ರಾಜಿ ಪ್ರಕ್ರಿಯೆ ಬಗ್ಗೆ ಎಚ್ಡಿಕೆ ಮೊದಲು ಲಿಖಿತ ವಿವರಣೆ ನೀಡಲಿ; ಲೋಕಾ ಎಡಿಜಿಪಿ ಚಂದ್ರಶೇಖರ್ ಪರ ವಕೀಲರ ವಾದ
- by Jagan Ramesh
- February 26, 2026
- 7 Views
ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಮತ್ತು ಎಸ್ಐಟಿ ಮುಖ್ಯಸ್ಥ ಎಂ. ಚಂದ್ರಶೇಖರ್ ಮತ್ತವರ ಕುಟುಂಬಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ. ಮಾಧ್ಯಮಗಳ ಮುಂದೆ ಚಂದ್ರಶೇಖರ್ ಹಾಗೂ ಲೋಕಾಯುಕ್ತ ಸಂಸ್ಥೆಯ ಘನತೆಗೆ ಧಕ್ಕೆ ತಂದಿದ್ದಾರೆ. ಆದ್ದರಿಂದ, ರಾಜಿ ಸಂಧಾನ ಪ್ರಕ್ರಿಯೆಗೆ ಮೊದಲು ಕುಮಾರಸ್ವಾಮಿ ಅವರೇ ನ್ಯಾಯಾಲಯಕ್ಕೆ ಲಿಖಿತ ವಿವರಣೆ ನೀಡಲಿ ಎಂದು ಚಂದ್ರಶೇಖರ್ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದರು.
ಚಂದ್ರಶೇಖರ್ ಅವರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಹಾಗೂ ನಗರದ 42ನೇ ಎಸಿಎಂಎಂ ನ್ಯಾಯಾಲಯದ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ವಿಚಾರಣೆ ರದ್ದು ಕೋರಿ ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಸುರೇಶ್ ಬಾಬು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಚಂದ್ರಶೇಖರ್ ಪರ ವಕೀಲ ಎಂ.ಎಚ್. ಹಿದಾಯತ್ ಉಲ್ಲಾ ವಾದ ಮಂಡಿಸಿ, ಕುಮಾರಸ್ವಾಮಿ ಅವರು ಮೊದಲು ಲಿಖಿತ ವಿವರಣೆ ನೀಡಲಿ, ನಂತರ ನಮ್ಮ ಕಕ್ಷಿದಾರರು ಅದನ್ನು ಪರಿಶೀಲಿಸಿ ಮುಂದಡಿ ಇಡಲಿದ್ದಾರೆ ಎಂದರು. ಕುಮಾರಸ್ವಾಮಿ ಪರ ಹಾಜರಿದ್ದ ಹಿರಿಯ ವಕೀಲ ಹಷ್ಮತ್ ಪಾಷ, ರಾಜಿ ಪ್ರಕ್ರಿಯೆಗೆ ನಾವು ಸಿದ್ಧರಿದ್ದು, ಮುಂದಿನದನ್ನು ಕೋರ್ಟ್ ನಿರ್ಧಾರಕ್ಕೆ ಬಿಡಲು ಸಿದ್ಧರಿದ್ದೇವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇಬ್ಬರೂ ಕೂತು ಪರಸ್ಪರ ಚರ್ಚಿಸಿ ನಂತರ ಒಂದು ತೀರ್ಮಾನಕ್ಕೆ ಬನ್ನಿ. ನಂತರ ಕೋರ್ಟ್ ತನ್ನ ವಿವೇಚನಾಯುಕ್ತ ನಿರ್ಧಾರ ಪ್ರಕಟಿಸಲಿದೆ ಎಂದು ತಿಳಿಸಿ, ವಿಚಾರಣೆಯನ್ನು ಮಾರ್ಚ್ 5ಕ್ಕೆ ಮುಂದೂಡಿತು.
ಪ್ರಕರಣವೇನು?
ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಎಚ್.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿಯಲ್ಲಿ ನನ್ನ ವಿರುದ್ಧ ಮಾನಹಾನಿ ಹೇಳಿಕೆ ನೀಡುವುದರ ಜತೆಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್ ತನಿಖಾ ದಳದ ಮುಖ್ಯಸ್ಥರಾದ ಎಂ. ಚಂದ್ರಶೇಖರ್ 2024ರಲ್ಲಿ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಬೆಂಗಳೂರಿನ ಸಂಜಯ್ನಗರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 224 (ಸರ್ಕಾರಿ ನೌಕರರಿಗೆ ಅವರ ಅಧಿಕೃತ ಕರ್ತವ್ಯಗಳ ಮೇಲೆ ಪ್ರಭಾವ ಬೀರಲು ಬೆದರಿಕೆ ಹಾಕಿದೆ) ಆರೋಪದಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣವನ್ನು ನಗರದ 42ನೇ ಎಸಿಎಂಎಂ ನ್ಯಾಯಾಲು ವಿಚಾರಣೆ ನಡೆಸುತ್ತಿದೆ. ಇದರಿಂದ, ಎಫ್ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಕುಮಾರಸ್ವಾಮಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
Related Articles
Thank you for your comment. It is awaiting moderation.


Comments (0)