ದ್ವೇಷ ಭಾಷಣ; ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ಹೈಕೋರ್ಟ್

ಬೆಂಗಳೂರು: ಕೋಮು ದ್ವೇಷ ಹರಡುವಂತಹ ಭಾಷಣ ಮಾಡಿದ ಆರೋಪ ಸಂಬಂಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ತೆಕ್ಕಾರುವಿನ ಎಸ್‌.ಬಿ. ಇಬ್ರಾಹಿಂ ಸಲ್ಲಿಸಿರುವ ದೂರು ಆಧರಿಸಿ ಉಪ್ಪಿನಂಗಡಿ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಹರೀಶ್‌ ಪೂಂಜಾ ಸಲ್ಲಿಸಿರುವ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ರಜಾಕಾಲದ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.

ಅರ್ಜಿ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರ ಹರೀಶ್ ಪೂಂಜಾ ವಿರುದ್ಧದ ಬೇರೆ ಪ್ರಕರಣಗಳಲ್ಲಿ ಹೈಕೋರ್ಟ್‌ನ ಸಮನ್ವಯ ಪೀಠಗಳು ತಡೆ ನೀಡಿರುವುದನ್ನು ಪರಿಗಣಿಸಿ, ಅರ್ಜಿದಾರರ ಕೋರಿಕೆಯಂತೆ ಹಾಲಿ ಪ್ರಕರಣಕ್ಕೆ ತಡೆ ನೀಡುವುದು ಸೂಕ್ತ ಎಂದು ಆದೇಶಿಸಿ, ವಿಚಾರಣೆಯನ್ನು ಜೂನ್‌ 18ಕ್ಕೆ ಮುಂದೂಡಿತು.

ಈ ವೇಳೆ, ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಪ್ರಕರಣ ಸಂಬಂಧ ಈಗಾಗಲೇ ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆದ್ದರಿಂದ, ಸ್ಪಷ್ಟನೆ ನೀಡಬೇಕು ಎಂದು ಕೋರಿದರು. ಆಗ ನ್ಯಾಯಪೀಠ, ಲಿಖಿತ ಆದೇಶದಲ್ಲಿ ಸ್ಪಷ್ಟನೆ ನೀಡಲಾಗುವುದು ಎಂದು ಮೌಖಿಕವಾಗಿ ತಿಳಿಸಿತು.

ಹೀಗಿತ್ತು ವಾದ-ಪ್ರತಿವಾದ:
ಅರ್ಜಿ ವಿಚಾರಣೆ ವೇಳೆ ಹರೀಶ್ ಪೂಂಜಾ ಪರ ವಕೀಲರು ವಾದ ಮಂಡಿಸಿ, ಧರ್ಮ-ಧರ್ಮಗಳ ನಡುವೆ ದ್ವೇಷ ಹಬ್ಬಿಸುವಂಥ ಕೆಲಸವನ್ನು ಅರ್ಜಿದಾರರು ಮಾಡಿಲ್ಲ. ಇಡೀ ದೂರನ್ನು ಓದಿದರೆ ತಪ್ಪಾಗಿ ಸೆಕ್ಷನ್‌ಗಳು ಅನ್ವಯಸಲಾಗಿದೆ. ಆದ್ದರಿಂದ, ಪ್ರಕರಣಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದರು.

ದೂರುದಾರ ಇಬ್ರಾಹಿಂ ಪರ ಹಾಜರಿದ್ದ ವಕೀಲ ಎಸ್‌. ಬಾಲನ್‌, ಮುಸ್ಲಿಂ ಸಮುದಾಯದವರನ್ನು ತೆಕ್ಕಾರಿನ ಕಂತ್ರಿಗಳು ಎಂದು ಪೂಂಜಾ ನಿಂದಿಸಿದ್ದಾರೆ. ಆ ಭಾಷಣದ ವಿಡಿಯೊ ದಾಖಲೆ ಇದೆ. ಅರ್ಜಿದಾರರ ವಿರುದ್ಧ ಇಂಥದ್ದೇ ಆರೋಪ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ 3 ಎಫ್‌ಐಆರ್‌‌ಗಳು ದಾಖಲಾಗಿವೆ. ನೂರು ಎಫ್‌ಐಆರ್‌ ದಾಖಲಾದರೂ ನಾನು ಹೆದರುವುದಿಲ್ಲ ಎಂದು ಅವರು ಸವಾಲೆಸೆದಿದ್ದಾರೆ. ಶಾಸಕರಾದವರು ಸಂವಿಧಾನಕ್ಕೆ ಬದ್ಧವಾಗಿರಬೇಕು. ನಿರ್ದಿಷ್ಟ ಸಮುದಾಯವನ್ನು ವಂಚಕರು ಎಂದಿದ್ದಾರೆ. ಅಲ್ಪಸಂಖ್ಯಾತರನ್ನು ಸಮಾರಂಭಕ್ಕೆ ಆಹ್ವಾನಿಸಬಾರದಿತ್ತು ಎಂದು ಹೇಳಿದ್ದಾರೆ. ನಮ್ಮ ದೇಶ ಸಂವಿಧಾನಕ್ಕೆ ಬದ್ಧವಾಗಿದೆಯೇ ಹೊರತು, ಧಾರ್ಮಿಕ ವಿಚಾರಗಳಿಗಲ್ಲ. ಆದ್ದರಿಂದ, ಪೂಂಜಾ ವಿಚಾರಣೆ ಎದುರಿಸಬೇಕು ಎಂದು ವಾದ ಮಂಡಿಸಿದರು.

ಬಿ.ಎನ್. ಜಗದೀಶ್ ವಾದ ಮಂಡಿಸಿ, ತೆಕ್ಕಾರಿನಲ್ಲಿ ನಡೆದ ಬ್ರಹ್ಮ ಕಳಸೋತ್ಸವಕ್ಕೆ ಎಲ್ಲ ರೀತಿಯ ಸಹಕಾರವನ್ನು ಸ್ಥಳೀಯ ಅಲ್ಪಸಂಖ್ಯಾತ ಸಮುದಾಯ ನೀಡಿದೆ. ಹೀಗಿದ್ದರೂ, ಅರ್ಜಿದಾರರು ಆಕ್ಷೇಪಾರ್ಹ ಭಾಷಣ ಮಾಡಿದ್ದಾರೆ. ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಬಂಧ ಆರೋಪ ಪಟ್ಟಿ ಸಲ್ಲಿಸಿ, ವಿಚಾರಣೆಗೆ ಹಾಜರಾಗದಿದ್ದರಿಂದ ವಿಚಾರಣಾ ನ್ಯಾಯಾಲಯ ಅವರಿಗೆ ಜಾಮೀನುರಹಿತ ವಾರಂಟ್‌ ಸಹ ಜಾರಿ ಮಾಡಿದೆ. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ತಡೆಯಾಜ್ಞೆಯಾಗಿದೆ. ಅರ್ಜಿದಾರರು ವಿಚಾರಣೆ ಎದುರಿಸಬೇಕಿದ್ದು, ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂದು ಕೋರಿದರು.

Related Articles

Comments (0)

Leave a Comment