ವೃದ್ಧ ತಂದೆಯ ಆರೈಕೆ ಮಾಡದ ಪುತ್ರಿಯರು; 2.4 ಎಕರೆ ಜಮೀನಿನ ಗಿಫ್ಟ್ ಡೀಡ್ ರದ್ದುಪಡಿಸಿದ ಹೈಕೋರ್ಟ್
- by Jagan Ramesh
- February 9, 2026
- 7 Views
ಬೆಂಗಳೂರು: ಜೀವನದ ಸಂಧ್ಯಾಕಾಲದಲ್ಲಿ ಆರೈಕೆ ಮಾಡುತ್ತಾರೆಂಬ ನಂಬಿಕೆಯಿಂದ ಜೀವನಾಧಾರವಾಗಿದ್ದ 2.4 ಎಕರೆ ಭೂಮಿಯನ್ನು ಪುತ್ರಿಯರಿಬ್ಬರ ಹೆಸರಿಗೆ ಮಾಡಿಕೊಟ್ಟಿದ್ದ ವೃದ್ಧರೊಬ್ಬರು, ನಂತರ ಪುತ್ರಿಯರು ತಮ್ಮನ್ನು ನಿರಾಶ್ರಿತನನ್ನಾಗಿ ಮಾಡಿದ್ದ ಹಿನ್ನೆಲೆಯಲ್ಲಿ ಗಿಫ್ಟ್ ಡೀಡ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.
ಹಿರಿಯ ನಾಗರಿಕರಿಗೆ ಅವರ ವೃದ್ಧಾಪ್ಯದಲ್ಲಿ ಮಕ್ಕಳು ಆರೈಕೆ ಮಾಡದ ಸಂದರ್ಭದಲ್ಲಿ ನ್ಯಾಯಾಲಯ ಅವರ ರಕ್ಷಣೆಗೆ ಧಾವಿಸಿ ಆಸ್ತಿಯನ್ನು ರಕ್ಷಿಸಿ, ಅವರ ಹಕ್ಕುಗಳನ್ನು ಮರಳಿ ದೊರಕಿಸಿಕೊಡಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಹೆಬ್ಬೂರು ಹೋಬಳಿಯ ದೊಡ್ಡಗೊಲ್ಲಹಳ್ಳಿಯ ವೆಂಕಟಯ್ಯ (84) ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, 2007ರ ಹಿರಿಯ ನಾಗರಿಕರ ಮತ್ತು ಪೋಷಕರ ನಿರ್ವಹಣಾ ಮತ್ತು ಕಲ್ಯಾಣ ಕಾಯಿದೆಯನ್ನು ಅನ್ವಯಿಸಿ, ಕೃಷಿ ಭೂಮಿಯನ್ನು ಪುತ್ರಿಯರ ಹೆಸರಿಗೆ ಮಾಡಿಕೊಟ್ಟಿದ್ದ ಗಿಫ್ಟ್ ಡೀಡ್ ರದ್ದುಪಡಿಸಿದೆ.
ಪ್ರಕರಣವೇನು?
ಸುಮಾರು 2.4 ಎಕರೆ ಕೃಷಿ ಭೂಮಿ ಹೊಂದಿದ್ದ ವೆಂಕಟಯ್ಯ, ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆಂದು ಭರವಸೆ ನೀಡಿದ್ದ ಪುತ್ರಿಯರಾದ ಶಿವಮ್ಮ ಮತ್ತು ಪುಟ್ಟಮ್ಮ ಅವರ ಪರವಾಗಿ ಉಡುಗೊರೆ ಪತ್ರವನ್ನು ಮಾಡಿಕೊಟ್ಟು ಆಸ್ತಿಯನ್ನು ವರ್ಗಾವಣೆ ಮಾಡಿದ್ದರು. ಆನಂತರ, ಪುತ್ರಿಯರು ತಮ್ಮನ್ನು ನೋಡಿಕೊಳ್ಳಲು ವಿಫಲರಾಗಿದ್ದಾರೆಂದು ಅವರು ಆರೋಪಿಸಿದ್ದರಲ್ಲದೆ, ಹಿರಿಯ ನಾಗರಿಕರ ಕಾಯ್ದೆಯಡಿ, ಗಿಫ್ಟ್ ಡೀಡ್ ರದ್ದು ಕೋರಿ ಉಪವಿಭಾಗಾಧಿಕಾರಿ ನೇತೃತ್ವದ ನ್ಯಾಯಮಂಡಳಿ ಮುಂದೆ ಮನವಿ ಸಲ್ಲಿಸಿದ್ದರು.
ಇದನ್ನು ವಜಾಗೊಳಿಸಿದ್ದ ನ್ಯಾಯಮಂಡಳಿ, ಉಡುಗೊರೆ ಪತ್ರದಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ನೋಡಿಕೊಳ್ಳಲು ನಿರ್ಬಂಧವನ್ನು ಹೊಂದಿರುವ ಸ್ಪಷ್ಟ ಷರತ್ತು ಇಲ್ಲ ಎಂದು ತೀರ್ಪು ನೀಡಿತ್ತು. ಈ ಆದೇಶವನ್ನು ಜಿಲ್ಲಾಧಿಕಾರಿ ಸಹ ಎತ್ತಿಹಿಡಿದಿದ್ದರು. ಇದರಿಂದ, ಗಿಫ್ಟ್ ಡೀಡ್ ರದ್ದು ಕೋರಿ ಹೈಕೋರ್ಟ್ಗೆ ಮೊರೆ ಹೋಗಿದ್ದ ವೆಂಕಟಯ್ಯ, ತಾವು ಅನಕ್ಷರಸ್ಥರು ಮತ್ತು ಗಿಫ್ಟ್ ಡೀಡ್ ಬಗ್ಗೆ ತಿಳಿದಿಲ್ಲದ ಕಾರಣ ಪುತ್ರಿಯರಾದ ಶಿವಮ್ಮ ಮತ್ತು ಪುಟ್ಟಮ್ಮ ಉಡುಗೊರೆ ಪತ್ರ ಸಿದ್ಧಪಡಿಸಿದ್ದರು. ತನ್ನನ್ನು ಚೆನ್ನಾಗಿ ನೋಡಿಕೊಳ್ಳಲಾಗುವುದೆಂಬ ಭರವಸೆಯ ಮೇರೆಗೆ ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದೆನು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಹೈಕೋರ್ಟ್ ಹೇಳಿದ್ದೇನು?
ಅಧಿಕಾರಿಗಳು ಅಳವಡಿಸಿಕೊಂಡ ವ್ಯಾಖ್ಯಾನವನ್ನು ಒಪ್ಪದ ನ್ಯಾಯಪೀಠ, ಗಿಫ್ಟ್ ಡೀಡ್ನಲ್ಲಿ ಸ್ಪಷ್ಟವಾದ ನಿರ್ವಹಣಾ ಷರತ್ತು ಕಾಯ್ದೆಯ ಸೆಕ್ಷನ್ 23(1) ರಡಿಯಲ್ಲಿ ಕಡ್ಡಾಯ ಅವಶ್ಯಕತೆಯಲ್ಲ. ಒಂದು ವೇಳೆ ಅಂತಹ ಪ್ರಕರಣಗಳು ಎದುರಾದರೆ, ಅವುಗಳ ಸಂಗತಿಗಳು, ಸಂದರ್ಭಗಳು ಮತ್ತು ನಡವಳಿಕೆಯಿಂದ ಊಹಿಸಬಹುದು ಎಂದು ಹೇಳಿದೆ.
ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ನೀಡಿರುವ ಕಾರಣಗಳು ಕಾನೂನುಬದ್ಧವಾಗಿ ದೋಷಪೂರಿತ ಮತ್ತು ಕಾಯ್ದೆಯ ತಪ್ಪು ತಿಳುವಳಿಕೆ ಆಧರಿಸಿವೆ. ಇದು ವಯಸ್ಸಾದ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿಯನ್ನು ವರ್ಗಾಯಿಸುವಾಗ ಕಟ್ಟುನಿಟ್ಟಾದ ಕಾನೂನು ವಿಧಿವಿಧಾನಗಳಿಗಿಂತ ಹೆಚ್ಚಾಗಿ ನಂಬಿಕೆ, ನೈತಿಕ ಭರವಸೆಗಳು ಮತ್ತು ಕೌಟುಂಬಿಕ ಬಂಧಗಳನ್ನು ಅವಲಂಬಿಸುತ್ತಾರೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
Related Articles
Thank you for your comment. It is awaiting moderation.


Comments (0)