ಪಿಡಿಒ ರಶ್ಮಿ ವಿರುದ್ಧದ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ
- by Prashanth Basavapatna
- February 6, 2026
- 8 Views
ಬೆಂಗಳೂರು: ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗದ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ದೊಡ್ಡಬಳ್ಳಾಪುರದ ಕೋನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಕೊಠಡಿಗೆ ಹೋಗುವುದಿಲ್ಲ ಎಂದು ಹೇಳಿದ ಆರೋಪದಲ್ಲಿ ಪಿಡಿಒ ಎನ್. ರಶ್ಮಿ ವಿರುದ್ಧ ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕೋನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಚಾಂದಿನಿ ನೀಡಿದ್ದ ದೂರು ಆಧರಿಸಿ ದೊಡ್ಡಬಳ್ಳಾಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಪಿಡಿಒ ಎನ್. ರಶ್ಮಿ ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.
ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಭಾಗಿಯಾಗಿಲ್ಲ, ದೂರುದಾರೆಯ ಕೊಠಡಿಗೆ ಹೋಗಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರ ವಿರುದ್ಧ ಜಾತಿ ನಿಂದನೆ ಮತ್ತು ಶಾಂತಿ ಕದಡಲು ಉದ್ದೇಶಪೂರ್ವಕವಾಗಿ ಅಪಮಾನ ಮಾಡಿದ ಅಪರಾಧದಡಿ ಎಫ್‌ಐಆರ್ ದಾಖಲಾಗಿದೆ. ರಶ್ಮಿ ಅವರು ವಿವಾದಿತ ದಿನದಂದು ನಡೆದ ಎಲ್ಲ ಕಾರ್ಯಕ್ರಮಗಳಿಗೆ ಹಾಜರಾಗಿದ್ದಾರೆ ಎಂದು ತಿಳಿಸಿರುವ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು, ಆ ಕುರಿತ ಪೋಟೋಗಳನ್ನು ಸಲ್ಲಿಸಿದ್ದಾರೆ. ಎಸ್‌ಸಿ-ಎಸ್‌ಟಿ (ದೌರ್ಜನ್ಯ) ತಡೆ ಕಾಯ್ದೆಯ ದುರುಪಯೋಗಕ್ಕೆ ಈ ಪ್ರಕರಣ ಮತ್ತೊಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟ ಪೀಠ, ಅರ್ಜಿದಾರರ ವಿರುದ್ದ ಎಫ್‌ಐಆರ್‌ಗೆ ಸಂಬಂಧಿಸಿದ ಎಲ್ಲ ತನಿಖೆಗೆ ತಡೆಯಾಜ್ಞೆ ನೀಡಿತು.
ಜತೆಗೆ, ಪ್ರತಿವಾದಿಗಳಾದ ದೊಡ್ಡಬಳ್ಳಾಪುರ ಗ್ರಾಮೀಣಾ ಠಾಣೆ ಪೊಲೀಸರು ಮತ್ತು ಪ್ರಕರಣ ದೂರುದಾರೆ ಕೋನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಚಾಂದಿನಿ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ದೊಡ್ಡಬಳ್ಳಾಪುರ ಗ್ರಾಮೀಣ ಪೊಲೀಸ್ ಠಾಣೆಗೆ 2025ರ ನವೆಂಬರ್ 6ರಂದು ದೂರು ನೀಡಿದ್ದ ಕೋನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಗಿದ್ದ ಚಾಂದಿನಿ, ಅಕ್ಟೋಬರ್ 31ರಂದು ಮಧ್ಯಾಹ್ನ 12 ಗಂಟೆಗೆ ನಾನು ಪಂಚಾಯಿತಿ ಆಡಳಿತ ಮಂಡಳಿ ತುರ್ತು ಸಭೆ ಆಯೋಜಿಸಿದ್ದೆ. ಸಭೆ ನಂತರ ಸಭೆಯ ನಡಾವಳಿಯ ಬಗ್ಗೆ ಚರ್ಚಿಸಲು ಪಿಡಿಒ ರಶ್ಮಿ ಅವರನ್ನು ನನ್ನ ಕೊಠಡಿಗೆ ಕರೆದಿದ್ದೆ. ಆಗ ರಶ್ಮಿ, ನಾನು ನಿನ್ನ ಕೊಠಡಿಗೆ ಏಕೆ ಬರಬೇಕು. ಬೇಕಾದರೆ ನೀನೇ ನನ್ನ ಕೊಠಡಿಗೆ ಬಾ, ಎಸ್‌ಸಿ ಜನಾಂಗದವಳಾದ ನಿನ್ನ ಕೊಠಡಿಗೆ ನಾನು ಬರುವುದಿಲ್ಲ ಎಂದು ಹೇಳಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಭಾಕರ್ ಅವರು ವಾಲ್ಮೀಕಿ ಜಯಂತಿ ಆಚರಣೆ ಮಾಡಲು ಏಕೆ ಬಂದಿಲ್ಲ ಎಂದು ಕೇಳಿದರೆ, ಯಾವ ವಾಲ್ಮೀಕಿ, ಯಾವ ಜಯಂತಿ? ನನಗೇನು ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ಆ ಮೂಲಕ ಪರಿಶಿಷ್ಟ ಜನಾಂಗಕ್ಕೆ ಸೇರಿದ ಮಹಾನ್ ದಾರ್ಶನಿಕ ವಾಲ್ಮೀಕಿ ಅವರನ್ನು ನಿಂದಿಸಿದ್ದಾರೆ ಎಂದು ದೂರಿನಲ್ಲಿ ಚಾಂದಿನಿ ಆರೋಪಿಸಿದ್ದರು. ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದರಿಂದ, ಎಫ್ಐಆರ್ ರದ್ದು ಕೋರಿ ರಶ್ಮಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Related Articles
Thank you for your comment. It is awaiting moderation.


Comments (0)