ಬಿ.ವೈ. ವಿಜಯೇಂದ್ರ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿದ ಹೈಕೋರ್ಟ್; ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಕುರಿತು ಆಕ್ಷೇಪಾರ್ಹ ಅನಿಮೇಟೆಡ್ ವಿಡಿಯೋ ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಮುಂದಿನ ಪ್ರಕ್ರಿಯೆಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಹೈಗ್ರೌಂಡ್ಸ್ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದು ಕೋರಿ ಬಿ.ವೈ. ವಿಜಯೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರ ಹಾಗೂ ದೂರುದಾರ ರಮೇಶ್ ಬಾಬು ಅವರಿಗೆ ನೋಟಿಸ್ ಜಾರಿಗೊಳಿಸಿತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ, ವಿಚಾರಣೆಯನ್ನು ಸೆಪ್ಟಂಬರ್ 19ಕ್ಕೆ ಮುಂದೂಡಿದ ಪೀಠ, ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧದ ಪ್ರಕರಣದ ಮುಂದಿನ ಪ್ರಕ್ರಿಯೆಗಳಿಗೆ ತಡೆ ನೀಡಿ ಮಧ್ಯಂತರ ಆದೇಶ ಮಾಡಿತು.

ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ವಿಜಯೇಂದ್ರ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿ, ಅರ್ಜಿದಾರರು ರಾಜ್ಯಧ್ಯಕ್ಷರಾಗಿರುವ ಪಕ್ಷದ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನೀತಿಯನ್ನಷ್ಟೇ ಟೀಕಿಸಿ ಟ್ವೀಟ್ ಮಾಡಲಾಗಿತ್ತು. ಇದು ಅಪಾರಾಧ ಎಸಗಿದಂತಾಗುವುದಿಲ್ಲ. ರಾಜಕೀಯ ದ್ವೇಷದ ಹಿನ್ನಲೆಯಲ್ಲಿ ಒಂದೇ ಆರೋಪದ ಮೇಲೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಈ ರೀತಿ ಒಂದೇ ಆರೋಪಕ್ಕೆ ಎರಡು ಎಫ್ಐಆರ್ ಹಾಕಿರುವುದು ಕಾನೂನುಬಾಹಿರವಾಗಿದೆ. ಮೇಲಾಗಿ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 505(2) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 125 (ಸಮುದಾಯಗಳ ನಡುವೆ ದ್ವೇಷ ಮೂಡಿಸುವ, ವೈರತ್ವ ಪ್ರಚೋದಿಸುವ) ಅನ್ವಯವಾಗುವುದಿಲ್ಲ. ಈಗಾಗಲೇ ಅರ್ಜಿದಾರರ ವಿರುದ್ಧದ ಒಂದು ಎಫ್‌ಐಆರ್‌ಗೆ ನ್ಯಾಯಾಲಯ ತಡೆ ನೀಡಿದೆ. ಎರಡನೇ ಎಫ್‌ಐಆರ್‌ಗೆ ತಡೆ ನೀಡದಿದ್ದರೆ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ. ಆದ್ದರಿಂದ, ಎರಡನೇ ಎಫ್‌ಐಆರ್ ಕುರಿತ ಮುಂದಿನ ಪ್ರಕ್ರಿಯೆಗಳಿಗೆ ತಡೆ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಪ್ರಕರಣವೇನು?
ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಹಾಗೂ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ, ಒಬಿಸಿ ಮತ್ತು ಮುಸ್ಲಿಂ ಮೀಸಲಾತಿ ಕುರಿತ ಅನಿಮೇಟೆಡ್ ವಿಡಿಯೋ ಒಂದನ್ನು ಕರ್ನಾಟಕ ಬಿಜೆಪಿ ಘಟಕ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತ್ತು. ಅದರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮೇತರರ ಆಸ್ತಿಯನ್ನು ಕಿತ್ತು, ಮುಸ್ಲಿಂ ಸಮುದಾಯಕ್ಕೆ ನೀಡುತ್ತದೆ ಎಂಬಂತೆ ತೋರಿಸಲಾಗಿತ್ತು.

ಇದರಿಂದ, ಸಮುದಾಯಗಳ ಮಧ್ಯೆ ದ್ವೇಷ ಸೃಷ್ಟಿಸಲು ಯತ್ನಿಸಿದ ಆರೋಪದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿರುದ್ಧ ಕೆಪಿಸಿಸಿ ಮಾಧ್ಯಮ-ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಹಾಗೂ ಚುನಾವಣಾಧಿಕಾರಿಗಳು ನಗರದ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅದನ್ನು ಆಧರಿಸಿ ವಿಜಯೇಂದ್ರ ಮತ್ತಿತರರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ವಿಡಿಯೋದಲ್ಲಿ ಏನಿತ್ತು?
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಎಕ್ಸ್ ಖಾತೆಯಲ್ಲಿ “ಎಚ್ಚರ..ಎಚ್ಚರ..ಎಚ್ಚರ..” ಎಂಬ ತಲೆ ಬರಹದಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿತ್ತು. ಇದರಲ್ಲಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಕಾರ್ಟೂನ್‌ಗಳಿದ್ದು, ಇಬ್ಬರೂ ಎಸ್‌ಸಿ,ಎಸ್‌ಟಿ, ಒಬಿಸಿ ಎಂದು ಬರೆದ ಮೊಟ್ಟೆ ಬಳಿ ಮುಸ್ಲಿಂ ಎಂದು ಬರೆದ ದೊಡ್ಡ ಮೊಟ್ಟೆಯನ್ನು ತಂದು ಇಡುತ್ತಾರೆ. ಈ ಮೊಟ್ಟೆಯಿಂದ ಹೊರಬಂದ ಮುಸ್ಲಿಂ ಎಂದು ಬರೆದ ಹಕ್ಕಿಗೆ ರಾಹುಲ್ ಗಾಂಧಿ ಆಹಾರವನ್ನು ತಂದು ಸುರಿಯುವುದು, ಬಳಿಕ ಎಸ್‌ಸಿ, ಎಸ್‌ಟಿ, ಒಬಿಸಿ ಎಂದು ಬರೆದ ಹಕ್ಕಿಯನ್ನು ಮುಸ್ಲಿಂ ಎಂದು ಬರೆದ ಹಕ್ಕಿ ಹೊರದಬ್ಬುವ ರೀತಿ ತೋರಿಸಲಾಗಿತ್ತು.

Related Articles

Comments (0)

Leave a Comment