ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣ; ಧರ್ಮಸ್ಥಳದಲ್ಲಿ ಉದ್ದೇಶಿತ ಪ್ರತಿಭಟನೆಗೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು: ಬೆಳ್ತಂಗಡಿ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಏಪ್ರಿಲ್ 6ರಂದು ಧರ್ಮಸ್ಥಳದಲ್ಲಿ ವಿವಿಧ ಸಂಘಟನೆಗಳು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಹೈಕೋರ್ಟ್​ ತಾತ್ಕಲಿಕ ತಡೆಯಾಜ್ಞೆ ನೀಡಿದೆ.

ಉದ್ದೇಶಿತ ಪ್ರತಿಭಟನೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಧನಕೀರ್ತಿ ಆರಿಗ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿ ಕುರಿತ ಮುಂದಿನ ವಿಚಾರಣೆಯವರೆಗೆ ಪ್ರತಿಭಟನೆ ನಡೆಸಬಾರದು ಎಂದು ಸೂಚಿಸಿದೆ. ಜತೆಗೆ, ಪ್ರತಿಭಟನೆ ಆಯೋಜಕರಿಗೆ ತುರ್ತು ನೋಟಿಸ್ ಜಾರಿಗೊಳಿಸಿ, ಅರ್ಜಿ ವಿಚಾರಣೆ ಮುಂದೂಡಿದೆ.

ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಸಂತೋಷ್‌ ರಾವ್‌ ಅವರನ್ನು ನಿರಪರಾಧಿ ಎಂದು ವಿಚಾರಣಾ ನ್ಯಾಯಾಲಯ ಘೋಷಿಸಿತ್ತು. ಇದರಿಂದ, ಕೊಲೆಗೆ ಕಾರಣವೇನು, ನಿಜವಾದ ಕೊಲೆಗಾರರು ಯಾರು ಎಂಬುದನ್ನು ಪತ್ತೆ ಹಚ್ಚಲು ಸರ್ಕಾರವನ್ನು ಆಗ್ರಹಿಸಿ ವಿವಿಧ ಸಂಘಟನೆಗಳು ಏಪ್ರಿಲ್ 6ರಂದು ಬೆಂಗಳೂರು ಹಾಗೂ ಧರ್ಮಸ್ಥಳದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದವು.

ಬೆಂಗಳೂರು ನಗರದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡದ ಪೊಲೀಸರ ಕ್ರಮ ಪ್ರಶ್ನಿಸಿ ಕೆಲ ಸಂಘಟನೆಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಕೆಲ ದಿನಗಳ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಶಾಂತಿಯುತವಾಗಿ ಸಭೆ ನಡೆಸಿ, ಚರ್ಚಿಸಬಹುದು ಮಧ್ಯಂತರ ಆದೇಶ ಮಾಡಿತ್ತು. ಈ ಮಧ್ಯೆ ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು, ಏಪ್ರಿಲ್ 6ರಂದು ನಡೆಸಲು ಉದ್ದೇಶಿಸಲಾಗಿರುವ ಪ್ರತಿಭಟನೆಗೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿದ್ದರು.

ಹೈಕೋರ್ಟ್ ಹೇಳಿದ್ದೇನು?
ಅರ್ಜಿದಾರರು ತಮ್ಮ ಅರ್ಜಿಯೊಂದಿಗೆ ಕೆಲ ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಲಗತ್ತಿಸಿದ್ದಾರೆ. ಪ್ರತಿಭಟನೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗಿಯಾಗುವ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದರೆ, ಅವರು ಧರ್ಮಸ್ಥಳ ದೇವಸ್ಥಾನಕ್ಕೆ ನುಗ್ಗುವ ಸಾಧ್ಯತೆಯನ್ನು ಆ ಸಂದೇಶಗಳು ಸೂಚಿಸುತ್ತವೆ. ಇದು ಈ ಹಿಂದೆ ಸಲ್ಲಿಸಲಾದ ಅರ್ಜಿಯ ಉದ್ದೇಶ ಆಗಿರಲಿಲ್ಲ ಹಾಗೂ ಹೈಕೋರ್ಟ್‌ ಈ ಹಿಂದೆ ನೀಡಿದ್ದ ಅನುಮತಿಯ ಹಿಂದಿನ ಉದ್ದೇಶವೂ ಆಗಿರಲಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಏಪ್ರಿಲ್ 6ರಂದು ಧರ್ಮಸ್ಥಳದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಪ್ರತಿಭಟನೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿತು.

Related Articles

Comments (0)

Leave a Comment