ಪ್ರಚೋದನಕಾರಿ ಭಾಷಣ; ಪ್ರಕರಣ ರದ್ದು ಕೋರಿದ್ದ ಅರ್ಜಿ ಹಿಂಪಡೆದ ಈಶ್ವರಪ್ಪ
- by Jagan Ramesh
- October 23, 2025
- 8 Views

ಬೆಂಗಳೂರು: ಶಿವಮೊಗ್ಗದ ರಾಗಿಗುಡ್ಡದಲ್ಲಿ 2023ರಲ್ಲಿ ನಡೆದ ಗಲಭೆ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ವೇಳೆ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹಿಂಪಡೆದುಕೊಂಡಿದ್ದಾರೆ.
ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಎಫ್ಐಆರ್ ಮತ್ತದರ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದು ಕೋರಿ ಕೆ.ಎಸ್. ಈಶ್ವರಪ್ಪ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಿತ್ತು.
ಅರ್ಜಿದಾರರ ಪರ ಹಾಜರಿದ್ದ ವಕೀಲ ಎಂ. ವಿನೋದ್ ಕುಮಾರ್, ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಕಾನೂನಿನಲ್ಲಿ ಇರುವ ಅವಕಾಶಗಳಡಿ ಹೈಕೋರ್ಟ್‌ಗೆ ಸೂಕ್ತ ಅರ್ಜಿ ಸಲ್ಲಿಸಲಾಗುವುದು. ಆದ್ದರಿಂದ, ಅರ್ಜಿ ಹಿಂಪಡೆಯಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಹೊಸದಾಗಿ ಸೂಕ್ತ ಅರ್ಜಿ ಸಲ್ಲಿಸಲಾಗುವುದು. ಅದ್ದಕ್ಕಾಗಿ ಹಾಲಿ ಅರ್ಜಿಯನ್ನು ವಾಪಸ್ ಪಡೆದುಕೊಳ್ಳುವುದಾಗಿ ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ. ಆದ್ದರಿಂದ, ನ್ಯಾಯಾಲಯದ ಮುಂದಿರುವ ಹಾಲಿ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಆದೇಶಿಸಿತು.
ಪ್ರಕರಣವೇನು?
ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ ಎಂಬ ಕಾರಣಕ್ಕೆ ಗಲಭೆ ನಡೆದಿತ್ತು. ಸರ್ಕಾರದ ಹಿಂದು ವಿರೋಧಿ ಧೋರಣೆ ಖಂಡಿಸಿ 2023ರ ಅಕ್ಟೋಬರ್ 12ರಂದು ಬಿಜೆಪಿ ಪ್ರತಿಭಟನೆ ನಡೆಸಿತ್ತು. ಇದರಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದ ಕೆ.ಎಸ್. ಈಶ್ವರಪ್ಪ, ಇಲ್ಲಿವರೆಗೆ ಹಿಂದು ಸಮಾಜ ಕಾನೂನು ಕೈಗೆತ್ತಿಕೊಂಡಿಲ್ಲ. ಹರ್ಷನ ಕೊಲೆಯಾದಾಗ ನಾವು ಲಾಂಗು, ಮಚ್ಚು ಹಿಡಿದುಕೊಂಡು ಮುಸ್ಲಿಮರ ಬೀದಿಗೆ ಹೋಗಿದ್ದರೆ ಮಾರಿ ಜಾತ್ರೆಯಲ್ಲಿ ಕುರಿ ಕಡಿದಂಗೆ ಕಡಿದು ಹಾಕಿ ಬಿಡುತ್ತಿದ್ದಿವಿ ಎಂದು ಹೇಳಿದ್ದರು. ಇದರ ವಿರುದ್ಧ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರಿಂದ, ಪ್ರಕರಣ ರದ್ದು ಕೋರಿ ಈಶ್ವರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.
Comments (0)