ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ನಿರ್ಬಂಧ ಕೋರಿ ಪಿಐಎಲ್; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
- by LegalSamachar
- August 10, 2024
- 200 Views
ಬೆಂಗಳೂರು: ಕಾವೇರಿ ನದಿ ತೀರದಲ್ಲಿ ಅಸ್ಥಿ ವಿಸರ್ಜನೆ ಸೇರಿ ಇನ್ನಿತರ ಮಾಲಿನ್ಯಕಾರಕ ಚಟವಟಿಕೆಗೆ ನಿರ್ಬಂಧ ವಿಧಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ ವಕೀಲ ಕುಶಾಲ್ ಕುಮಾರ್ ಕೌಶಿಕ್ ಸೇರಿ ಆರು ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಡ್ಯ ಜಿಲ್ಲಾಧಿಕಾರಿ, ಮಂಡ್ಯ ಉಪ ವಿಭಾಗಾಧಿಕಾರಿ, ಶ್ರೀರಂಗಪಟ್ಟಣ ತಹಶೀಲ್ದಾರ್, ಶ್ರೀರಂಗಪಟ್ಟಣ ನಗರಸಭೆಗೆ ನೋಟಿಸ್ ಜಾರಿಗೊಳಿಸಿತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಸೂಚಿಸಿದ ಪೀಠ, ವಿಚಾರಣೆಯನ್ನು ಸೆ.11ಕ್ಕೆ ಮುಂದೂಡಿತು.
ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಖುದ್ದು ವಾದ ಮಂಡಿಸಿದ ಅರ್ಜಿದಾರರು, ಅಸ್ಥಿ ವಿಸರ್ಜನೆ ಕ್ರಿಯೆಗೆ ನಮ್ಮ ತಕರಾರಿಲ್ಲ. ಆದರೆ, ಅದಕ್ಕೊಂದು ನಿಗದಿತ ಜಾಗ ಹಾಗೂ ನಿರ್ದಿಷ್ಠ ಮಾರ್ಗಸೂಚಿ ಇರಬೇಕು. ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತಾಗಬೇಕು ಎಂಬುದಷ್ಟೇ ನಮ್ಮ ಕಾಳಜಿಯಾಗಿದೆ. ಕಾವೇರಿ ನದಿ ತೀರದಲ್ಲಿ ಮಾಲಿನ್ಯ ವಿಪರೀತವಾಗಿದೆ. ಇದನ್ನು ಪರಿಗಣಿಸಿ ನದಿ ತೀರದಲ್ಲಿ ಅಸ್ಥಿ ವಿಸರ್ಜನೆಗೆ ಮಾರ್ಗಸೂಚಿ ರೂಪಿಸಬೇಕು ಎಂದು ಕೋರಿದರು.
ಈ ಹಿಂದೆ ಸಾಮಾನ್ಯವಾಗಿ ಎರಡು ಸ್ಥಳಗಳಲ್ಲಿ ಮಾತ್ರ ಅಸ್ಥಿ ವಿಸರ್ಜನೆ ನಡೆಯುತ್ತಿತ್ತು. ಈಗ ನದಿಯ ತೀರದ ಎಲ್ಲ ಕಡೆಗಳಲ್ಲೂ ಅಸ್ಥಿ ವಿಸರ್ಜನೆ ಮಾಡಲಾಗುತ್ತಿದೆ. ಇದೇ ನೀರನ್ನು ಕುಡಿಯಲು ಬಳಕೆ ಮಾಡಲಾಗುತ್ತಿದೆ. ಕನಿಷ್ಠ ಪಕ್ಷ ಶ್ರೀರಂಗಪಟ್ಟದ ನಿಮಿಷಾಂಭ ದೇವಸ್ಥಾನದ ತೀರದಲ್ಲಿಯಾದರೂ ಅಸ್ಥಿ ವಿಸರ್ಜನೆಯನ್ನು ಕಡ್ಡಾಯವಾಗಿ ನಿಷೇಧಿಸವೇಕು. ರಾಜ್ಯದಲ್ಲಿ ಈಗ ಮುಂಗಾರು ವ್ಯಾಪಕವಾಗಿದ್ದು, ಅರೆಬೆಂದ ಮೂಳೆಗಳು ದೇವಸ್ಥಾನದ ಬಳಿ ಬಂದು ಬೀಳಬಹುದು ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಅರ್ಜಿಯಲ್ಲಿ ಏನಿದೆ?
ಶ್ರೀರಂಗಪಟ್ಟಣದ ಗೋಸಾಯಿ ಘಾಟ್ ಮತ್ತು ನಿಮಿಷಾಂಬ ದೇವಸ್ಥಾನದ ಸಮೀಪ ಅಸ್ಥಿ ವಿಸರ್ಜನೆ ಮತ್ತು ಸಂಬಂಧಿತ ಚಟವಟಿಕೆಯನ್ನು ಸಂಪೂರ್ಣ ನಿಷೇಧಿಸಬೇಕು. ನದಿಗೆ ಹೂವು, ಪ್ಲಾಸ್ಟಿಕ್ ಬ್ಯಾಗ್ ಮತ್ತು ಬಟ್ಟೆ ಎಸೆಯುವವರ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ಅವುಗಳ ಮರುಬಳಕೆಗೆ ವ್ಯವಸ್ಥೆ ಮಾಡಬೇಕು. ನದಿಯ ತೀರದಲ್ಲಿನ ಭೂ ಮಾಲೀಕರು ತಮ್ಮ ಜಮೀನನ್ನು ಅಸ್ಥಿ ವಿಸರ್ಜನೆ ಮತ್ತಿತರರ ಚಟವಟಿಕೆಗೆ ನೀಡಿ ಹಣ ಮಾಡುವುದಕ್ಕೆ ನಿರ್ಬಂಧ ವಿಧಿಸಬೇಕು. ಸಾಮೂಹಿಕ ಸ್ನಾನಕ್ಕೆ ಶ್ಯಾಂಪೂ, ಸೋಪು, ಬಾಡಿ ವಾಷ್, ಡಿಟರ್ಜೆಂಟ್ ಬಳಕೆಗೆ ನಿಷೇಧ ವಿಧಿಸಬೇಕು. ಅಗತ್ಯ ಶೌಚಗೃಹ ನಿರ್ಮಿಸುವ ಜತೆಗೆ ಅಲ್ಲಿ ಬಳಕೆ ಮಾಡಿದ ನೀರನ್ನು ಶುದ್ಧೀಕರಿಸಿ, ನದಿಗೆ ಬಿಡಲು ವ್ಯವಸ್ಥೆ ಮಾಡಬೇಕು. ನದಿಯಲ್ಲಿ ಗೋವುಗಳಿಗೆ ಸ್ನಾನ ಮಾಡಿಸುವುದು ಸೇರಿ ಮಾಲಿನ್ಯಕಾರಕ ಚಟವಟಿಕೆಗೆ ನಿಷೇಧ ಹೇರಬೇಕು ಎಂಬುದೂ ಒಳಗೊಂಡಂತೆ 15ಕ್ಕೂ ಹೆಚ್ಚು ಮನವಿಗಳನ್ನು ಅರ್ಜಿಯಲ್ಲಿ ಮಾಡಲಾಗಿದೆ.
Related Articles
Thank you for your comment. It is awaiting moderation.
Comments (0)