ಕುಟುಂಬ ಕಲಹ; ನಟಿ ಕಾವ್ಯಾ ಗೌಡ ದಂಪತಿ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯಾ ಗೌಡ ಮತ್ತವರ ಪತಿ ಸೋಮಶೇಖರ್‌ ಹಾಗೂ ಕಾವ್ಯಾ ಸಹೋದರಿ ಭವ್ಯಾ ಗೌಡ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಹಾಗೂ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ಎಫ್ಐಆರ್ ರದ್ದುಕೋರಿ ಕಾವ್ಯಾ ಗೌಡ, ಸೋಮಶೇಖರ್ ಹಾಗೂ ಭವ್ಯಾ ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರಕರಣದ ಮುಂದಿನ ತನಿಖೆಗೆ ತಡೆ ನೀಡಿತಲ್ಲದೆ, ಪ್ರತಿವಾದಿಗಳಾದ ರಾಮಮೂರ್ತಿ ನಗರ ಪೊಲೀಸರು ಹಾಗೂ ಪ್ರೇಮಾ (ದೂರುದಾರೆ) ಅವರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮಾರ್ಚ್ 5ಕ್ಕೆ ಮುಂದೂಡಿತು.

ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪ್ರಸ್ತುತ ಎಫ್‌ಐಆರ್ ಕಾವ್ಯಾ ಗೌಡ ಪತಿಯ ಸಹೋದರನ ಪತ್ನಿ ಪ್ರೇಮಾ ದಾಖಲಿಸಿರುವ ಪ್ರತಿದೂರು ಅಥವಾ ಕೌಂಟರ್ ಕೇಸ್ ಆಗಿದೆ. ಕಾವ್ಯಾ ಗೌಡ ಅವರು ಕನ್ನಡ ಚಿತ್ರರಂಗದ ನಟಿಯಾಗಿದ್ದು, ಮಾಧ್ಯಮಗಳಲ್ಲಿ ಈ ವಿಷಯವನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಅಸಲಿಗೆ ನಡೆದ ವಿಷಯವೇನೆಂದರೆ, ಕಾವ್ಯಾ ಅವರ 2 ವರ್ಷದ ಮಗುವಿನ ಮೇಲೆ ಪ್ರೇಮಾ ಹಲ್ಲೆ ನಡೆಸಿದ್ದಾರೆ. ಅಲ್ಲಿಂದ ಶುರುವಾಗಿ ಬಳಿಕ ಆಸ್ತಿ ವಿವಾದಕ್ಕೆ ತಿರುಗಿದೆ. ಆ ನಂತರ 25 ಜನ ಕಾವ್ಯಾ ಅವರ ಮನೆಗೆ ನುಗ್ಗಿದ್ದಾರೆ. ಈ ಸಂಬಂಧ ಸಿಸಿ ಕ್ಯಾಮರಾ ದೃಶ್ಯಾವಳಿಗಳೂ ಇವೆ ಎಂದು ತಿಳಿಸಿದರು.

ದೂರುದಾರೆ ಪ್ರೇಮಾ ಅವರ ಕುಮ್ಮಕ್ಕಿನಿಂದ ಇವೆಲ್ಲವೂ ನಡೆದಿದೆ. ಕಾವ್ಯಾ ಮೇಲೆ ಹಲ್ಲೆ ನಡೆಸಿ, ಸೋಮಶೇಖರ್ ಬೆನ್ನಿಗೆ ಚಾಕುವಿನಿಂದ ಇರಿಯಲಾಗಿದೆ. ನಂತರ ಸೋಮಶೇಖರ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಾವ್ಯಾ ದೂರು ನೀಡಿದ ಎರಡೂವರೆ ಗಂಟೆಯ ನಂತರ ನಮ್ಮ ಕಕ್ಷಿದಾರರೇ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪ್ರತಿ ದೂರು ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ದೂರುದಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವುದು ಈ ಪ್ರಕರಣದ ಆರೋಪವಾಗಿದೆ. ಆದರೆ, ವಾಸ್ತವದಲ್ಲಿ ಇದು ವಿರುದ್ಧವಾಗಿ ನಡೆದಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ. 2026ರ ಜನವರಿ 26ರಂದು ಕುಟುಂಬದ ಸದಸ್ಯರ ನಡುವಿನ ಜಗಳದಲ್ಲಿ ದೂರುದಾರರೇ ಅರ್ಜಿದಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಮಾತಿನ ಚಕಮಕಿಯು ಹಲ್ಲೆಗೆ ಕಾರಣವಾಗಿದೆ ಎಂದು ತಿಳಿಸಿರುವ ವಕೀಲರು ಅದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಹಾಜರುಪಡಿಸಿದ್ದಾರೆ ಎಂದು ಹೇಳಿದೆ.

ಎರಡನೇ ಅರ್ಜಿದಾರರಾದ ಪತಿ ಸೋಮಶೇಖರ್ ಐಸಿಯುನಲ್ಲಿ ಚಿಕಿತ್ಸೆ ಪಡೆದು ನಂತರ ಮನೆಗೆ ಮರಳಿದ್ದಾರೆ. ಅರ್ಜಿದಾರರು ದಾಖಲಿಸಿರುವ ದೂರಿಗೆ ಪ್ರತಿಯಾಗಿ ಪ್ರಸ್ತುತ ದೂರು ದಾಖಲಿಸಲಾಗಿದೆ ಎಂದು ವಕೀಲರು ವಾದಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ, ಮುಂದಿನ ವಿಚಾರಣೆಯವರೆಗೆ ಅರ್ಜಿದಾರರ ವಿರುದ್ಧದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ ಎಂದು ನ್ಯಾಯಪೀಠ ಮಧ್ಯಂತರ ಆದೇಶ ಮಾಡಿದೆ.

ಪ್ರಕರಣದ ಹಿನ್ನೆಲೆ:
ಕಿರುತೆರೆ ನಟಿ ಕಾವ್ಯಾ ಗೌಡ ಮತ್ತವರ ಪತಿ ಸೋಮಶೇಖರ್‌ ಮೇಲೆ ಕುಟುಂಬ ಸದಸ್ಯರು ಕೌಟುಂಬಿಕ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ರಾಮಮೂರ್ತಿನಗರ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿತ್ತು. ಸೋಮಶೇಖರ್‌ ಮತ್ತು ಅವರ ಅಣ್ಣ ನಂದೀಶ್‌ಕುಮಾರ್‌, ಕಲ್ಕೆರೆ ಬಳಿಯ ಎನ್‌ಆರ್‌ಐ ಲೇಔಟ್‌ನ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದಾರೆ. ಕೌಟುಂಬಿಕ ಕಾರಣಕ್ಕೆ ಸೋಮಶೇಖರ್‌ – ಕಾವ್ಯಾ ಗೌಡ ದಂಪತಿ ಹಾಗೂ ನಂದೀಶ್‌ ಕುಮಾರ್‌ – ಪ್ರೇಮಾ ದಂಪತಿ ಮಧ್ಯೆ ಜಗಳವಾಗಿತ್ತು. ಬಳಿಕ ಕಾವ್ಯಾ ಗೌಡ ಮತ್ತು ಪ್ರೇಮಾ ಪ್ರತ್ಯೇಕ ದೂರು ನೀಡಿದ್ದು, ದೂರು ಹಾಗೂ ಪ್ರತಿ ದೂರು ದಾಖಲಿಸಿಕೊಂಡು ಎರಡೂ ಕಡೆಯವರ ವಿಚಾರಣೆ ನಡೆಸಲಾಗಿದೆ.

ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷ‌ನ್‌ಗಳಾದ 115(1) (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 118(1) (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು ಅಥವಾ ಗಂಭೀರ ಹಾನಿ ಉಂಟು ಮಾಡುವುದು), 3(5) (ಸಾಮಾನ್ಯ ಉದ್ದೇಶ), 351(2) (ಕ್ರಿಮಿನಲ್‌ ಬೆದರಿಕೆ), 352 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಅಪರಾಧಗಳಿಗಾಗಿ ದಾಖಲಾಗಿರುವ ಎಫ್‌ಐಆರ್‌ ಮತ್ತು ದೂರು ರದ್ದುಪಡಿಸುವಂತೆ ಕೋರಿ ಕಾವ್ಯಾ, ಸೋಮಶೇಖರ್ ಹಾಗೂ ಭವ್ಯಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

 

Related Articles

Comments (0)

Leave a Comment