ಆರೋಪಿಗೆ ನೋಟಿಸ್ ನೀಡುವಾಗ ಚೆಕ್‌ ಲಿಸ್ಟ್ ಕಡ್ಡಾಯ; ಮಾರ್ಗಸೂಚಿ ಹೊರಡಿಸಲು ಸರ್ಕಾರಕ್ಕೆ ಹೈ ನಿರ್ದೇಶನ

ಬೆಂಗಳೂರು: ಯಾವುದೇ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಠಾಣೆಗೆ ಕರೆಸಿಕೊಳ್ಳುವಾಗ ಪೊಲೀಸರು ನೀಡುವ ನೋಟಿಸ್‌ನಲ್ಲಿ ಕ್ರೈಂ ಸಂಖ್ಯೆ, ಎಫ್‌ಐಆರ್‌ ಪ್ರತಿ, ಅಪರಾಧ ಕೃತ್ಯದ ಮಾಹಿತಿ ಮತ್ತು ದೂರಿನ ಸಂಕ್ಷಿಪ್ತ ವಿವರ ಒಳಗೊಂಡ ಚೆಕ್‌ ಲಿಸ್ಟ್‌ ಅನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಸರ್ಕಾರ ಮತ್ತು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಠಾಣೆಗೆ ಹಾಜರಾಗುವಂತೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿದ್ದ ಅಮೃತಹಳ್ಳಿ ಠಾಣೆಯ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಕ್ರಮವನ್ನು ಪ್ರಶ್ನಿಸಿ ಪತ್ರಕರ್ತ ಟಿ.ಆರ್‌.ಶಿವಪ್ರಸಾದ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ–2023ರ ಸೆಕ್ಷನ್‌ 35ರ ಪ್ರಕಾರ ಆರೋಪಿಗೆ ಚೆಕ್‌ ಲಿಸ್ಟ್‌ ಒದಗಿಸದಿದ್ದರೆ ಆತ ಠಾಣಾಧಿಕಾರಿ ಮುಂದೆ ಹಾಜರಾಗುವ ಅವಶ್ಯಕತೆ ಇಲ್ಲ. ಅಂತೆಯೇ, ಪೊಲೀಸರು ಆ ಆರೋಪಿಯ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ. ಆದ್ದರಿಂದ, ಯಾವುದೇ ಆರೋಪಿಯನ್ನು ಠಾಣೆಗೆ ಕರೆಸಿಕೊಳ್ಳುವಾಗ ನೀಡುವ ನೋಟಿಸ್‌ನಲ್ಲಿ ಕ್ರೈಂ ನಂಬರ್‌, ಎಫ್‌ಐಆರ್‌ ಪ್ರತಿ, ಅಪರಾಧ ಬಗೆಗಿನ ಮಾಹಿತಿ ಮತ್ತು ದೂರಿನ ಸಂಕ್ಷಿಪ್ತ ವಿವರ ಒಳಗೊಂಡ ಚೆಕ್‌ ಲಿಸ್ಟ್‌ ಅನ್ನು ಕಡ್ಡಾಯವಾಗಿ ಒದಗಿಸಬೇಕು. ಈ ಕುರಿತು ರಾಜ್ಯ ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲು ಸೂಕ್ತ ಮಾರ್ಗಸೂಚಿ ಹೊರಡಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣವೇನು?
ಜೀವ ಬೆದರಿಕೆಯೊಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಮಯ ಟಿ.ವಿ ಚಾನಲ್‌ನ ಸಿಇಒ ವಿಜಯ್ ಟಾಟಾ ನೀಡಿದ ದೂರಿನ ಅನುಸಾರ ಅಮೃತಹಳ್ಳಿ ಠಾಣೆಯ ಪೊಲಿಸರು ಟಿ.ಆರ್.ಶಿವಪ್ರಸಾದ್‌ಗೆ ವಾಟ್ಸ್‌ ಆ್ಯಪ್‌ ಮೂಲಕ ಸಂದೇಶ ಕಳುಹಿಸಿ, ಠಾಣೆಗೆ ಹಾಜರಾಗಬೇಕು ಎಂದು ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಶಿವಪ್ರಸಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ಎಂ.ಅರುಣ್‌ ಶ್ಯಾಮ್‌ ವಾದ ಮಂಡಿಸಿದ್ದರು.

Related Articles

Comments (0)

Leave a Comment