ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ತಾಜ್ ಅಲಿ ನದಾಫ್ ಪ್ರಮಾಣ ಸ್ವೀಕಾರ; ಪ್ರತಿಜ್ಞಾವಿಧಿ ಬೋಧಿಸಿದ ಸಿಜೆ ಅಂಜಾರಿಯಾ
- by Jagan Ramesh
- February 17, 2025
- 156 Views

ಬೆಂಗಳೂರು: ರಾಜ್ಯ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ತಾಜ್ ಅಲಿ ಮೌಲಾಸಾಬ್ ನದಾಫ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಸೋಮವಾರ ಪ್ರಮಾಣವಚನ ಬೋಧಿಸಿದರು.
ಬೆಂಗಳೂರು ಪ್ರಧಾನ ಪೀಠದ ಕೋರ್ಟ್ ಹಾಲ್ ಸಂಖ್ಯೆ 1ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಿ ಮಾತನಾಡಿದ ನ್ಯಾಯಮೂರ್ತಿ ತಾಜ್ ಅಲಿ ನದಾಫ್, ಈ ಘನ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ನನಗೆ ಒದಗಿ ಬಂದಿದ್ದು, ಮುಖ್ಯ ನ್ಯಾಯಮೂರ್ತಿ ಅಂಜಾರಿಯಾ ಮತ್ತು ಸಹೋದ್ಯೋಗಿ ನ್ಯಾಯಮೂರ್ತಿಗಳ ಮಾರ್ಗದರ್ಶನ ಕೋರುವುದಾಗಿ ತಿಳಿಸಿದರು.
ರಾಜ್ಯ ಹೈಕೋರ್ಟ್‌ನಲ್ಲಿ 62 ನ್ಯಾಯಮೂರ್ತಿಗಳ ಹುದ್ದೆಯಿದ್ದು, ತಾಜ್ ಅಲಿ ನದಾಫ್ ಅವರ ನೇಮಕಾತಿಯಿಂದಾಗಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಇನ್ನೂ ನ್ಯಾಯಮೂರ್ತಿಗಳ 12 ಹುದ್ದೆಗಳು ಖಾಲಿ ಇವೆ.
ನೂತನ ನ್ಯಾಯಮೂರ್ತಿಗಳ ಕಿರು ಪರಿಚಯ:
ನ್ಯಾಯಮೂರ್ತಿ ತಾಜ್ ಅಲಿ ನದಾಫ್ ಅವರು 1976ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನಲ್ಲಿ ಜನಿಸಿದ್ದಾರೆ. ಅವರ ತಂದೆ ಮೌಲಾ ಸಾಬ್ ನದಾಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಕಾರವಾರ ಜಿಲ್ಲೆಯ ಪೊಲೀಸ್ ಪ್ರಧಾನ ಕಚೇರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಬೆಂಗಳೂರಿನ ಚಾಮರಾಜಪೇಟೆಯ ಸೇಂಟ್ ಜೋಸೆಫ್ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದಿದ್ದು, ಕೆಎಲ್‌ಸಿ ಸೊಸೈಟಿಯ ನಿಜಲಿಂಗಪ್ಪ ಕಾಲೇಜಿನಲ್ಲಿ ಪಿಯುಸಿ ಪೂರೈಸಿದ್ದಾರೆ. ಬೆಂಗಳೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಬಿಎ, ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ.
ರಾಜ್ಯ ವಕೀಲರ ಪರಿಷತ್‌ನಲ್ಲಿ ನೋಂದಾಯಿಸಿಕೊಂಡ ಬಳಿಕ ವಕೀಲರಾದ ಕೆ. ಅಪ್ಪಾರಾವ್, ಅಶೋಕ್ ಆರ್. ಕಲ್ಯಾಣಶೆಟ್ಟಿ ಅವರ ಕಚೇರಿಯಲ್ಲಿ ವೃತ್ತಿ ಬದುಕು ಆರಂಭಿಸಿದ್ದರು. ವಕೀಲ ಪಿ. ಕೆ. ಪೊನ್ನಪ್ಪ ಅವರ ಮಾರ್ಗದರ್ಶನದಲ್ಲಿ ವಿಚಾರಣಾ ನ್ಯಾಯಾಲಯದಲ್ಲೂ ವಕೀಲಿಕೆ ಮಾಡಿದ್ದಾರೆ. ಸಿವಿಲ್, ಕ್ರಿಮಿನಲ್ ವಿಭಾಗದಲ್ಲಿ ಹೆಚ್ಚು ನೈಪುಣ್ಯತೆ ಸಾಧಿಸಿರುವ ನದಾಫ್ ಅವರು ಹೈಕೋರ್ಟ್‌ನ ಧಾರವಾಡ ಸಂಚಾರಿ ಪೀಠ ಆರಂಭವಾದ ನಂತರ ಧಾರವಾಡದಲ್ಲಿ ನೆಲೆಸಿ ವೃತ್ತಿ ಮುಂದುವರಿಸಿದ್ದರು. ನಾಗರಿಕ, ಸಾಂವಿಧಾನಿಕ, ಕಾರ್ಮಿಕ ಮತ್ತು ಅಪರಾಧಿಕ ವಿಷಯಗಳಲ್ಲಿ ವಕೀಲಿಕೆ ನಡೆಸುವ ಮೂಲಕ ಅಲ್ಪಾವಧಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಪ್ರಖ್ಯಾತ ವಕೀಲರಾಗಿ ಹೆಸರು ಮಾಡಿದ್ದಾರೆ.
Related Articles
Thank you for your comment. It is awaiting moderation.
Comments (0)