ನಗರದ ಪಿಜಿಗಳಿಂದ ನಿಯಮ ಪಾಲನೆ ಬಗ್ಗೆ ವರದಿ ಸಲ್ಲಿಸುವಂತೆ ಜಿಬಿಎಗೆ ಹೈಕೋರ್ಟ್ ನಿರ್ದೇಶನ
- by Prashanth Basavapatna
- February 16, 2026
- 9 Views
ಬೆಂಗಳೂರು: ನಗರದಲ್ಲಿನ ಪೇಯಿಂಗ್ ಗೆಸ್ಟ್ (ಪಿಜಿ) ಹೌಸ್‌ಗಳು ನಿಯಮಗಳನ್ನು ಪಾಲನೆ ಮಾಡುತ್ತಿವೆಯೇ ಇಲ್ಲವೇ ಎಂಬ ಬಗ್ಗೆ ಫೆಬ್ರವರಿ 18ರಿಂದ 2 ವಾರಗಳ ಕಾಲ ಪರಿಶೀಲನೆ ನಡೆಸಿ ವರದಿ ನೀಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಹೈಕೋರ್ಟ್ ನಿರ್ದೇಶಿಸಿದೆ.
ಸ್ವಚ್ಛತೆ, ಸುರಕ್ಷತೆ, ಸಿಸಿ ಕ್ಯಾಮರಾ ಸೌಲಭ್ಯಗಳ ಕುರಿತು ಇತ್ತೀಚೆಗೆ ರೂಪಿಸಲಾಗಿರುವ ನಿಯಮಗಳನ್ನು ಪಾಲಿಸದ ಪಿ.ಜಿ.ಗಳಿಗೆ ಜಿಬಿಎ ಹಾಗೂ ಪಾಲಿಕೆಗಳು ನೀಡಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ ಪೇಯಿಂಗ್ ಗೆಸ್ಟ್ ಅಕಾಮಡೇಷನ್ ವೆಲ್‌ಫೇರ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಪಿಜಿಗಳನ್ನು ನಡೆಸುತ್ತಿರುವ ಕಟ್ಟಡಗಳು ನಕ್ಷೆ ಅನುಮೋದಿಸಿರುವಂತೆ ನಿರ್ಮಾಣ ಮಾಡಲಾಗಿದೆಯೇ, ಸಿಸಿಟಿವಿ ಅಳವಡಿಕೆ ಮಾಡಲಾಗಿದೆಯೇ ಎನ್ನುವುದೂ ಸೇರಿದಂತೆ ಎಲ್ಲ ಅಂಶಗಳನ್ನು ಜಿಬಿಎ ವೈದ್ಯಾಧಿಕಾರಿ, ನಗರ ಯೋಜನಾಧಿಕಾರಿ ಅವರನ್ನು ಒಳಗೊಂಡ ತಂಡ ಎರಡು ವಾರಗಳ ಕಾಲ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಜಿಬಿಎ ಅಧಿಕಾರಿಗಳು ಪಿಜಿಗಳ ತಪಾಸಣೆ ನಡೆಸುವ ವೇಳೆ ಅರ್ಜಿದಾರರು ಭಾಗವಹಿಸಬಹುದು. ಇಲ್ಲವೇ ತಮ್ಮ ಪ್ರತಿನಿಧಿಗಳನ್ನು ಕಳುಹಿಸಬಹುದು, ಒಂದು ವೇಳೆ ಅವರು ಪರಿಶೀಲನೆ ವೇಳೆ ಹಾಜರಿರದಿದ್ದರೆ ಅಥವಾ ಸಹಕಾರ ನೀಡದಿದ್ದರೆ ಅವರು ನಂತರ ಯಾವುದೇ ಆಕ್ಷೇಪವನ್ನು ಎತ್ತಲು ಅವಕಾಶವಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಹಿಂದಿನ ಬಿಬಿಎಂಪಿ ಮುಖ್ಯ ಆಯುಕ್ತರು 2024ರ ಆಗಸ್ಟ್ 7ರಂದು ನಗರದಲ್ಲಿನ ಪಿಜಿ ಗೆಸ್ಟ್ ಹೌಸ್‌ಗಳು ಪಾಲನೆ ಮಾಡಬೇಕಾದ ಕಡ್ಡಾಯ ನಿಯಮಗಳನ್ನು ಹೊರಡಿಸಿದ್ದಾರೆ. ಆ ನಿಯಮಗಳನ್ನು ವಿವೇಚನೆ ಬಳಸದೆ ರೂಪಿಸಲಾಗಿದೆ. ಜತೆಗೆ ವಲಯವಾರು ನಿಯಮಗಳನ್ನೂ ಸಹ ಉಲ್ಲಂಘಿಸಲಾಗಿದೆ. ಹಾಗಾಗಿ ಮೊದಲು ಅಧಿಕಾರಿ ಎಲ್ಲಾಪಿಜಿಗಳನ್ನು ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿದ ನಂತರ ಯಾವುದಾದರೂ ನಿರ್ಣಯ ಕೈಗೊಳ್ಳಬಹುದಾಗಿದೆ. ಆದ್ದರಿಂದ ಮೊದಲು ಅಧಿಕಾರಿಗಳು ಪಿಜಿಗಳನ್ನು ಪರಿಶೀಲನೆ ನಡೆಸಿ ಎಂದು ಆದೇಶಿಸಿದೆ.
ಅರ್ಜಿದಾರರ ಪರ ವಕೀಲರು, ಜಿಬಿಎ ಟ್ರೇಡ್ ಲೈಸನ್ಸ್‌ಗೆ ಜಾರಿಗೊಳಿಸಿದ್ದ ನಿಯಮಗಳನ್ನು ಉಲ್ಲಂಘಿಸಿ ಏಕಪಕ್ಷೀಯವಾಗಿ ಪಿಜಿಗಳಿಗೆ ನಿಯಮಗಳನ್ನು ರೂಪಿಸಿದೆ. ಹಾಗಾಗಿ ಅವುಗಳನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.
2020ರ ಬಿಬಿಎಂಪಿ ಕಾಯ್ದೆ ಸೆಕ್ಷನ್ 305ರಡಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಪಿಜಿ ಗೆಸ್ಟ್ ಹೌಸ್‌ಗಳು ಟ್ರೇಡ್ ಲೈಸೆನ್ಸ್ ನಿಯಮಾವಳಿಗಳನ್ನು ಪಾಲನೆ ಮಾಡಬೇಕು. ಜತೆಗೆ ಗೆಸ್ಟ್ ಹೌಸ್ ಪ್ರವೇಶ ಮತ್ತು ನಿರ್ಗಮನದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಕ್ಯಾಮರಾ ದೃಶ್ಯಾವಳಿಯನ್ನು 90 ದಿನಗಳ ಕಾಲ ಸಂಗ್ರಹಿಸಿಡಬೇಕು. ಪ್ರತಿಯೊಬ್ಬ ವಾಸಿಗೂ ಕನಿಷ್ಠ 70 ಚದರ ಅಡಿ ಜಾಗ ಒದಗಿಸಬೇಕು, ಕೋಣೆಗಳಲ್ಲಿ, ಶೌಚಾಲಯಗಳಲ್ಲಿಸ್ವಚ್ಛತೆಗೆ ಆದ್ಯತೆ ನೀಡಬೇಕು. ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂಬ ಷರತ್ತುಗಳನ್ನು ಮುಖ್ಯ ಆಯುಕ್ತರು ವಿಧಿಸಿದ್ದರು.
ಜತೆಗೆ, ಅಡುಗೆ ಕೋಣೆಗಳಿಗೆ ಎಫ್‌ಎಸ್‌ಎಸ್‌ಎಐನಿಂದ ಪ್ರತ್ಯೇಕ ಪರವಾನಗಿ ಪಡೆದುಕೊಳ್ಳಬೇಕು. ಕಟ್ಟಡದಕ್ಕೆ ದಿನದ 24 ಗಂಟೆಯೂ ಭದ್ರತೆ ಒದಗಿಸಲು ಸೆಕ್ಯೂರಿಟಿ ಗಾರ್ಡ್‌ಗಳಿರಬೇಕು. ಒಂದು ವೇಳೆ ಕಟ್ಟಡದಲ್ಲಿಆಗ್ನಿ ಆಕಸ್ಮಿಕ ಸಂಭವಿಸಿದರೆ ಆಗ ಅಗ್ನಿ ಶಾಮಕ ವಾಹನ ಕಟ್ಟಡದ ಬಳಿ ಸುಲಭವಾಗಿ ಬಂದು ಕಾರ್ಯನಿರ್ವಹಿಸುವ ಅನುಕೂಲವಿರಬೇಕು, ಬಿಬಿಎಂಪಿ ಹಾಗೂ ಪೊಲೀಸ್ ಸಹಾಯವಾಣಿ ಸಂಖ್ಯೆಯ ಬೋರ್ಡ್ ಹಾಕಿರಬೇಕು ಎಂದು ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಈ ಎಲ್ಲ ನಿಯಮಗಳನ್ನು 6 ತಿಂಗಳಲ್ಲಿ ಪಾಲಿಸಬೇಕು, ಒಂದು ವೇಳೆ ಅವುಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿತ್ತು.
Related Articles
Thank you for your comment. It is awaiting moderation.


Comments (0)