- ಟ್ರಯಲ್ ಕೋರ್ಟ್
- ಹೈಕೋರ್ಟ್
- Like this post: 7
ಐಪಿಎಸ್ ಅಧಿಕಾರಿ ಅಮಾನತು ಆದೇಶ ರದ್ದು; ಸಿಎಟಿ ಕ್ರಮ ಪ್ರಶ್ನಿಸಿ ಸರ್ಕಾರದಿಂದ ಹೈಕೋರ್ಟ್‌ಗೆ ಅರ್ಜಿ
- by Jagan Ramesh
- July 2, 2025
- 202 Views

ಬೆಂಗಳೂರು: ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 4ರಂದು ಕಾಲ್ತುಳಿತ ಸಂಭವಿಸಿದ್ದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದ ಮೇಲೆ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅವರನ್ನು ಅಮಾನತು ಮಾಡಿ ಹೊರಡಿಸಿದ್ದ ಆದೇಶ ರದ್ದುಪಡಿಸಿರುವ ಸಿಎಟಿ ಕ್ರಮವನ್ನು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ.
ಬುಧವಾರ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರ ಪೀಠದಲ್ಲಿ ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು ಪ್ರಕರಣದ ಕುರಿತು ಉಲ್ಲೇಖಿಸಿ, ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿದರು.
ಅರ್ಜಿಯಲ್ಲಿನ ಕಚೇರಿ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ, ಗುರುವಾರ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಸರ್ಕಾರದ ಆಕ್ಷೇಪವೇನು?
ರಾಜ್ಯ ಪೊಲೀಸ್ ಮಹಾನಿರ್ದೇಶಕರ ವರದಿ ಆಧರಿಸಿ, ಮೇಲ್ನೋಟಕ್ಕೆ ಕರ್ತವ್ಯ ಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇಲಾಖಾ ತನಿಖೆ ನಡೆದಿದ್ದು, ಅದರ ದಾಖಲೆಗಳನ್ನಷ್ಟೇ ಆಧರಿಸಿ, ನ್ಯಾಯಾಧಿಕರಣದ ಮುಂದೆ ಸಾಕ್ಷಿ ಇತ್ತೇನೋ ಎಂಬಂತೆ ಸಿಎಟಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸಿಎಟಿಗೆ ಮುಚ್ಚಿದ ಲಕೋಟೆಯಲ್ಲಿ ಜೂನ್ 3 ಹಾಗೂ 4ರಂದು ನಡೆದಿರುವ ಘಟನೆಯ ಮಾಹಿತಿಯನ್ನು ಸಲ್ಲಿಕೆ ಮಾಡಲಾಗಿದೆ. ಅದನ್ನು ಪರಿಗಣಿಸದೇ ಸಿಎಟಿ ಆದೇಶ ಮಾಡಿದೆ ಎಂದು ಸರ್ಕಾರ ಆಕ್ಷೇಪಿಸಿದೆ.
ಮ್ಯಾಜಿಸ್ಟೀರಿಯಲ್ ತನಿಖೆ ಮತ್ತು ನ್ಯಾಯಾಂಗ ತನಿಖಾ ಆಯೋಗ ರಚಿಸಿರುವುದನ್ನು ಸಿಎಟಿ ತಪ್ಪಾಗಿ ಅರ್ಥೈಸಿದ್ದು, ಸರ್ಕಾರ ಕಾಲ್ತುಳಿತಕ್ಕೆ ಯಾರು ಕಾರಣ ಎಂಬುದನ್ನು ಇನ್ನಷ್ಟೇ ಪತ್ತೆಹಚ್ಚಬೇಕಿದೆ ಎಂಬ ನಿರ್ಧಾರಕ್ಕೆ ಬಂದಿದೆ. ಘಟನೆಯ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದು, ಕೇಂದ್ರ ಸರ್ಕಾರ ವಿಕಾಸ್ ಕುಮಾರ್ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಿದೆ. ಇದು ಸಿಎಟಿಯಲ್ಲಿ ತೀರ್ಪು ಕಾಯ್ದಿರಿಸಿದ ಬಳಿಕ ನಡೆದಿರುವ ಘಟನೆಯಾಗಿದ್ದು, ಅದನ್ನು ಮೆಮೊದ ಮೂಲಕ ಸಿಎಟಿ ಗಮನಕ್ಕೆ ತರಲಾಗಿತ್ತು. ಇದನ್ನೂ ಸಿಎಟಿಯು ಪರಿಗಣಿಸಿಲ್ಲ ಎಂದು ಸರ್ಕಾರದ ಅರ್ಜಿಯಲ್ಲಿ ದೂರಲಾಗಿದೆ.
ಪೂರ್ವಾಗ್ರಹಪೀಡಿತ ನಡೆ:
ಅಧಿಕಾರಿಗಳ ಅಮಾನತನ್ನು ಈ ಹಂತದಲ್ಲಿ ತೆರವು ಮಾಡುವುದರಿಂದ ತನಿಖೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ಸಾಕ್ಷಿಗಳ ಪರಿಶೀಲನೆಗೆ ಸಮಸ್ಯೆ ಉಂಟು ಮಾಡಲಿದ್ದು, ಸಾಕ್ಷ್ಯ ತಿರುಚುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಅಧಿಕಾರಿಗಳನ್ನು ಸೇವೆಯಿಂದ ಹೊರಗಿಡುವುದು ಅಗತ್ಯವಾಗಿದೆ. ವಿಕಾಸ್ ಕುಮಾರ್ ತಮ್ಮ ಅಮಾನತು ಮಾತ್ರ ರದ್ದುಪಡಿಸುವಂತೆ ಕೋರಿದ್ದಾರೆ. ಆದರೆ, ಸಿಎಟಿ ವಿಕಾಸ್ ಅಲ್ಲದೇ ಐಪಿಎಸ್‌ಯೇತರ ಅಧಿಕಾರಿಗಳ ಅಮಾನತಿಗೂ ಸಂಬಂಧಿಸಿದಂತೆ ಉಲ್ಲೇಖಿಸಿರುವುದರಿಂದ ನ್ಯಾಯಾಂಗ ಮಿತಿ ಮೀರಿದ ನಡೆಯಾಗಿದ್ದು, ಪೂರ್ವಾಗ್ರಹ ಪೀಡಿತವಾಗಿ ವ್ಯಾಪ್ತಿ ಮೀರಿದ ವರ್ತನೆಯಾಗಿದೆ. ಸಿಎಟಿ ಮುಂದೆ ಬಾರದ ಇತರ ನಾಲ್ವರು ಅಧಿಕಾರಿಗಳನ್ನು ಮತ್ತೆ ಸೇವೆಗೆ ನೇಮಕ ಮಾಡುವಂತೆ ಆದೇಶದಲ್ಲಿ ಉಲ್ಲೇಖಿಸಿದೆ. ವ್ಯಕ್ತಿಗತ ಮಾಹಿತಿ ಪರಿಶೀಲಿಸದೇ ನೇಮಕಾತಿಗೆ ಶಿಫಾರಸು ಮಾಡಿರುವುದು ಅಸಮರ್ಥನೀಯ. ಇದು ಸಿಎಟಿಯ ಪೂರ್ವಾಗ್ರಹಪೀಡಿತ ನಡೆಯಾಗಿದೆ ಎಂದು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.
Related Articles
Thank you for your comment. It is awaiting moderation.
Comments (0)