ಸಿ.ಕೆ. ರಾಮಮೂರ್ತಿ ಆಯ್ಕೆ ಅಸಿಂಧು ಕೋರಿದ ಅರ್ಜಿ; ಮಾರ್ಚ್ 2ರಿಂದ ಪ್ರತಿದಿನ ವಿಚಾರಣೆ ನಡೆಸಲಿರುವ ಹೈಕೋರ್ಟ್
- by Prashanth Basavapatna
- February 13, 2026
- 9 Views
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ (2023) ಬೆಂಗಳೂರಿನ ಜಯನಗರ ಕ್ಷೇತ್ರದಿಂದ ಬಿಜೆಪಿಯ ಸಿ.ಕೆ. ರಾಮಮೂರ್ತಿ ಅವರ ಆಯ್ಕೆ ಅಸಿಂಧುಗೊಳಿಸಲು ಕೋರಿ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಸೌಮ್ಯಾ ರೆಡ್ಡಿ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ಮಾರ್ಚ್ 2ರಿಂದ ಪ್ರತಿದಿನ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ತಿಳಿಸಿದೆ.
ಸಿ.ಕೆ. ರಾಮಮೂರ್ತಿ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಿ ಚುನಾವಣಾ ಆಯೋಗ ಪ್ರಕಟಿಸಿರುವ ಫಲಿತಾಂಶ ರದ್ದುಪಡಿಸುವಂತೆ ಹಾಗೂ 827 ಅಂಚೆ ಮತಗಳ ಮರು ಎಣಿಕೆ ಮಾಡಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಸೌಮ್ಯಾ ರೆಡ್ಡಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸಿ.ಕೆ. ರಾಮಮೂರ್ತಿ ಪರ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನಿರ್ಧರಿಸಬೇಕಾಗಿರುವ ವಿಚಾರಗಳ (ವಿವಾದಾಂಶಗಳು) ಕರಡು ಪ್ರತಿಯನ್ನು ಸಲ್ಲಿಸಲು ತಮಗೆ ಕಾಲಾವಕಾಶ ನೀಡುವಂತೆ ಕೋರಿದರು.
ಇದಕ್ಕೆ ಸೌಮ್ಯಾ ರೆಡ್ಡಿ ಪರ ವಕೀಲರು, ನ್ಯಾಯಾಲಯ ಹಲವು ಬಾರಿಗೆ ಕಾಲಾವಕಾಶ ನೀಡಿದ ಹೊರತಾಗಿಯೂ ಸಿ.ಕೆ. ರಾಮಮೂರ್ತಿ ಅವರು ಕರಡು ವಿವಾದಾಂಶಗಳ ಪ್ರತಿ ಸಲ್ಲಿಸದೆ ಕಾಲ ದೂಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ವಾದ ಆಲಿಸಿದ ನ್ಯಾಯಪೀಠ, ಸಿ.ಕೆ. ರಾಮಮೂರ್ತಿ ಅವರು ಫೆಬ್ರವರಿ 18ರೊಳಗೆ ಕರಡು ವಿವಾದಾಂಶಗಳನ್ನು ಸಲ್ಲಿಸಬೇಕು. ಇದು ಅವರಿಗೆ ನೀಡಲಾಗುತ್ತಿರುವ ಕೊನೆಯ ಅವಕಾಶವಾಗಿದೆ. ಹೆಚ್ಚು ಸಮಯ ಅರ್ಜಿ ವಿಚಾರಣೆ ಬಾಕಿ ಉಳಿಸಿಕೊಳ್ಳಲು ಆಗುವುದಿಲ್ಲ. ತ್ವರಿತವಾಗಿ ಚುನಾವಣಾ ತಕರಾರು ಅರ್ಜಿಗಳನ್ನು ಇತ್ಯರ್ಥಪಡಿಸಲು ಸುಪ್ರೀಂಕೋರ್ಟ್ ಈಗಾಗಲೇ ನಿರ್ದೇಶನ ನೀಡಿದೆ. ಆದ್ದರಿಂದ, ಮಾರ್ಚ್ 2ರಿಂದ ಅರ್ಜಿಯನ್ನು ಪ್ರತಿದಿನ ವಿಚಾರಣೆ ನಡೆಸಿ, ಒಂದು ತಿಂಗಳಲ್ಲಿ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)