ಪ್ರಜ್ವಲ್ ವಿರುದ್ಧದ ಅತ್ಯಾಚಾರ ಪ್ರಕರಣ; ವಿಶೇಷ ಕೋರ್ಟ್ ವಿಚಾರಣೆ ಮುಂದೂಡಲು ಹೈಕೋರ್ಟ್ ನಕಾರ

ಬೆಂಗಳೂರು: ಮನೆಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದ ದೈನಂದಿನ ವಿಚಾರಣೆಯನ್ನು ಮುಂದೂಡಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಪರವಾಗಿ ಅವರ ತಾಯಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಪ್ರಜ್ವಲ್‌ ಪರ ವಕೀಲರಾದ ಜಿ. ಅರುಣ್‌ ಅವರು ಪ್ರಕರಣದಿಂದ ಹಿಂದೆ ಸರಿದಿದ್ದು, ಅವರ ಸ್ಥಾನಕ್ಕೆ ಮತ್ತೊಬ್ಬ ವಕೀಲರನ್ನು ನೇಮಕ ಮಾಡುವವರೆಗೆ ವಿಚಾರಣೆ ಮುಂದೂಡಲು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ನಿಗದಿಯಾಗಿತ್ತು.

ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅತ್ಯಾಚಾರ ಪ್ರಕರಣದ ವಿಚಾರಣೆ ಮುಂದೂಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ಯಾವುದೇ ನಿರ್ದೇಶನ ನೀಡಿದರೆ ಅದು ವಿಶೇಷ ನ್ಯಾಯಾಲಯದ ಸ್ಥೈರ್ಯ ಕುಂದಿಸಲಿದೆ. ಆದ್ದರಿಂದ, ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗದು ಎಂದು ತಿಳಿಸಿ ವಜಾಗೊಳಿಸಿತು.

ಅರ್ಜಿಗೆ ಎಸ್‌ಪಿಪಿ ಆಕ್ಷೇಪ:
ಇದಕ್ಕೂ ಮುನ್ನ ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌, ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮಹಿಳೆಯನ್ನು ಅಪಹರಣ ನಡೆಸಿರುವ ಕಿಂಗ್‌ಪಿನ್‌ ಭವಾನಿ ಅವರು ವಿಚಾರಣೆ ಮುಂದೂಡುವಂತೆ ಕೋರಿದ್ದಾರೆ. ಈ ಅರ್ಜಿ ಸಲ್ಲಿಕೆಯ ಹಿಂದೆ ವಿಚಾರಣೆ ವಿಳಂಬಗೊಳಿಸುವ ಏಕೈಕ ಉದ್ದೇಶವಿದೆ ಎಂದು ಅರ್ಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಪ್ರಕರಣವೇನು?
ವಿಚಾರಣಾ ನ್ಯಾಯಾಲಯದಲ್ಲಿ ಪ್ರಜ್ವಲ್ ಅವರನ್ನು ಪ್ರತಿನಿಧಿಸುತ್ತಿದ್ದ ವಕೀಲ ಜಿ. ಅರುಣ್ ಅವರು ಏಪ್ರಿಲ್ 23ರಂದು ಪ್ರಕರಣದಿಂದ ಹಿಂದೆ ಸರಿದಿದ್ದರು. ಆನಂತರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್‌ ಅವರು ಏಪ್ರಿಲ್‌ 28ರಂದು ಪ್ರಜ್ವಲ್‌ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ವಕೀಲರನ್ನು ನೇಮಿಸಿಕೊಳ್ಳಲು ಬಯಸುವಿರೇ ಎಂದು ಕೇಳಿದ್ದರು. ಇದಕ್ಕೆ ಪ್ರಜ್ವಲ್‌, ಬೇರೊಬ್ಬ ವಕೀಲರನ್ನು ನೇಮಿಸಿಲು ತಮ್ಮ ಕುಟುಂಬದವರು ಪ್ರಯತ್ನಿಸುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದ್ದರು.

ಆದರೆ, ಏಪ್ರಿಲ್ 29ರಂದು ವಿಚಾರಣಾ ನ್ಯಾಯಾಲಯ ಪ್ರಜ್ವಲ್ ಅವರನ್ನು ಪ್ರತಿನಿಧಿಸಲು ಅಮಿಕಸ್‌ ಕ್ಯೂರಿಯನ್ನಾಗಿ ಪ್ರಧಾನ ಕಾನೂನು ಡಿಫೆನ್ಸ್‌ ವಕೀಲೆ ಆರ್‌.ಎಸ್‌. ಜಯಶ್ರೀ ಅವರನ್ನು ನೇಮಿಸಿತ್ತು. ಪ್ರಜ್ವಲ್ ರೇವಣ್ಣ ಜೈಲಿನಲ್ಲಿರುವ ಕಾರಣ, ಅವರ ತಾಯಿ ಭವಾನಿ ರೇವಣ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಪ್ರಜ್ವಲ್‌ ಒಪ್ಪಿಗೆ ಇಲ್ಲದೇ ಹೊಸ ವಕೀಲರನ್ನು ನೇಮಿಸಲಾಗಿದೆ. ಬೇರೊಬ್ಬರು ವಕೀಲರನ್ನು ನೇಮಿಸಲು ಕನಿಷ್ಠ ಒಂದು ಅವಕಾಶವನ್ನೂ ನೀಡಿಲ್ಲ. ಇದರ ಜತೆಗೆ ಶುಕ್ರವಾರದಿಂದ ಪ್ರಕರಣದ ವಿಚಾರಣೆ ಆರಂಭಿಸಲಾಗಿದೆ. ಆದ್ದರಿಂದ, ಬೇರೆ ವಕೀಲರನ್ನು ನೇಮಿಸಿಕೊಳ್ಳುವವರೆಗೆ ವಿಚಾರಣೆ ಮುಂದೂಡಲು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಬೇಕೆಂದು ಕೋರಿದ್ದರು.

ಅತ್ಯಾಚಾರ ಪ್ರಕರಣ ಸಂಬಂಧ ಪ್ರಜ್ವಲ್ ವಿರುದ್ಧ ಏಪ್ರಿಲ್ 3ರಂದು ಆರೋಪ ನಿಗದಿಪಡಿಸಿರುವ ವಿಚಾರಣಾ ನ್ಯಾಯಾಲಯ, ಶುಕ್ರವಾರದಿಂದ (ಮೇ 2) ಅಧಿಕೃತವಾಗಿ ದೈನಂದಿನ ವಿಚಾರಣೆ ಆರಂಭಿಸಿದೆ.

Related Articles

Comments (0)

Leave a Comment