ಚುನಾವಣಾ ಅಕ್ರಮ ಆರೋಪ; ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅನೂರ್ಜಿತಗೊಳಿಸಿದ ಹೈಕೋರ್ಟ್

ಬೆಂಗಳೂರು: ಕಳೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (ಭಾಗ್ಯನಗರ) ಕ್ಷೇತ್ರದಿಂದ ಕಾಂಗ್ರೆಸ್‌ನ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಿ ಹೈಕೋರ್ಟ್ ಸೋಮವಾರ ಮಹತ್ವದ ಆದೇಶ ನೀಡಿದೆ.

ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸುವಂತೆ ಹಾಗೂ ತಮ್ಮನ್ನು ವಿಜೇತ ಅಭ್ಯರ್ಥಿಯೆಂದು ಘೋಷಿಸುವಂತೆ ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಇದೇ ವೇಳೆ ಮುನಿರಾಜು ಅವರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಣೆ ಮಾಡಲು ನ್ಯಾಯಪೀಠ ನಿರಾಕರಿಸಿದೆ.

ತೀರ್ಪಿನ ಪ್ರತಿಯನ್ನು ಚುನಾವಣಾ ಆಯೋಗ ಮತ್ತು ವಿಧಾನಸಭೆ ಕಾರ್ಯದರ್ಶಿಗೆ ರವಾನಿಸಲು ನ್ಯಾಯಪೀಠ ರಿಜಿಸ್ಟ್ರಾರ್‌ಗೆ ಸೂಚನೆ ನೀಡಿದೆ. ವಿಸ್ತೃತ ತೀರ್ಪು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಮತ್ತೊಂದೆಡೆ, ಆದೇಶ ಪ್ರಕಟವಾಗುತ್ತಿದ್ದ ಬೆನ್ನಲ್ಲೇ ಸುಬ್ಬಾರೆಡ್ಡಿ ಪರ ವಕೀಲರು, ನ್ಯಾಯಾಲಯದ ಈ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು. ಅಲ್ಲಿಯವರೆಗೆ ಈ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು. ಈ ಮನವಿಗೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದರು.ಈ ಕುರಿತು ವಾದ-ಪ್ರತಿಪಾದ ಆಲಿಸಿದ ನ್ಯಾಯಪೀಠ, ತನ್ನ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು.

ಇದರಿಂದ, ಶಾಸಕ ಸ್ಥಾನ ಉಳಿಯಬೇಕಾದರೆ ಕೂಡಲೇ ಸುಬ್ಬಾರೆಡ್ಡಿ ಅವರು ಸುಪ್ರೀಂಕೋರ್ಟ್‌‌ಗೆ ಅರ್ಜಿ ಸಲ್ಲಿಸಿ ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ತರಬೇಕಿದೆ.

ಪ್ರಕರಣದ‌ ಹಿನ್ನೆಲೆ:

ಕಳೆದ ಕರ್ನಾಟಕ ವಿಧಾನಸಭೆಯ (2023) 224 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಮೇ 13ರಂದು ಪ್ರಕಟಗೊಂಡಿತ್ತು. ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್‌.ಎನ್‌. ಸುಬ್ಬಾರೆಡ್ಡಿ ಅವರು 82,128 ಮತಗಳನ್ನು ಪಡೆದು ಜಯಗಳಿಸಿದ್ದರು. ಸಮೀಪ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಅಭ್ಯರ್ಥಿ ಸಿ.ಮುನಿರಾಜು ಅವರು 62,949 ಮತಗಳನ್ನು ಪಡೆದಿದ್ದರು. ಅ ಮೂಲಕ ಸುಬ್ಬಾರೆಡ್ಡಿ ಅವರ ಎದುರು ಮುನಿರಾಜು 19,179 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

ಇದರಿಂದ, ಸುಬ್ಬಾರೆಡ್ಡಿಯ ಆಯ್ಕೆ ಪ್ರಶ್ನಿಸಿ ಸಿ.ಮುನಿರಾಜು ಅವರು 2023ರ ಜೂನ್ 24ರಂದು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಬಾಗೇಪಲ್ಲಿ ಶಾಸಕರಾಗಿ ಸುಬ್ಬಾರೆಡ್ಡಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ. ಆದರೆ, ಸುಬ್ಬಾರೆಡ್ಡಿ ಅವರು 2023ರ ಏಪ್ರಿಲ್ 20ರಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿದಾಗ ಅಭ್ಯರ್ಥಿ ತನ್ನ ಪತ್ನಿ ಮತ್ತು ಅವಲಂಬಿತರಿಗೆ ಸೇರಿದ ಆಸ್ತಿಗಳು, ಹೊಣೆಗಾರಿಕೆಗಳ ವಿವರಗಳ ನೀಡಿ ಪ್ರಮಾಣ ಪತ್ರ ಸಲ್ಲಿಸಬೇಕು. ಬಾಂಡ್‌-ಶೇರ್‌ಗಳಲ್ಲಿ ಹೂಡಿಕೆ, ಸಾಲಪತ್ರಗಳ, ಕಂಪನಿಗಳು, ಮ್ಯೂಚುವಲ್‌ ಫಂಡ್‌, ವೈಯಕ್ತಿಕ ಸಾಲ ಸೇರಿದಂತೆ ಎಲ್ಲ ರೀತಿಯ ಹಣಕಾಸು ಮಾಹಿತಿ ನೀಡಬೇಕು ಎಂದು ವಿವರಿಸಿದ್ದರು.

ಆದರೆ, ಸುಬ್ಬಾರೆಡ್ಡಿ ಅವರು ನಾಮಪತ್ರದೊಂದಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಮ್ಮ ಆಸ್ತಿ, ಹೊಣೆಗಾರಿಕೆ, ಹೂಡಿಕೆ ಸೇರಿದಂತೆ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಅನೇಕ ಸಂಗತಿಗಳನ್ನು ಮುಚ್ಚಿಟ್ಟು, ಅಪೂರ್ಣ ಮಾಹಿತಿ ಹಾಗೂ ತಪ್ಪು ಮಾಹಿತಿ ನೀಡಿದ್ದಾರೆ. ಇದು ಚುನಾವಣಾ ಅಕ್ರಮದ ವ್ಯಾಪ್ತಿಗೆ ಬರಲಿದೆ. ಆದ್ದರಿಂದ, ಸುಬ್ಬಾರೆಡ್ಡಿ ಆಯ್ಕೆ ಅನೂರ್ಜಿತಗೊಳಿಸಬೇಕು. ಎರಡನೇ ಅತಿ ಹೆಚ್ಚು ಮತಗಳಿಸಿರುವ ತಮ್ಮನ್ನು ವಿಜೇತ ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕು ಎಂದು ಮುನಿರಾಜು ಕೋರಿದ್ದರು. ಈ ಮನವಿಗೆ ಆಕ್ಷೇಪಣೆ ಸಲ್ಲಿಸಿದ್ದ ಸುಬ್ಬಾರಡ್ಡಿ ಅವರು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

ಇದೀಗ ಹೈಕೋರ್ಟ್‌ ಮುನಿರಾಜು ಅವರ ಈ ಅರ್ಜಿಯನ್ನು ಭಾಗಶಃ ಪುರಸ್ಕರಿಸಿ, ಸುಬ್ಬಾರೆಡ್ಡಿ ಅವರ ಆಯ್ಕೆ ಅಸಿಂಧುಗೊಳಿಸಿದೆ. ಆದರೆ, ಮುನಿರಾಜು ಅವರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಿಸಲು ನಿರಾಕರಿಸಿದೆ.

Related Articles

Comments (0)

Leave a Comment