ಅಡ್ಡಂಡ ಕಾರ್ಯಪ್ಪ ವಿರುದ್ಧದ ಮಾನನಷ್ಟ ಮೊಕದ್ದಮೆ; ವಿಚಾರಣಾ ಕೋರ್ಟ್ ವಿಧಿಸಿದ್ದ ಶಿಕ್ಷೆ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯಲ್ಲಿ ರಂಗಾಯಣದ ಮಾಜಿ ನಿರ್ದೇಶಕ ಹಾಗೂ ವೀರನಾಡು ಕನ್ನಡ ವಾರಪತ್ರಿಕೆ ಸಂಪಾದಕ ಅಡ್ಡಂಡ ಕಾರ್ಯಪ್ಪಗೆ ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಡ್ಡಂಡ ಕಾರ್ಯಪ್ಪ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ರಾಜೇಶ್‌ ರೈ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ಆದೇಶವೇನು?
ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 499 (ಮಾನಹಾನಿ), 500 (ಮಾನಹಾನಿಗೆ ಶಿಕ್ಷೆ) ಅಡಿ 7 ದಿನ ಸಾದಾ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ಪಾವತಿಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆಯಿಂದ ಅರ್ಜಿದಾರರನ್ನು ಖುಲಾಸೆಗೊಳಿಸಲಾಗಿದೆ. ಜತೆಗೆ, ಅರ್ಜಿದಾರರು ಸಲ್ಲಿಸಿದ್ದ ಜಾಮೀನು ಬಾಂಡ್‌ ರದ್ದಾಗಲಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಐಪಿಸಿ ಸೆಕ್ಷನ್‌ 499ರ ಅಡಿ ಮಾನನಷ್ಟ ಆರೋಪ ಅನ್ವಯವಾಗಬೇಕಾದರೆ ಅರ್ಜಿದಾರರು ತಮ್ಮ ಲೇಖನದಲ್ಲಿ ದೂರು ನೀಡಿರುವ ವ್ಯಕ್ತಿಯನ್ನು ಅವಹೇಳನ ಮಾಡಿರಬೇಕು. ಒಂದೊಮ್ಮೆ ದೂರುದಾರರು ತಮ್ಮ ಘನತೆಗೆ ಕುಂದು ತರುವಂಥ ಲೇಖನ ಪ್ರಕಟಿಸಲಾಗಿದೆ ಎಂದು ಆರೋಪಿಸಿದ್ದರೆ, ಆ ಆರೋಪ ಸಾಬೀತುಪಡಿಸುವಂಥ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಹಾಲಿ ಪ್ರಕರಣದಲ್ಲಿ ದೂರುದಾರರು ಖಾಸಗಿ ದೂರು ಸಲ್ಲಿಸಿದ್ದಾರೆ.ಆದರೆ, ಸಾಕ್ಷ್ಯದ ಹೇಳಿಕೆಯಲ್ಲಿ ಐಪಿಸಿ ಸೆಕ್ಷನ್‌ 499 ಅನ್ವಯವಾಗುವಂತಹ ಅಂಶಗಳು ಕಂಡು ಬಂದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದಲ್ಲಿ ದೂರುದಾರರನ್ನು ಹೊರತುಪಡಿಸಿ, ಇತರ ಯಾವ ಸಾಕ್ಷ್ಯಗಳನ್ನೂ ವಿಚಾರಣೆಗೆ ಒಳಪಡಿಸಿಲ್ಲ. ಆದರೆ, ವಿಚಾರಣಾ ನ್ಯಾಯಾಲಯ ಮತ್ತು ಮೊದಲ ಮೇಲ್ಮನವಿ ಪ್ರಾಧಿಕಾರ ಈ ಅಂಶಗಳನ್ನು ಪರಿಗಣಿಸಿಲ್ಲ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅಡ್ಡಂಡ ಕಾರ್ಯಪ್ಪ ಅವರ ಶಿಕ್ಷೆ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣವೇನು?
ವೀರನಾಡು ಕನ್ನಡ ವಾರಪತ್ರಿಕೆ ಸಂಪಾದಕ ಅಡ್ಡಂಡ ಕಾರ್ಯಪ್ಪ 2008ರ ಸೆಪ್ಟೆಂಬರ್ 1ರಂದು ತಮ್ಮ ಪತ್ರಿಕೆಯಲ್ಲಿ ಅನ್ಯ ಧರ್ಮಗಳ ಜನರ ನಡುವೆ ದ್ವೇಷ ಬಿತ್ತುವಂತಹ ಲೇಖನ ಪ್ರಕಟಿಸಿದ್ದಾರೆ. ಸೆಪ್ಟೆಂಬರ್ 15ರಂದು ಅಡ್ಡಂಡ ಕಾರ್ಯಪ್ಪ ಮತ್ತೊಂದು ಆಕ್ಷೇಪಾರ್ಹ ಸಂಪಾದಕೀಯ ಬರೆದಿದ್ದಾರೆ. ಲೇಖನದಿಂದ ಸಾರ್ವಜನಿಕ ಜೀವನದಲ್ಲಿ ತಮ್ಮ ಘನತೆಗೆ ಕುಂದಾಗಿದೆ ಮತ್ತು ತೀವ್ರ ಮಾನಸಿಕ ಆಘಾತವಾಗಿದೆ. ಆದ್ದರಿಂದ, ಕಾರ್ಯಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ಕ್ರಮ ಜರುಗಿಸಬೇಕು ಎಂದು ಕೋರಿ ಸಾಮಾಜಿಕ ಹೋರಾಟಗಾರ ಪಿಲಿಫೋಸ್‌ ಮ್ಯಾಥ್ಯೂ ಖಾಸಗಿ ದೂರು ದಾಖಲಿಸಿದ್ದರು. ದೂರುದಾರರ ಸಾಕ್ಷ್ಯ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ವಿಚಾರಣಾ ನ್ಯಾಯಾಲಯ ಕಾರ್ಯಪ್ಪಗೆ 7 ದಿನ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಅಡ್ಡಂಡ ಕಾರ್ಯಪ್ಪ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Related Articles

Comments (0)

Leave a Comment