪೀಠ, ಸುಮಾರು 29 ಸಾವಿರ ಅರ್ಜಿಗಳನ್ನು ಇನ್ನೂ ಪರಿಶೀಲಿಸಬೇಕಾಗಿದೆಯೇ? ಅದನ್ನು ಆಮೆಗತಿಯಲ್ಲಿ ಪೂರ್ಣಗೊಳಿಸುವಿರೇ ಅಥವಾ ಶರ ವೇಗದಲ್ಲಿ ಮಾಡುವಿರೇ? ಇದೊಂದು ನಿರಂತರ ಪ್ರಕ್ರಿಯೆಯಾಗಿರುತ್ತದೆ. ಈ ಕಾರಣಕ್ಕೆ ಚುನಾವಣೆ ನಡೆಸಬಾರದೇಕೆ ಎಂದು ಪ್ರಶ್ನಿಸಿತು.
ಆಗ ನ್ಯಾಯಾಲಯದಲ್ಲಿ ಹಾಜರಿದ್ದ ಬಿಸಿಐ ಪರ ವಕೀಲರು, ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ರಿಟ್ ಅರ್ಜಿಯ ಬಗ್ಗೆ ನ್ಯಾಯಪೀಠಕ್ಕೆ ತಿಳಿಸಿದರು.
ಅರ್ಜಿದಾರರ ಮನವಿ ಏನು?
ಕೆಎಸ್‌ಬಿಸಿ ಆಡಳಿತ ಮಂಡಳಿಯ ನಿಗದಿತ 5 ವರ್ಷದ ಅವಧಿ 2023ರ ಜೂನ್‌ನಲ್ಲೇ ಪೂರ್ಣಗೊಂಡಿದೆ. ಆದ್ದರಿಂದ, ವಕೀಲರ ಕಾಯ್ದೆ 1961ರ ಸೆಕ್ಷನ್ 8ರಡಿ ಕೆಎಸ್‌ಬಿಸಿಯಲ್ಲಿ ಕಾನೂನು, ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಕೂಡಲೇ ಚುನಾವಣೆ ನಡೆಸಬೇಕು. ಅದಕ್ಕೆ ವೇಳಾಪಟ್ಟಿಯನ್ನು ಪ್ರಕಟಿಸುವಂತೆ ಕೋರಿ 2025ರ ಜನವರಿ 7ರಂದು ನೀಡಿರುವ ಮನವಿಯನ್ನು ಪರಿಗಣಿಸುವಂತೆ ಬಿಸಿಐಗೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.
ಅವಧಿ ಮುಗಿದ ನಂತರ ಚುನಾವಣೆ ನಡೆಸುವ ಬದಲು ಹಾಲಿ ಆಡಳಿತ ಮಂಡಳಿಯ ಅವಧಿಯನ್ನು ಮುಂದುವರಿಸುವ ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡಿದ್ದು, ಅದು ವಕೀಲರ ಕಾಯ್ದೆಗೆ ವಿರುದ್ಧವಾಗಿದೆ. ಆದ್ದರಿಂದ, ಹಾಲಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಲು ಬಿಸಿಐಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
Related Articles
Thank you for your comment. It is awaiting moderation.
Comments (0)