ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ; ಪ್ರಕರಣ ರದ್ದು ಕೋರಿ ಸಿ.ಟಿ. ರವಿ ಸಲ್ಲಿಸಿದ್ದ ಅರ್ಜಿ ವಜಾ

ಬೆಂಗಳೂರು: ಬೆಳಗಾವಿ ಅಧಿವೇಶನದ ವೇಳೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ನಿಂದನಾತ್ಮಕ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ಕಿರುಕುಳ ಮತ್ತು ಮಹಿಳೆ ಘನತೆಗೆ ಹಾನಿ ಪ್ರಕರಣ ರದ್ದು ಕೋರಿ ಸಿ.ಟಿ. ರವಿ ಸಲ್ಲಿಸಿದ್ದ ಅರ್ಜಿ ಕುರಿತು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿದ್ದು, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ದೂರದಾರರ ಬಗ್ಗೆ ಅರ್ಜಿದಾರರು ಬಳಸಿದ್ದಾರೆನ್ನಲಾದ ಪದವು ನಿಸ್ಸಂದೇಹವಾಗಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 75 (ಲೈಂಗಿಕ ಕಿರುಕುಳ) ಮತ್ತು 79 ಅಡಿಯ (ಉದ್ದೇಶಪೂರ್ವಕವಾಗಿ ಮಹಿಳೆ ಘನತೆ ಹಾನಿ) ಅಪರಾಧದ ಅಂಶಗಳನ್ನು ಒಳಗೊಂಡಿದೆ. ಆ ಪದವು ಮಹಿಳೆಯ ನಮ್ರತೆಯನ್ನು ಕೆರಳಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅರ್ಜಿದಾರರು ತೋರಿದ್ದಾರೆನ್ನಲಾದ ನಡೆ ಸದನದ ಯಾವುದೇ ಕಾರ್ಯಚಟುವಟಿಕೆ/ವ್ಯವಹಾರಕ್ಕೆ ಸಂಬಂಧಿಸಿದ್ದಲ್ಲ. ಆದ್ದರಿಂದ, ಕ್ರಿಮಿನಲ್‌ ಪ್ರಾಸಿಕ್ಯೂಷನ್‌ನಿಂದ ಶಾಸಕರಿಗೆ ವಿನಾಯಿತಿ/ರಕ್ಷಣೆ ದೊರೆಯುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ವಾಸ್ತವವಾಗಿ ಅರ್ಜಿದಾರರು ದೂರುದಾರರ ವಿರುದ್ಧ ಅಶ್ಲೀಲ ಪದ ಬಳಸಿ ಮಾತನಾಡಿದ್ದಾರೆಯೇ ಅಥವಾ ಉಚ್ಚರಿಸಿದ್ದಾರೆಯೇ ಅಥವಾ ಅವರ ಘನತೆ ಕುಗ್ಗಿಸುವ ಸನ್ನೆ ತೋರಿದ್ದಾರೆಯೇ ಎನ್ನುವುದು ಈವರೆಗೂ ನಿಗೂಢವಾಗಿದೆ. ಆದ್ದರಿಂದ, ಆ ಕುರಿತು ತನಿಖೆಯಾಗಬೇಕಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ನಾಗರಿಕ ಸಮಾಜ ಒಪ್ಪದು:
ಮಹಿಳೆಯ ಗೌರವ ಮತ್ತು ಖ್ಯಾತಿಯು ಯಾವುದೇ ಸಮಾಜದ ಮೂಲಭೂತ ನಾಗರಿಕತೆಯನ್ನು ತೋರಿಸುತ್ತದೆ. ನಾಗರಿಕ ಸಮಾಜದಲ್ಲಿ ಯಾವುದೇ ನಾಗರಿಕನು ಮಹಿಳೆಯ ಗೌರವಕ್ಕೆ ಧಕ್ಕೆ ಉಂಟು ಮಾಡಬಹುದು ಎಂಬುದನ್ನು ಕಲ್ಪಿಸಿಕೊಳ್ಳಲಾಗದು. ಅಂತಹ ಚಿಂತನೆಯೇ ವಿಷಾದಕರವಷ್ಟೇ ಅಲ್ಲ. ಶೋಚನೀಯವೂ ಆಗಿದೆ. ಪ್ರಕರಣದಲ್ಲಿನ ವಿಷಯ ಅರ್ಜಿದಾರರ ದೈಹಿಕ ಕ್ರಿಯೆಗಳಲ್ಲ, ಬದಲಾಗಿ ಮಹಿಳೆಯ ನಮ್ರತೆಯನ್ನು ಕೆರಳಿಸುವ ಮೌಖಿಕ ಕ್ರಿಯೆಗಳಾಗಿರುತ್ತದೆ. ಮಹಿಳೆಯ ನಮ್ರತೆ ಅವಮಾನಿಸುವುದು ಶಿಕ್ಷಾರ್ಹವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಿ.ಟಿ. ರವಿ ಅವರು ನನ್ನ ವಿರುದ್ಧ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ 2024ರ ಡಿಸೆಂಬರ್ 19ರಂದು ಹಿರೇಬಾಗೇವಾಡಿ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಬಿಎನ್‌ಎಸ್‌ ಸೆಕ್ಷನ್‌ 75 ಹಾಗೂ 79ರ ಆರೋಪದಡಿ ಎಫ್‌ಐಆರ್‌ ದಾಖಲಿಸಿ ರವಿ ಅವರನ್ನು ಬಂಧಿಸಿದ್ದರು. ಆ ನಂತರ ಎಫ್‌ಐಆರ್‌ ರದ್ದು ಕೋರಿ ರವಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ, ಬಂಧನ ಪ್ರಕ್ರಿಯೆಯಲ್ಲಿ ನಿಯಮ ಪಾಲನೆಯಾಗಿಲ್ಲ ಎಂಬ ಕಾರಣಕ್ಕೆ ತಕ್ಷಣವೇ ರವಿ ಅವರನ್ನು ಬಿಡುಗಡೆಗೊಳಿಸುವಂತೆ ಪೊಲೀಸರಿಗೆ ಹೈಕೋರ್ಟ್ ಆದೇಶಿಸಿತ್ತು.

Related Articles

Comments (0)

Leave a Comment