ಪರೀಕ್ಷಾ ಅಕ್ರಮ ತಡೆಗಟ್ಟಲು ಸೂಕ್ತ ಮಾರ್ಗಸೂಚಿ ರಚಿಸಿ; ಕೆಎಸ್‌ಎಲ್‌ಯುಗೆ ಹೈಕೋರ್ಟ್ ನಿರ್ದೇಶನ
- by Ramya B T
- February 3, 2025
- 218 Views

ಬೆಂಗಳೂರು: ಪರೀಕ್ಷಾ ಅಕ್ರಮಗಳನ್ನು ತಡೆಯಲು ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಿಸಲು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸುವಂತೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ (ಕೆಎಸ್‌ಎಲ್‌ಯು) ಹೈಕೋರ್ಟ್ ನಿರ್ದೇಶಿಸಿದೆ.
ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದರೆಂಬ ಕಾರಣಕ್ಕೆ ಮುಂದಿನ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನಿರಾಕರಿಸಿದ್ದ ಕೆಎಸ್‌ಎಲ್‌ಯು ಕ್ರಮ ಪ್ರಶ್ನಿಸಿ ಕಾನೂನು ವಿದ್ಯಾರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಜತೆಗೆ, ಹೊಸದಾಗಿ ರೂಪಿಸುವ ಮಾರ್ಗಸೂಚಿಯಲ್ಲಿ ಪರೀಕ್ಷಾ ಮೇಲ್ವಿಚಾರಕರು ಬಾಡಿ ಕ್ಯಾಮರಾ ಧರಿಸುವ, ಪಾರದರ್ಶಕ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಗರಿಷ್ಠ ಪ್ರಮಾಣದಲ್ಲಿ ತಂತ್ರಜ್ಞಾನ ಬಳಸಿಕೊಳ್ಳುವ ಮತ್ತು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಅಂಶಗಳಿರಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.
ಪರೀಕ್ಷಾ ಅಕ್ರಮ ಅತ್ಯಂತ ಗಂಭೀರ ವಿಷಯವಾಗಿದೆ. ಕೆಲ ವಿದ್ಯಾರ್ಥಿಗಳು ಅಕ್ರಮಗಳನ್ನು ಎಸಗಿ ಲಾಭ ಮಾಡಿಕೊಳ್ಳಲು ಯತ್ನಿಸುತ್ತಾರೆ. ಇದರಿಂದ, ಇತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಪರೀಕ್ಷೆಗಳಲ್ಲಿ ಅಕ್ರಮಗಳನ್ನು ಎಸಗಲು ಯಾವುದೇ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬಾರದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ನಡುವೆ ಭಾರಿ ಸ್ಪರ್ಧೆ ಇರುತ್ತದೆ. ಆದ್ದರಿಂದ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪರೀಕ್ಷಾ ಪಾವಿತ್ರ್ಯತೆ ಎತ್ತಿಹಿಡಿಯುವ ನಿಟ್ಟಿನಲ್ಲಿ ಅಗತ್ಯ ನಿಯಮಗಳನ್ನು ರೂಪಿಸಬೇಕು. ಆ ಮೂಲಕ ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ವೇದಿಕೆ ಕಲ್ಪಿಸಿಕೊಡಬೇಕು ಎಂದಿರುವ ಹೈಕೋರ್ಟ್, ಹೊಸದಾಗಿ ರೂಪಿಸುವ ಮಾರ್ಗಸೂಚಿಗಳನ್ನು ವಿಶ್ವವಿದ್ಯಾಲಯದ ಜತೆ ಸಂಯೋಜನೆ ಹೊಂದಿರುವ ಎಲ್ಲ ಕಾನೂನು ಕಾಲೇಜುಗಳಲ್ಲಿ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕು ಎಂದು ಕೆಎಸ್‌ಎಲ್‌ಯು ಕುಲಪತಿ ಹಾಗೂ ಕುಲಸಚಿವರಿಗೆ ಆದೇಶಿಸಿದೆ.
ನ್ಯಾಯಾಲಯದ ಪ್ರಮುಖ ನಿರ್ದೇಶನಗಳು:
- ಪರೀಕ್ಷೆಗಳನ್ನು ಪಾರದರ್ಶಕ ರೀತಿಯಲ್ಲಿ ನಡೆಸಲು ವಿಶ್ವವಿದ್ಯಾಲಯ ಲಭ್ಯವಿರುವ ಎಲ್ಲ ತಂತ್ರಜ್ಞಾನಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಬೇಕು.
- ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಇಡೀ ಪರೀಕ್ಷಾ ಪ್ರಕ್ರಿಯೆಯನ್ನು ಚಿತ್ರೀಕರಿಸಬೇಕು. ಯಾವುದೇ ವಿದ್ಯಾರ್ಥಿಗೆ ಅಕ್ರಮವೆಸಗಲು ಆಸ್ಪದ ನೀಡದಂತೆ ನೋಡಿಕೊಳ್ಳಬೇಕು.
- ವಿದ್ಯಾರ್ಥಿ ಅಕ್ರಮ ಎಸಗಿದರೆ ಅಂತಹ ಸಂದರ್ಭದಲ್ಲಿ ಸಿಸಿ ಕ್ಯಾಮರಾ ದೃಶ್ಯ ಬಳಸಿಕೊಂಡು ತಪ್ಪೆಸಗಿರುವುದನ್ನು ದೃಢಪಡಿಸಿಕೊಂಡು ಶಿಸ್ತು ಕ್ರಮ ಜರುಗಿಸಬೇಕು.
- ಪರೀಕ್ಷಾ ಮೇಲ್ವಿಚಾರಕರು ಪರೀಕ್ಷಾ ಕೊಠಡಿಗಳಲ್ಲಿ ಬಾಡಿ ಕ್ಯಾಮರಾಗಳನ್ನು ಧರಿಸಬೇಕು ಮತ್ತು ಅವುಗಳ ದೃಶ್ಯಾವಳಿಯನ್ನು ರಿಯಲ್ ಟೈಮ್ ಆಧಾರದಲ್ಲಿ ರೆಕಾರ್ಡ್ ಮಾಡಿ ಸರ್ವರ್‌ನಲ್ಲಿ ಅಪ್‌ಲೋಡ್ ಮಾಡಿ ಆರೋಪಗಳು ಬಂದಾಗ ಪರಿಶೀಲನೆ ನಡೆಸಬೇಕು.
- ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್‌ಗಳನ್ನು ಅಳವಡಿಸಬೇಕು ಮತ್ತು ವಿದ್ಯಾರ್ಥಿಗಳು ಮೊಬೈಲ್ ಫೋನ್ ಅಥವಾ ಇನ್ನಿತರ ಸಾಧನಗಳನ್ನು ಬಳಸದಂತೆ ಎಚ್ಚರ ವಹಿಸಬೇಕು.
- ಫ್ಲೈಯಿಂಗ್ ಸ್ಕ್ಯಾಡ್‌ಗಳ ಅಧಿಕಾರಿಗಳು ಪರೀಕ್ಷೆಗಳ ಪ್ರಗತಿಯ ಮೇಲ್ವಿಚಾರಣೆ ನಡೆಸುವಾಗ ಅವರಿಗೂ ಬಾಡಿ ಕ್ಯಾಮರಾಗಳನ್ನು ಒದಗಿಸಬೇಕು ಮತ್ತು ಆ ದತ್ತಾಂಶ ಸಂಗ್ರಹಿಸಿಡಬೇಕು.
- ಅಕ್ರಮ ಎಸಗುವ ಅಧಿಕಾರಿಗಳ ಹೇಳಿಕೆಯನ್ನು ಪರೀಕ್ಷಾ ಕೇಂದ್ರದಲ್ಲಿಯೇ ವಿಡಿಯೋ ರೂಪದಲ್ಲಿ ದಾಖಲಿಸಿಕೊಳ್ಳಬೇಕು ಹಾಗೂ ಅದನ್ನು ನ್ಯಾಯಾಲಯಕ್ಕೆ ಸಾಕ್ಷಿಯನ್ನಾಗಿ ಒದಗಿಸಬೇಕು.
Related Articles
Thank you for your comment. It is awaiting moderation.
Comments (0)