ರೌಡಿ ಗುಡ್ಡೆ ಭರತ್ ಬಂಧನ ಎತ್ತಿಹಿಡಿದ ಹೈಕೋರ್ಟ್; ಪತ್ನಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಜಾ
- by Prashanth Basavapatna
- June 30, 2025
- 284 Views

ಬೆಂಗಳೂರು: ಕೊಲೆಯತ್ನ, ಅಪಹರಣ ಮತ್ತು ಅತ್ಯಾಚಾರ ಸೇರಿ ಹಲವು ಗಂಭೀರ ಅಪರಾಧ ಕೃತ್ಯಗಳಲ್ಲಿ ನಿರಂತವಾಗಿ ತೊಡಗಿಸಿಕೊಂಡ ಆರೋಪದ ಮೇಲೆ ಟಿಂಬರ್ ಲೇಔಟ್ ರೌಡಿ ಎನ್. ಭರತ್ ಕುಮಾರ್ ಅಲಿಯಾಸ್ ಗುಡ್ಡೆ ಭರತ್ ಎಂಬಾತನನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿರುವ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಭರತ್ ಬಂಧನ ಪ್ರಶ್ನಿಸಿ ಆತನ ಪತ್ನಿ ರೂಪಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಮನ್ಮದ ರಾವ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಆದೇಶದಲ್ಲೇನಿದೆ?
ಗಂಭೀರ ಅಪರಾಧ ಕೃತ್ಯಗಳ ಸಂಬಂಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಭರತ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. ರೌಡಿಶೀಟ್ ಸಹ ನಿರ್ವಹಣೆ ಮಾಡಲಾಗುತ್ತಿದೆ. ಭರತ್‌ನನ್ನು ಬಂಧಿಸಿ ರಿಮ್ಯಾಂಡ್‌ಗೆ ಕಳುಹಿಸಿದ್ದರೂ, ಅವನ ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬಂಧಿತನು ಉತ್ತಮ ಜೀವನ ನಡೆಸಲು ನೀಡಿದ ಅವಕಾಶವನ್ನು ಬಳಸಿಕೊಳ್ಳದೆ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದಾನೆ. ಆ ಮೂಲಕ ಸಮಾಜದ ಸ್ವಾಸ್ಥ್ಯ ನಾಶ ಮಾಡುತ್ತಾ, ಸಾರ್ವಜನಿಕ ಸುವ್ಯವಸ್ಥೆಗೆ ಮಾರಕ ಆಗಿದ್ದಾನೆ. ಆದ್ದರಿಂದ, ಬೆಂಗಳೂರು ನಗರದ ಸಾರ್ವಜನಿಕ ಸುವ್ಯವಸ್ಥೆ ಮತ್ತು ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಆತನನ್ನು ಬಂಧನದಲ್ಲಿಡುವುದು ಸಮಂಜಸವಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಬಂಧನ ಸಮರ್ಥಿಸಿಕೊಂಡಿದ್ದ ಸರ್ಕಾರ:
ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಪಿ.ತೇಜೇಶ್ ವಾದ ಮಂಡಿಸಿ, ಭರತ್ ಎಸಗುತ್ತಿದ್ದ ಅಪರಾಧ ಕೃತ್ಯಗಳನ್ನು ಪರಿಗಣಿಸಿ ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ 2021ರ ಜನವರಿ 8ರಂದು ಬಿ ಕೆಟಗರಿ ರೌಡಿಶೀಟ್ ತೆರೆಯಲಾಗಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾದಂತೆ ಹಲವು ಬಾರಿ ನೀಡಿದ ಸೂಚನೆಗಳನ್ನೂ ಲೆಕ್ಕಿಸದೆ ಪದೇಪದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಆತನ ಕೃತ್ಯಗಳನ್ನು ಮೊಟಕುಗೊಳಿಸಲು ಮತ್ತು ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಬಂಧನ ಪ್ರಾಧಿಕಾರ ಎಲ್ಲ ಕಾನೂನುಗಳನ್ನು ಪರಿಶೀಲಿಸಿದ ನಂತರವೇ ಗೂಂಡಾ ಕಾಯ್ದೆಯಡಿ ಬಂಧಿಸಲು 2025ರ ಜನವರಿ 16ರಂದು ಆದೇಶಿಸಿದೆ. ಈ ಕ್ರಮ ಕಾನೂನುಬದ್ಧವಾಗಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು. ಈ ವಾದವಮ್ನು ಪುರಸ್ಕರಿಸಿರುವ ಹೈಕೋರ್ಟ್, ಭರತ್ ಬಂಧನ ಆದೇಶವನ್ನು ಎತ್ತಿಹಿಡಿದಿದೆ.
ಪ್ರಕರಣವೇನು?
ನಗರದಲ್ಲಿ 2016ರಿಂದಲೂ ಗುಂಪು ಕಟ್ಟಿಕೊಂಡು ಕೊಲೆಯತ್ನ, ವಸೂಲಿ, ಹಲ್ಲೆ, ಅಪಹರಣ, ಜೀವ ಬೆದರಿಕೆ, ಅತ್ಯಾಚಾರ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಸೇರಿ ವಿವಿಧ ಆರೋಪಗಳ ಸಂಬಂಧ ಭರತ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ. ಇದರಿಂದ, ಮುಚ್ಚರಿಕೆ ಕ್ರಮವಾಗಿ ಆತನ ಬಂಧನ ಮಾಡಲು 2025ರ ಜನವರಿ 16ರಂದು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದರು.
ಈ ಆದೇಶವನ್ನು ರಾಜ್ಯ ಸರ್ಕಾರ 2025ರ ಜನವರಿ 22ರಂದು ಅನುಮೋದಿಸಿತ್ತು. ನಂತರ ಗೂಂಡಾ ಕಾಯ್ದೆಯಡಿ ಫೆಬ್ರವರಿ 13ರಿಂದ 1 ವರ್ಷ ಕಾಲ ಬಂಧನದಲ್ಲಿಡಲು ಫೆಬ್ರವರಿ 2ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಭರತ್ ಪತ್ನಿ ರೂಪಾ, ಪತಿಯನ್ನು ಅಕ್ರಮವಾಗಿ ಬಂಧನದಲ್ಲಿ ಇಡಲಾಗಿದೆ. ನಗರ ಪೊಲೀಸ್ ಆಯುಕ್ತರ ಮತ್ತು ಸರ್ಕಾರದ ಆದೇಶಗಳು ಸಂವಿಧಾನಬಾಹಿರವಾಗಿವೆ ಎಂದು ಆಕ್ಷೇಪಿಸಿದ್ದರು.
Related Articles
Thank you for your comment. It is awaiting moderation.
Comments (0)