ಸೋನು ನಿಗಮ್ ವಿರುದ್ಧ ಅಂತಿಮ ತನಿಖಾ ವರದಿ ಸಲ್ಲಿಕೆಗೆ ಹೈಕೋರ್ಟ್ ತಡೆ; ಕನ್ನಡಿಗರ ಭಾವನೆಗೆ ಧಕ್ಕೆ ತಂದ ಪ್ರಕರಣ
- by Jagan Ramesh
- May 15, 2025
- 71 Views

ಬೆಂಗಳೂರು: ಸಂಗೀತ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದ್ದನ್ನು ಪಹಲ್ಗಾಮ್ ದಾಳಿಗೆ ಹೋಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಗಾಯಕ ಸೋನು ನಿಗಮ್ ವಿರುದ್ಧದ ತನಿಖೆಯ ಅಂತಿಮ ವರದಿ ಸಲ್ಲಿಸುವ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ.
ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಸೋನು ನಿಗಮ್ ಸಲ್ಲಿಸಿರುವ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.
ಇದೇ ವೇಳೆ, ಅರ್ಜಿದಾರ ಸೋನು ನಿಗಮ್ ವಿರುದ್ಧ ಪ್ರಕರಣ ಸಂಬಂಧ ಬಲವಂತದ ಕ್ರಮ ಜರಗಿಸಬಾರದು ಎಂದು ತನಿಖಾಧಿಕಾರಿಗಳಿಗೆ ನ್ಯಾಯಪೀಠ ಸೂಚನೆ ನೀಡಿದೆ.
ಇದಕ್ಕೂ ಮುನ್ನ ಸೋನು ನಿಗಮ್ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಒರ್ವ ಸೆಲೆಬ್ರಿಟಿಯಾಗಿದ್ದು, ತನಿಖೆಗಾಗಿ ಪೊಲೀಸರ ಮುಂದೆ ಖುದ್ದು ಹಾಜರಾದಲ್ಲಿ ಮತ್ತೆ ಹೈಡ್ರಾಮಾ ನಡೆಯುವ ಸಾಧ್ಯತೆಯಿದೆ. ಆದ್ದರಿಂದ, ಆನ್‌ಲೈನ್ ಮೂಲಕ ಅಥವಾ ಲಿಖಿತವಾಗಿ ಹೇಳಿಕೆ ದಾಖಲಿಸಲು ಅರ್ಜಿದಾರರಿಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.
ಈ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, ಅರ್ಜಿದಾರರ ಹೇಳಿಕೆಯಿಂದ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿದೆ. ಆದ್ದರಿಂದ, ಅವರನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಆಗ ಮಾತ್ರ ಯಾವ ಉದ್ದೇಶದಿಂದ ಆ ರೀತಿಯ ಹೇಳಿಕೆ ನೀಡಿದರು ಎಂಬುದನ್ನು ತಿಳಿಯಲು ಸಾಧ್ಯ. ತನಿಖಾಧಿಕಾರಿಗಳು ಮಹಜರು ಪ್ರಕ್ರಿಯೆ ನಡೆಸಬೇಕಿದೆ. ಸೋನು ನಿಗಮ್ ವಿಚಾರಣೆಗೆ ಹಾಜರಾದರೆ ಭದ್ರತೆ ಕಲ್ಪಿಸುವುದು ನಮ್ಮ (ಪೊಲೀಸರ) ಕರ್ತವ್ಯ. ಆದ್ದರಿಂದ, ಅವರು ಖುದ್ದು ಹಾಜರಾಗಲಿ ಎಂದರು.
ಅರ್ಜಿದಾರರು ನೀಡಿರುವ ಹೇಳಿಕೆ ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಗೊತ್ತಾಗಿದೆ. ಅವರ ವಿರುದ್ದ ಯಾವ ತನಿಖೆ ಮಾಡಬೇಕು, ಏನು ಮಹಜರ್ ಮಾಡಬೇಕು, ವಿಡಿಯೊ ಕಾನ್ಫರೆನ್ಸ್ ಮೂಲಕ ಅರ್ಜಿದಾರರ ಹೇಳಿಕೆ ದಾಖಲಿಸಿಕೊಳ್ಳಲು ಸಮಸ್ಯೆ ಇದೆಯೇ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ, ಸೋನು ನಿಗಮ್ ಅವರನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಒಳಪಡಿಸಬಹುದು. ಇಲ್ಲವೇ, ಗಾಯಕನ ವೆಚ್ಚದಲ್ಲಿ ತನಿಖಾಧಿಕಾರಿಗಳು ಅವರಿರುವ ಸ್ಥಳಕ್ಕೇ ತೆರಳಿ ವಿಚಾರಣೆಗೊಳಪಡಿಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಬಹುದು ಎಂದು ಸೂಚಿಸಿತು.
ಉದ್ದೇಶಪೂರ್ವಕ ಕೃತ್ಯವಲ್ಲ:
ವಿಚಾರಣೆ ವೇಳೆ ಸೋನು ನಿಗಮ್ ಪರ ವಕೀಲರು, ಯಾರಿಗೂ ನೋವುಂಟು ಮಾಡುವ ಉದ್ದೇಶ ಅರ್ಜಿದಾರರಿಗೆ ಇರಲಿಲ್ಲ. ಕನ್ನಡ ಹಾಡು ಹಾಡುವಂತೆ ಕೆಲವರು ಒತ್ತಾಯಿಸಿದಕ್ಕೆ ಪ್ರತಿಕ್ರಿಯಿಸುವಾಗ ಈ ಘಟನೆ ನಡೆದಿದೆ. ದೂರುದಾರರು ಘಟನಾ ಸ್ಥಳದಲ್ಲಿರಲಿಲ್ಲ. ಸಾಮಾಜಿಕ ಮಾಧ್ಯಮಗಳ ವರದಿ ಆಧರಿಸಿ ದೂರು ದಾಖಲಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಸರ್ಕಾರದ ಪರ ವಕೀಲರು, ಅರ್ಜಿದಾರರಿಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಇ-ಮೇಲ್ ಹಾಗೂ ಸ್ಪೀಡ್ ಪೋಸ್ಟ್ ಮೂಲಕ ನೋಟಿಸ್ ನೀಡಲಾಗಿದೆ. ಆದರೆ, ಅವರು ವಿಚಾರಣೆಗೆ ಹಾಜರಾಗಲಿಲ್ಲ. ಘಟನೆ ಸಂಬಂಧಿಸಿದಂತೆ ವಿರೋಧ ವ್ಯಕ್ತವಾದರೂ, ಮೊದಲಿಗೆ ತನ್ನ ನಡೆಯನ್ನು ಸಮರ್ಥಿಸಿಕೊಂಡರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಷೇಧ ಹೇರಿದ ಬಳಿಕ ಕ್ಷಮೆಯಾಚಿಸಿದರು. ವಿಚಾರಣೆಗೆ ಹಾಜರಾದರೆ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸುವುದಿಲ್ಲ ಎಂದು ಭರವಸೆ ನೀಡಿದರು.
Related Articles
Thank you for your comment. It is awaiting moderation.
Comments (0)