ಎಪಿಪಿ ನೇಮಕಾತಿಯಲ್ಲಿ ಅಕ್ರಮ ಆರೋಪ; ರಿಟ್ ಅರ್ಜಿಯನ್ನು ಪಿಐಎಲ್ ಆಗಿ ಪರಿವರ್ತಿಸಿದ ಹೈಕೋರ್ಟ್

ಬೆಂಗಳೂರು: ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶ ನೀಡಿ ಐದು ವರ್ಷ ಕಳೆದರೂ ಸರ್ಕಾರ ಆ ಆದೇಶವನ್ನು ಪಾಲನೆ ಮಾಡಿಲ್ಲ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ (ಪಿಐಎಲ್) ಪರಿವರ್ತಿಸಿದೆ.

ವಕೀಲೆ ಸುಧಾ ಕಾಟ್ವಾ ಸಲ್ಲಿಸಿದ್ದ ರಿಟ್ ಅರ್ಜಿ ಕುರಿತು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಅರ್ಜಿಯಲ್ಲಿ ಅರ್ಜಿದಾರರು ಯಾವುದೇ ವೈಯಕ್ತಿಕ ಪರಿಹಾರ ಕೇಳುತ್ತಿಲ್ಲ. ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ವಿಷಯ ಸಾರ್ವಜನಿಕ ಮಹತ್ವದ್ದಾಗಿದೆ. ಆದ್ದರಿಂದ, ಈ ಅರ್ಜಿಯನ್ನು ಪಿಐಎಲ್ ಆಗಿ ಪರಿವರ್ತಿಸಿ ಸಂಬಂಧಪಟ್ಟ ನ್ಯಾಯಪೀಠದ ಮುಂದೆ ಇರಿಸಬೇಕೆಂದು ರಿಜಿಸ್ಟ್ರಾರ್‌ಗೆ ನಿರ್ದೇಶಿಸಿತು.

ಮನವಿ ಏನು?
ಎಪಿಪಿ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಬೇಕು. ಜತೆಗೆ, ಅಕ್ರಮ ನೇಮಕಾತಿಗೆ ಕಾರಣರಾದ ಅಧಿಕಾರಿಗಳಿಂದ 10 ಲಕ್ಷ ರೂ. ವಸೂಲಿ ಮಾಡಬೇಕು. ತನಿಖಾ ವರದಿಯನ್ನು 6 ತಿಂಗಳಲ್ಲಿ ನ್ಯಾಯಾಲಯಕ್ಕೆೆ ಸಲ್ಲಿಸಬೇಕು ಎಂದು 2020ರ ಫೆಬ್ರವರಿ 7ರಂದು ಹೈಕೋರ್ಟ್ ಆದೇಶ ನೀಡಿತ್ತು.

ಆದರೆ, ಐದು ವರ್ಷ ಕಳೆದರೂ ನ್ಯಾಯಾಲಯದ ಆದೇಶವನ್ನು ಸರ್ಕಾರ ಪಾಲಿಸಿಲ್ಲ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಲಾಗಿದ್ದು, ಹೈಕೋರ್ಟ್ ಆದೇಶ ಪಾಲನೆ ಮಾಡಿ, ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ನೇಮಕಾತಿಗೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳನ್ನು ಪತ್ತೆೆ ಮಾಡಲು ತನಿಖಾ ಸಮಿತಿ ರಚಿಸಲು ಗೃಹ ಇಲಾಖೆಗೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Related Articles

Comments (0)

Leave a Comment