ಕನ್ನಡ ರಾಜ್ಯೋತ್ಸವದ ದಿನ ಬೆಳಗಾವಿಯಲ್ಲಿ ಕರಾಳ ದಿನಾಚರಣೆ; ಎಂಇಎಸ್ ನಿಲುವು ಕೇಳಿದ ಹೈಕೋರ್ಟ್

ಬೆಂಗಳೂರು: ಬೆಳಗಾವಿಯಲ್ಲಿ ನವೆಂಬರ್‌ 1ರಂದು ಕನ್ನಡ ರಾಜ್ಯೋತ್ಸವ ವಿರೋಧಿಸಿ ಕರಾಳ ದಿನ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ನಿಲುವು ಸ್ಪಷ್ಟಪಡಿಸುವಂತೆ ಮಹಾರಾಷ್ಟ್ರ ಏಕೀಕರಣ ಸಮಿತಿಗೆ (ಎಂಇಎಸ್‌) ಹೈಕೋರ್ಟ್ ಸೂಚಿಸಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಮಲ್ಲಪ್ಪ ಚಾಯಪ್ಪ ಅಕ್ಷರದ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿ, ಅರ್ಜಿ ವಿಚಾರಣೆಯನ್ನು ಫೆಬ್ರವರಿ 18ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಎನ್‌.ಪಿ. ಅಮೃತೇಶ್‌ ವಾದ ಮಂಡಿಸಿ, ರಾಜ್ಯದಾದ್ಯಂತ ಪ್ರತಿವರ್ಷ ನವೆಂಬರ್ 1ರಂದು ಆಚರಿಸುವ ಕನ್ನಡ ರಾಜ್ಯೋತ್ಸವವು ಕರ್ನಾಟಕ ಹಾಗೂ ಕನ್ನಡಿಗರ ಹೃದಯ ಮತ್ತು ಆತ್ಮದೊಂದಿಗೆ ಬೆಸೆದುಕೊಂಡಿದೆ. ಆದರೆ, ಗಡಿ ವಿವಾದ ಇರುವ ಬೆಳಗಾವಿ ಜಿಲ್ಲೆಯಲ್ಲಿ 5ನೇ ಪ್ರತಿವಾದಿಯಾದ ಮಹಾರಾಷ್ಟ್ರ ಏಕೀಕರಣ ಸಮಿತಿಯು ರಾಜ್ಯೋತ್ಸವದ ದಿನದಂದೇ ಕರಾಳ ದಿನ ಆಚರಿಸಿಕೊಂಡು ಬರುತ್ತಿದೆ. ಮೇಲಾಗಿ ಕರಾಳ ದಿನ ಆಚರಿಸಲು ರಾಜ್ಯ ಪೊಲೀಸರೇ ಭದ್ರತೆ ಒದಗಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಕರಾಳ ದಿನ ಆಚರಣೆ ನಿರ್ಬಂಧಿಸುವಂತೆ ಕೋರಿ ಸಲ್ಲಿಸಿದ್ದ ಈ ಪಿಐಎಲ್ ಸಂಬಂಧ ಹೈಕೋರ್ಟ್‌ ಅಕ್ಟೋಬರ್ 30ರಂದು ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಅದಾದ ನಂತರವೂ 2024ರ ನವೆಂಬರ್‌ 1ರಂದು ಮತ್ತೆ ಕರಾಳ ದಿನ ಆಚರಿಸಿ, ಮೆರವಣಿಗೆ ನಡೆಸಲಾಗಿದೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಹಾಗೂ ಮರಾಠಿ ಪತ್ರಿಕೆಗಳ ವರದಿಗಳನ್ನೊಳಗೊಂಡ ಮೆಮೊ ಅನ್ನು ನವಂಬರ್ 5ರಂದು ಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ಅಮೃತೇಶ್ ನ್ಯಾಯಪೀಠದ ಗಮನಕ್ಕೆ ತಂದರು.

ಈ ಮಧ್ಯೆ ನ್ಯಾಯಪೀಠ, 5ನೇ ಪ್ರತಿವಾದಿಯ ಪರವಾಗಿ ಯಾರು ಹಾಜರಾಗುತ್ತಿದ್ದಾರೆ ಎಂದು ಪ್ರಶ್ನಿಸಿತು. ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರು, ತಾವು ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಧ್ಯಕ್ಷರನ್ನು ಪ್ರತಿನಿಧಿಸುತ್ತಿರುವುದಾಗಿ ತಿಳಿಸಿದರು. ಅದಕ್ಕೆ ನ್ಯಾಯಪೀಠ, ಕರ್ನಾಟಕದಲ್ಲಿ ಮಹಾರಾಷ್ಟ್ರವೇ? ಎಂದು ಲಘುಧಾಟಿಯಲ್ಲಿ ಪ್ರಶ್ನಿಸಿತಲ್ಲದೆ, ಪ್ರಕರಣದಲ್ಲಿ ನಿಮ್ಮ ನಿಲುವೇನು ಎಂಬುದನ್ನು ಮುಂದಿನ ವಿಚಾರಣೆಯೊಳಗೆ ಸ್ಪಷ್ಟಪಡಿಸಬೇಕೆಂದು ಎಂಇಎಸ್ ಪರ ವಕೀಲರಿಗೆ ಸೂಚಿಸಿ, ಅರ್ಜಿ ವಿಚಾರಣೆ ಮುಂದೂಡಿತು.

 

 

ಪ್ರಕರಣದ ವಿವರ:
WP 29267/2024
Mallappa Chayappa Aksharada Vs State Of Karnataka & Others

Related Articles

Comments (0)

Leave a Comment