ಬಿಎಚ್ಇಎಲ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ಕೋರಿ ಅರ್ಜಿ; ಆಡಳಿತ ಮಂಡಳಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಕೇಂದ್ರ ಸರ್ಕಾರ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್) ಆವರಣದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಬಿಎಚ್ಇಎಲ್ ಆಡಳಿತ ಮಂಡಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಬಿಎಚ್ಇಎಲ್ ನೌಕರರ ಕನ್ನಡ ಸಂಘ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಳೆದ 42 ವರ್ಷಗಳಿಂದ ಬಿಎಚ್ಇಎಲ್ ಆವರಣದಲ್ಲಿ ಕನ್ನಡ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಪ್ರತಿ ವರ್ಷ ಆಡಳಿತ ಮಂಡಳಿ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಆದರೆ, ಈ ಬಾರಿ ನಮ್ಮ ಮನವಿಯನ್ನು ಪರಿಗಣಿಸಲಾಗಿಲ್ಲ. ನವೆಂಬರ್ 1 ರಂದು ಬಿಎಚ್ಇಎಲ್ ಅವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ, ಕನ್ನಡ ಧ್ವಜಾರೋಹಣಕ್ಕೆ ಅನುಮತಿ ನೀಡಬೇಕು ಹಾಗೂ ಅದಕ್ಕೆ ಬೇಕಾದ ಅನುದಾನ ಮಂಜೂರು ಮಾಡಲು ಆಡಳಿತ ಮಂಡಳಿಗೆ ನಿರ್ದೇಶಿಸಬೇಕು ಎಂದು ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಎಚ್ಇಎಲ್ ಪರ ವಕೀಲರು, ಬಿಎಚ್‌ಇಎಲ್‌ನಲ್ಲಿ ಎರಡು ಸಂಘಗಳಿವೆ. ಅರ್ಜಿದಾರ ಸಂಘವು 2019ರಿಂದ ನೋಂದಣಿ ನವೀಕರಣ ಮಾಡಿಸಿಲ್ಲ. ಪ್ರತಿ ವರ್ಷ ಆರ್ಥಿಕ ವಹಿವಾಟಿನ ಲೆಕ್ಕವನ್ನೂ ಕೊಡುತ್ತಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಬಿಎಚ್ಇಎಲ್ ಮುಖ್ಯ ಆಡಳಿತಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಗುರುವಾರಕ್ಕೆ (ಅಕ್ಟೋಬರ್ 30) ಮುಂದೂಡಿತು.

Related Articles

Comments (0)

Leave a Comment