ಬೇಡಗಂಪಣ ಸಮುದಾಯಕ್ಕೆ ಮಾತ್ರ ಮಲೆ ಮಹದೇಶ್ವರಸ್ವಾಮಿ ಎಣ್ಣೆ ಮಜ್ಜನ ಅವಕಾಶ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಮಲೆ ಮಹದೇಶ್ವರಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ಮಾಡುವ ಅವಕಾಶವನ್ನು ಸ್ಥಳೀಯ ಬೇಡಗಂಪಣ ಸಮುದಾಯಕ್ಕೆ ಮಾತ್ರ ಕಲ್ಪಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಮಲೆ‌ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜು ಸ್ವಾಮಿ ಎಂಬುವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ ಪ್ರಸಾದ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾಗಿರುವ ರಾಜ್ಯ ಕಂದಾಯ (ಮುಜರಾಯಿ) ಇಲಾಖೆ ಕಾರ್ಯದರ್ಶಿ, ಚಾಮರಾಜನಗರದ ಮುಜರಾಯಿ ಮತ್ತು ಹಿಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು, ಮೈಸೂರು ಜಿಲ್ಲಾಧಿಕಾರಿ, ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಇತರ ಖಾಸಗಿ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ಮನವಿ ಏನು?
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ಮಾಡುವ ಅವಕಾಶ ಕುರಿತ ವಿವಾದದ ವಿಚಾರಣಾ ಪ್ರಕ್ರಿಯೆಯು ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮುಂದೆ 2018ರಿಂದ ನಡೆಯುತ್ತಿದೆ. ಮಹದೇಶ್ವರಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ಮಾಡುವ ಅವಕಾಶವನ್ನು ಸ್ಥಳೀಯ ಬೇಡಗಂಪಣ ಸಮುದಾಯಕ್ಕೆ ಕಲ್ಪಿಸಲಾಗಿದೆ. ಉಪ್ಪಾರರಿಗೆ ಕೇವಲ ಆಹಾರ ಸಾಮಗ್ರಿ ಒದಗಿಸಲು ಅನುಮತಿ ನೀಡಿದೆ. ಎಣ್ಣೆಮಜ್ಜನ ಸೇವೆಗೆ ಅನುಮತಿ ನೀಡಬೇಕು ಎಂದು ಕೋರಿ ಉಪ್ಪಾರ ಸಮುದಾಯದವರ ಮನವಿಯನ್ನು ಪರಿಗಣಿಸಿಲ್ಲ. ಈ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿರುವ ಅರ್ಜಿದಾರರು, ಪ್ರಕರಣ ಸಂಬಂಧ ಮಲೆ ಮಹದೇಶ್ವರ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಮುಂದಿರುವ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

Related Articles

Comments (0)

Leave a Comment