ಲ್ಯಾಂಬೊರ್ಗಿನಿ ಕಾರು ದಾಖಲೆ ತಿರುಚಿ ವಂಚನೆ ಆರೋಪ: ಮಾಲೀಕನ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಬೆಂಗಳೂರು: ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಐಷಾರಾಮಿ ಲ್ಯಾಂಬೊರ್ಗಿನಿ ಕಾರನ್ನು ತಮ್ಮ ಹೆಸರಿಗೆ ನೊಂದಣಿ ಮಾಡಿಕೊಂಡು ವಂಚಿಸಿದ ಆರೋಪದಲ್ಲಿ ಕಾರ್‌ನ ಮಾಲೀಕರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ನಕಲಿ ದಾಖಲೆ ಸಷ್ಟಿ ಹಾಗೂ ವಂಚನೆ ಆರೋಪದಲ್ಲಿ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಹೈ ಕಾರ್‌ ಕೇರ್‌ (HI CAR CARE) ಮುಖ್ಯಸ್ಥರೂ ಆದ ಲ್ಯಾಂಬೊರ್ಗಿನಿ ಕಾರ್‌ ಮಾಲೀಕ ಜೆ. ರಾಮಕೃಷ್ಣಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿತು.

ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ, ರಾಜ್ಯ ಸರ್ಕಾರವು ಕಾನೂನಿನ ಅನ್ವಯ ಕ್ರಮಕೈಗೊಳ್ಳುವ ಸ್ವಾತಂತ್ರ್ಯವನ್ನು ಕಾಯ್ದಿರಿಸಿ, ಕೋಡಿಗೇಹಳ್ಳಿ ಠಾಣೆಯಲ್ಲಿ ಅರ್ಜಿದಾರರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಲಾಗಿದೆ. ಜಪ್ತಿ ಮಾಡಲಾದ ಸದ್ಯ ಪೊಲೀಸ್‌ ಕಸ್ಟಡಿಯಲ್ಲಿರುವ ಲ್ಯಾಂಬೊರ್ಗಿನಿ ಕಾರನ್ನು ಅರ್ಜಿದಾರರಿಗೆ ಒಂದು ವಾರದಲ್ಲಿ ಮರಳಿಸಬೇಕು. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿರುವ ಬೆಂಗಳೂರು ದಕ್ಷಿಣದ ಹಿರಿಯ ಮೋಟಾರ್‌ ವಾಹನ ಇನ್‌ಸ್ಪೆಕ್ಟರ್‌ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಎಂದು ಆದೇಶಿಸಿದೆ.

ಜತೆಗೆ, ಕಾರಿನ ದತ್ತಾಂಶವನ್ನು ಅಳಿಸಿ ಹಾಕಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ‌ ಮುಚ್ಚಳಿಕೆ ನೀಡಿದ್ದು, ಈ ಸಂಬಂಧ 2 ತಿಂಗಳಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಅಂತೆಯೇ, ಹಿರಿಯ ಮೋಟಾರ್‌ ವಾಹನ ಇನ್‌ಸ್ಪೆಕ್ಟರ್‌ ಎನ್‌. ರಂಜಿತ್‌ ವಿರುದ್ಧದ ಇಲಾಖಾ ತನಿಖೆಯ ವರದಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ನ್ಯಾಯಾಲಯ ತೀರ್ಪು ಪ್ರಕಟಿಸಿದ ಬಳಿಕ ಅರ್ಜಿದಾರರ ಪರ ವಕೀಲ ವೆಂಕಟೇಶ್‌ ಅರಬಟ್ಟಿ ಅವರು, ಝೀರೋ ಎಫ್‌ಐಆರ್ ಬೆನ್ನಿಗೇ ಅರ್ಜಿದಾರರ ವಿರುದ್ಧ ಇನ್ನೊಂದು ಎಫ್‌ಐಆರ್‌ ದಾಖಲಿಸಲಾಗಿದೆ‌ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಮತ್ತೊಂದು ಎಫ್‌ಐಆರ್ ಅನ್ನು ಪ್ರಶ್ನಿಸಲಾಗಿದೆಯೇ ಎಂದು ಕೇಳಿದ ನ್ಯಾಯಪೀಠ, ಅದನ್ನು ಪ್ರಶ್ನಿಸಿದರೆ ಇದೇ ಆದೇಶ ಮಾಡಲಾಗುವುದು ಎಂದು ಮೌಖಿಕವಾಗಿ ಹೇಳಿತು.

ಇಲಾಖಾ ತನಿಖೆ ಕೈಬಿಡಲು ಮನವಿ:
ಈ ವೇಳೆ, ಹಿರಿಯ ಮೋಟಾರ್‌ ವಾಹನ ಇನ್‌ಸ್ಪೆಕ್ಟರ್‌ ಎನ್‌ ರಂಜಿತ್‌ ಅವರ ಪರ ವಕೀಲರು, ಇಲಾಖಾ ತನಿಖೆ ಕೈಬಿಡಬೇಕು. ಕಠಿಣ ಎಚ್ಚರಿಕೆ ನೀಡಬಹುದು. ಅಧಿಕಾರಿಗೆ ಪದೋನ್ನತಿ ಬಾಕಿ ಇದೆ. ಆದೇಶದಿಂದ ಅದಕ್ಕೆ ಹಾನಿಯಾಗುತ್ತದೆ. ಅಧಿಕಾರಿಗೆ ಎಚ್ಚರಿಕೆಯಿಂದ ನಡೆದುಕೊಳ್ಳಲು ಸೂಚಿಸಲಾಗುವುದು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮತ್ತೊಬ್ಬರ ಮನೆಗೆ ನುಗ್ಗಿ ಲ್ಯಾಂಬೊರ್ಗಿನಿ ಕಾರು ತೆಗೆದುಕೊಂಡು ಹೋಗುವ ಅಧಿಕಾರ ಎಲ್ಲಿದೆ. ಅದನ್ನು ರಂಜಿತ್‌ ಅವರು ಮಾಡಬಾರದಿತ್ತು. ಅವರು ಅತ್ಯುತ್ತಮ ಅಧಿಕಾರಿಯಾಗಿರಬಹುದಾದರೂ, ಕಾನೂನಿನ ವ್ಯಾಪ್ತಿಯೊಳಗೆ ನಡೆಯಬೇಕು. ಇದು ಪುನರಾವರ್ತನೆಯಾಗಬಾರದು. ಜೋಶ್‌ ಇದೆ ಎಂದು ಕಾನೂನಿಗೆ ವಿರುದ್ಧವಾಗಿ ನಡೆಯಲಾಗದು. ಅಧಿಕಾರಿ ದೂರುದಾರರಾಗಿ ಹೇಗೆ ಇನ್ನೊಬ್ಬರ ಮನೆಗೆ ನುಗ್ಗಿ ಕಾರನ್ನು ಜಪ್ತಿ ಮಾಡುತ್ತಾರೆ? ಅದನ್ನು ಪೊಲೀಸರಿಗೆ ಬಿಡಬೇಕಿತ್ತು ಎಂದು ಹೇಳಿತು.

ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಅಧಿಕಾರಿ ರಂಜಿತ್‌ ಅವರಿಗೆ ಒಂದು ಬಾರಿ ಅನುಕಂಪ ತೊರಬೇಕು ಎಂದು ಕೋರಿದರು. ಇದಕ್ಕೆ ನ್ಯಾಯಪೀಠ, “ನೋಡೋಣ” ಎಂದು ಹೇಳಿತು.

ಪ್ರಕರಣವೇನು?
ಬೆಂಗಳೂರಿನ ಕಾರ್ ಶೋರೂಂ ಒಂದರಿಂದ 2022ರ ಜೂನ್ 1ರಂದು ಹರ್ಷ ಇನ್ಫ್ರಾ ಕಾನ್ಸ್‌ ಪ್ರೈವೇಟ್‌ ಲಿಮಿಟೆಡ್‌‌ನವರು ಕಪ್ಪು ಬಣ್ಣದ ಲ್ಯಾಂಬೊರ್ಗಿನಿ ಕಾರು ಖರೀದಿಸಿ, ನೋಂದಣಿಗಾಗಿ ತೆಲಂಗಾಣಕ್ಕೆ ತೆಗೆದುಕೊಂಡು ಹೋಗಿದ್ದರು. ಅದನ್ನು ಮೂರು ವರ್ಷ ಬಳಕೆ ಮಾಡಿದ ನಂತರ ಅರ್ಜಿದಾರರಿಗೆ ಮಾರಾಟ ಮಾಡಲಾಗಿತ್ತು.‌ ಈ ಮಧ್ಯೆ, 2025ರ ಡಿಸೆಂಬರ್ 23ರಂದು ಅಪರಿಚಿತ ಮೇಲ್ ಐಡಿ ಮೂಲಕ ಬಂದಿದ್ದ ಇ-ಮೇಲ್‌ನಲ್ಲಿ ಹೈ ಕಾರ್ ಕೇರ್‌ನವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ವಿವಾದಿತ ಲ್ಯಾಂಬೊರ್ಗಿನಿ ಕಾರನ್ನು ತಮ್ಮ ಹೆಸರಿಗೆ ನೊಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿ, ಕಾರ್‌ನ ಫೋಟೋ‌ಗಳ ಸಹಿತ ದೂರು ಬಂದಿತ್ತು.

ಅರ್ಜಿದಾರರು ಕಾರು ನೋಂದಣಿಗೆ ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದ್ದ ಕಸ್ತೂರಿ ನಗರದ ಆರ್‌ಟಿಒ ಕಚೇರಿ ಅಧಿಕಾರಿಗಳು, ದಾಖಲೆಗಳನ್ನು ತಿರುಚಲಾಗಿದ್ದು, ಈ ಸಂಬಂಧ ಕಾರ್‌ನ ಮಾಲೀಕರು ತನಿಖೆಗೆ ಸಹಕರಿಸಿಲ್ಲ. ಆದ್ದರಿಂದ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕಾರನ್ನು ತಮ್ಮ ಹೆಸರಿಗೆ ನೊಂದಣಿ ಮಾಡಿಕೊಂಡು ವಂಚಿಸಿರುವ ಹೈ ಕಾರ್ ಕೇರ್ ಮಾಲೀಕರು ಹಾಗೂ ಕಾರನ್ನು ನೊಂದಣಿ ಮಾಡಿಕೊಳ್ಳದೇ ಮಾರಾಟ ಮಾಡಿರುವ ಹರ್ಷ ಇನ್ಫ್ರಾ ಕಾನ್ಸ್ ಪ್ರೈ. ಲಿ. ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕೋರಿ ದೂರು ದಾಖಲಿಸಿದ್ದರು. ಇದರಿಂದ, ಕಾರು ಮಾಲೀಕರು ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Related Articles

Comments (0)

Leave a Comment