ಇಡಿ ಸಮನ್ಸ್ ಪ್ರಶ್ನಿಸಿ ಸಿಎಂ ಪತ್ನಿ, ಬೈರತಿ ಸುರೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ‌ ಸಮನ್ಸ್ ರದ್ದುಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಪ್ರಕರಣದಲ್ಲಿ ಇಡಿ ಜಾರಿಗೊಳಿಸಿದ್ದ ಸಮನ್ಸ್‌ ಪ್ರಶ್ನಿಸಿ ಬಿ.ಎಂ. ಪಾರ್ವತಿ ಹಾಗೂ ಬೈರತಿ ಸುರೇಶ್‌ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ಕುರಿತು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ‌ ನ್ಯಾಯಪೀಠ, ವಾದ-ಪ್ರತಿವಾದ ಆಲಿಸಿ, ವಿಚಾರಣೆ ಪೂರ್ಣಗೊಳಿಸಿತು. ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿದ ಪೀಠ, ಸಮನ್ಸ್‌‌ಗೆ ನೀಡಿದ್ದ ತಡೆಯಾಜ್ಞೆಯನ್ನು ತೀರ್ಪು ಪ್ರಕಟಿಸುವವರೆಗೆ ವಿಸ್ತರಿಸಿತು.

ಸಿಎಂ ಪತ್ನಿ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ:

  • ಪಾರ್ವತಿ ಅವರು ಮುಡಾದ 14 ನಿವೇಶನಗಳನ್ನು 2024ರ ಅಕ್ಟೋಬರ್ 1ರಂದೇ ಹಿಂತಿರುಗಿಸಿದ್ದು, ನಿವೇಶನಗಳನ್ನು ಅವರು ಅನುಭವಿಸುತ್ತಿಲ್ಲ. ಅಪರಾಧದ ಸಂಪತ್ತು ಅವರ ಬಳಿ ಇಲ್ಲವಾದ್ದರಿಂದ ಇಡಿಗೆ ತನಿಖೆ ವ್ಯಾಪ್ತಿ ಇಲ್ಲ.
  • ನಿವೇಶನಗಳನ್ನು ಮರಳಿಸಿದ ನಂತರ ಇಡಿ ತನಿಖೆ ಆರಂಭಿಸಿದೆ. ಅಪರಾಧದಿಂದ ಗಳಿಸಿದ ಹಣ ಚಟುವಟಿಕೆಗೆ ಬಳಕೆಯಾಗಬೇಕು. ಇಲ್ಲವಾದರೆ, ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌) ಕಾಯ್ದೆ ಅನ್ವಯವಾಗುವುದಿಲ್ಲ.
  • ಜಾರಿ ನಿರ್ದೇಶನಾಲಯ ಇಸಿಐಆರ್‌ ದಾಖಲಿಸಿರುವುದೇ ಸರಿಯಲ್ಲ. ಲೋಕಾಯುಕ್ತರು ಎಫ್‌ಐಆರ್‌ ದಾಖಲಿಸಿದ 4 ದಿನಗಳಲ್ಲೇ ಇಡಿ ಇಸಿಐಆರ್‌ ದಾಖಲಿಸಿದೆ. ಲೋಕಾಯುಕ್ತ ಪೊಲೀಸರ ತನಿಖೆಯನ್ನೇ ಇಡಿ ಪುನರಾವರ್ತಿಸುತ್ತಿದೆ.
  • ಇಡಿ ಸಲ್ಲಿಸಿರುವ ಆಕ್ಷೇಪಣೆಯಲ್ಲಿ14 ನಿವೇಶನ ಅಪರಾಧದ ಸಂಪತ್ತೆಂದಿದೆ. ಮುಡಾದ 1,708 ನಿವೇಶನಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ. ಈಗಾಗಲೇ 160 ನಿವೇಶನಗಳನ್ನು ಇಡಿ ತಾತ್ಕಾಲಿಕ ಜಪ್ತಿ ಮಾಡಿದೆ. ಇಡಿ ತನ್ನ ಕಾರ್ಯವ್ಯಾಪ್ತಿ ಮೀರಿ ಪರ್ಯಾಯ ತನಿಖೆ ನಡೆಸುತ್ತಿದೆ.
  • ಲೋಕಾಯುಕ್ತ ಪೊಲೀಸರ ತನಿಖಾ ವ್ಯಾಪ್ತಿಯಲ್ಲಿ ಇಡಿ ಪ್ರವೇಶಿಸಿದೆ. ಈಗಾಗಲೇ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ. ತನಿಖೆಯಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲವೆಂದು ವರದಿ ಸಲ್ಲಿಸಿದ್ದಾರೆ. ಆದ್ದರಿಂದ, ಸಮನ್ಸ್ ರದ್ದುಪಡಿಸಬೇಕು.

 

ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರ ವಾದ ಹೀಗಿತ್ತು:

  • ಭ್ರಷ್ಟಾಚಾರ ಹಾಗೂ ಅಪರಾಧದ ಹಣ ಸಯಾಮಿ ಅವಳಿಗಳಂತೆ. ಭ್ರಷ್ಟಾಚಾರ ನಡೆಯುತ್ತಿದ್ದಂತೆಯೇ ಅಪರಾಧದ ಹಣ ಸಂಪಾದನೆಯಾಗುತ್ತದೆ.
  • ಖಾಸಗಿ ದೂರಿನಲ್ಲಿ 5 ಸಾವಿರ ಕೋಟಿ ಮುಡಾ ಹಗರಣವನ್ನೂ ಪ್ರಸ್ತಾಪಿಸಲಾಗಿದೆ. ಆ ದೂರು ಆಧರಿಸಿಯೇ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಆದ್ದರಿಂದ, ಇದು ಕೇವಲ 14 ನಿವೇಶನಗಳಿಗೆ ಸಂಬಂಧಿಸಿದ ದೂರು ಮಾತ್ರವಲ್ಲ. ಮುಡಾದ ಅಕ್ರಮಗಳ ದೂರಾಗಿದ್ದು, ಆ ಬಗ್ಗೆ ಇಡಿ ತನಿಖೆ ನಡೆಸಿದೆ.
  • ಇಡಿ ಪ್ರಶ್ನಾವಳಿಯಲ್ಲಿ ಕುಟುಂಬ ಸದಸ್ಯರ ವಿವರ ಕೇಳಿದ್ದಕ್ಕೆ ಅರ್ಜಿದಾರರು ಆಕ್ಷೇಪಿಸಿದ್ದಾರೆ. ಮುಡಾದ ಅಪರಾಧದ ಸಂಪತ್ತನ್ನು ಸಂಬಂಧಿಗಳಿಗೆ ಹಸ್ತಾಂತರಿಸಲಾಗಿದೆ. ಪ್ರಭಾವಿ ವ್ಯಕ್ತಿಗಳು ಒತ್ತಡ ಹೇರಿ ನೆಂಟರ ಹೆಸರಿನಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿಸಿಕೊಂಡಿದ್ದಾರೆ.
  • ಮುಡಾ ಮಾಜಿ ಆಯುಕ್ತರು ತಮ್ಮ ತಾತ, ಹೆಂಡತಿಯ ತಾತ, ಸಹೋದರನ ಮಗ, ಹೆಂಡತಿಯ ತಾತ ಹಲವರಿಗೆ ನಿವೇಶನ ಹಂಚಿ ಅಕ್ರಮ ಎಸಗಿದ್ದಾರೆ. ಆ ಕಾರಣದಿಂದಲೇ ಆರೋಪಿಗಳ ಸಂಬಂಧಿಗಳ ವಿವರವನ್ನೂ ಕೇಳಲಾಗುತ್ತಿದೆ.
  • ಇಸಿಐಆರ್‌ ದಾಖಲಿಸಿದ ಸಂದರ್ಭದಲ್ಲಿ 14 ನಿವೇಶನ ಸಿಎಂ ಪತ್ನಿ ವಶದಲ್ಲಿತ್ತು. ಅದು ಅಪರಾಧದ ಸಂಪತ್ತಾಗಿರುವುದರಿಂದ ತನಿಖೆ ಅಗತ್ಯ. ಲೋಕಾಯುಕ್ತ ಪೊಲೀಸರು ಬಿ ವರದಿ ಸಲ್ಲಿಸಿರಬಹುದು. ಆದರೆ, ನ್ಯಾಯಾಲಯ ಅದನ್ನು ಇನ್ನೂ ಅಂಗೀಕರಿಸಿಲ್ಲ. ಬಿ ರಿಪೋರ್ಟ್‌ ಪ್ರಶ್ನಿಸಲು ಇಡಿಗೂ ಅಧಿಕಾರವಿದೆ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕು ಎಂದು ಎಎಸ್‌ಜಿ ಅರವಿಂದ್ ಕಾಮತ್ ಮನವಿ ಮಾಡಿದರು.

Related Articles

Comments (0)

Leave a Comment