ಅರಣ್ಯ ಉತ್ಪನ್ನ ಸಾಗಾಣಿಕೆ ಪರವಾನಗಿ ಶುಲ್ಕ ಹೆಚ್ಚಳ; ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು: ಅರಣ್ಯ ಉತ್ಪನ್ನಗಳ ಸಾಗಾಣಿಕೆ ಪರವಾನಗಿ ಶುಲ್ಕವನ್ನು ಒಂದು ಆರ್ಥಿಕ ವರ್ಷದಲ್ಲಿ 10 ಸಾವಿರ ರೂ.ಗಳಿಂದ 20 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಹೊಡಿಸಿರುವ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಸರ್ಕಾರದ ಕ್ರಮ ಪ್ರಶ್ನಿಸಿ ಆಲ್ ಕೇರಳ ಸಾ ಮಿಲ್ ಆ್ಯಂಡ್ ವುಡ್ ಇಂಡಸ್ಟ್ರೀಸ್ ಓನರ್ಸ್ ಅಸೋಸಿಯೇಷನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಇದೇ ವಿಚಾರವಾಗಿ ದಿ ಫೆಡರೇಷನ್ ಆಫ್ ಕರ್ನಾಟಕ ಟಿಂಬರ್ ಮರ್ಚಂಟ್ಸ್ ಆ್ಯಂಡ್ ಸಾ ಮಿಲ್ಲರ್ಸ್ ಸಲ್ಲಿಸಿರುವ ಅರ್ಜಿಯಲ್ಲಿ ಕರ್ನಾಟಕ ಸರ್ಕಾರದ ಆದೇಶಕ್ಕೆ ಈಗಾಗಲೇ ಮಧ್ಯಂತರ ತಡೆ ನೀಡಿದೆ. ಈ ಅರ್ಜಿಯಲ್ಲೂ ಆ ಆದೇಶ ಅನ್ವಯವಾಗಲಿದೆ ಎಂದು ಹೇಳಿ ಮಧ್ಯಂತರ ತಡೆ ನೀಡಿತು.

ಜತೆಗೆ, ಅರ್ಜಿ ಸಂಬಂಧ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಮನವಿ ಏನು?
ಕರ್ನಾಟಕ ಅರಣ್ಯ ಅಧಿನಿಯಮ 1969ರ ನಿಯಮ 53ರಡಿ ಪರವಾನಗಿ ಶುಲ್ಕ ಪರಿಷ್ಕರಿಸಿ 2023ರ ನವೆಂಬರ್ 17 ಹಾಗೂ 2024ರ ಏಪ್ರಿಲ್ 1ರಂದು ಹೊರಡಿಸಲಾಗಿರುವ ಅಧಿಸೂಚನೆಗಳನ್ನು ಪ್ರಶ್ನಿಸಿರುವ ಅರ್ಜಿದಾರರು, 2013ರಿಂದ ಈವರೆಗೆ ಆಗಿರುವ ಶುಲ್ಕ ಪರಿಷ್ಕರಣೆ 200 ಪಟ್ಟು ಹೆಚ್ಚಾಗಿದೆ. ಇದು ಟಿಂಬರ್ ಉದ್ದಿಮೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆದ್ದರಿಂದ, ಅಧಿಸೂಚನೆಗಳನ್ನು ರದ್ದುಪಡಿಸಬೇಕು. ಅರ್ಜಿದಾರ ಸಂಸ್ಥೆಯ ಸದಸ್ಯರಿಂದ ವಸೂಲಿ ಮಾಡಿರುವ ಶುಲ್ಕವನ್ನು ಮರುಪಾವತಿಸುವಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Related Articles

Comments (0)

Leave a Comment