ಹುಬ್ಬಳ್ಳಿ ಎನ್ಕೌಂಟರ್ ಪ್ರಕರಣ; ಆರೋಪಿಯ ಮೃತದೇಹ ಸಮಾಧಿ ಮಾಡಲು ಹೈಕೋರ್ಟ್ ಅಸ್ತು
- by Jagan Ramesh
- April 28, 2025
- 61 Views

ಬೆಂಗಳೂರು: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಆರೋಪ ಪ್ರಕರಣದಲ್ಲಿ ಪೊಲೀಸ್ ಎನ್ಕೌಂಟರ್ಗೆ ಬಲಿಯಾಗಿದ್ದ ಬಿಹಾರ ಮೂಲದ ವಲಸೆ ಕಾರ್ಮಿಕ ರಿತೇಶ್ ಕುಮಾರ್ ಮೃತದೇಹವನ್ನು ಸಮಾಧಿ ಮಾಡಲು ಅನುಮತಿ ನೀಡಿರುವ ಹೈಕೋರ್ಟ್, ಪ್ರಕರಣದ ಬಗ್ಗೆೆ ಶುಕ್ರವಾರ (ಮೇ 2) ಸಮಗ್ರ ಆದೇಶ ಹೊರಡಿಸುವುದಾಗಿ ತಿಳಿಸಿದೆ.
ಎನ್ಕೌಂಟರ್ಗೆ ಬಲಿಯಾಗಿರುವ ಆರೋಪಿಯ ಮೃತದೇಹ ಇಡೀ ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯವಾಗಿದೆ. ಆದ್ದರಿಂದ, ಮೃತದೇಹವನ್ನು ದಹನ ಮಾಡದಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿಯ ಕಳೆದ ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಹೈಕೋರ್ಟ್ ನಿರ್ದೇಶನದಂತೆ ಮೇ 15ರಂದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತನ ದೇಹದ ಭಾಗಗಳ ಮಾದರಿಯನ್ನು ಸಂಗ್ರಹಿಸಿ, ಸಂರಕ್ಷಿಸಲಾಗಿದೆ. ಏಪ್ರಿಲ್ 14ರಿಂದ ಮೃತನ ಶವವನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಎಲ್ಲ ಪ್ರಯತ್ನಗಳ ಹೊರತಾಗಿಯೂ ಶವ ಕೊಳೆತಿರುವ ಪ್ರಮಾಣ ಹೆಚ್ಚಾಗಿರುವುದರಿಂದ, ಶವವನ್ನು ಸಮಾಧಿ ಮಾಡಬೇಕಿದೆ. ಮುಂದೆ ತನಿಖೆಗೆ ಅಗತ್ಯ ಬಿದ್ದಲ್ಲಿ ಶವವನ್ನು ಹೊರತೆಗೆಯಬಹುದಾಗಿದೆ. ಶವವನ್ನು ಮತ್ತಷ್ಟು ಕೊಳೆಯುವುದನ್ನು ತಡೆಯಲು ಸಮಾಧಿ ಮಾಡುವ ಅಗತ್ಯವಿದೆ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.
ಸೋಮವಾರ ಸಹ ಅಡ್ವೊಕೇಟ್ ಜನರಲ್ ತಮ್ಮ ಮನವಿ ಪುನರುಚ್ಛರಿಸಿ, ಶವ ಸಮಾಧಿ ಮಾಡಲು ಅನುಮತಿ ನೀಡುವಂತೆ ಕೋರಿದು. ಅದನ್ನು ಮಾನ್ಯ ಮಾಡಿದ ನ್ಯಾಯಪೀಠ, ಮೃತ ದೇಹವನ್ನು ಸಮಾಧಿ ಮಾಡಲು ಅನುಮತಿ ನೀಡಿತು.
ಇದೇ ವೇಳೆ, ಘಟನೆಯ ನಂತರ ಪೋಕ್ಸೊ ಕಾಯ್ದೆಯಡಿ ಹಾಗೂ ಎನ್ಕೌಂಟರ್ಗೆ ಸಂಬಂಧಿಸಿದಂತೆ ದಾಖಲಾಗಿರುವ ಎರಡೂ ಎಫ್ಐಆರ್ಗಳ ಇಂಗ್ಲಿಷ್ ಅನುವಾದದ ಪ್ರತಿಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದ ಪೀಠ, ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು, ಆರೋಪಿಯ ಎನ್ಕೌಂಟರ್ ಬಗ್ಗೆಯೂ ತನಿಖೆ ಆಗಬೇಕು ಎಂಬ ಮತ್ತಿತರ ಅರ್ಜಿದಾರರ ಮನವಿ ಸೇರಿ ಇಡೀ ಪ್ರಕರಣದ ಬಗ್ಗೆ ಸಮಗ್ರ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿ, ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.
Comments (0)