ತಡವಾಗಿ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಶಿಕ್ಷೆ; ಚೈತನ್ಯ ಟೆಕ್ನೋ ಶಾಲೆ ಪ್ರಾಂಶುಪಾಲೆ, ಶಿಕ್ಷಕರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ಶಾಲೆಗೆ ತಡವಾಗಿ ಬಂದಿದ್ದ ವಿದ್ಯಾರ್ಥಿಗಳಿಗೆ ಬಸ್ಕಿ ಹೊಡೆದು, ಶಾಲೆಯ ಆವರಣ ಸುತ್ತು ಹಾಕುವ ಶಿಕ್ಷೆ ನೀಡಿದ ಆರೋಪದಲ್ಲಿ ಯಲಹಂಕದ ಚೈತನ್ಯ ಟೆಕ್ನೋ ಶಾಲೆಯ ಪ್ರಾಂಶುಪಾಲೆ ಹಾಗೂ ಮೂವರು ಶಿಕ್ಷಕರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ.

ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಪ್ರಾಂಶುಪಾಲೆ ಮೀನಾಕ್ಷಿ ವಿನೋದಿನಿ, ಶಿಕ್ಷಕರಾದ ರಾಯಚೋಟಿ ನರೇಶ್‌, ಕೆ. ಭರತ್‌ ಕುಮಾರ್‌ ಹಾಗೂ ಎಸ್‌. ಶ್ರೀನಿವಾಸ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ‌ನಡೆಸಿತು.

ಅರ್ಜಿದಾರರ ಪರ ವಕೀಲ ಆರ್ನವ್ ಬಾಗಲವಾಡಿ ವಾದ ಮಂಡಿಸಿ, ಕೆಲ ವಿದ್ಯಾರ್ಥಿಗಳು ಶಾಲೆಗೆ ತಡವಾಗಿ ಬಂದಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಪ್ರಾಂಶುಪಾಲೆ-ಪೋಷಕರ ನಡುವಿನ ಸಂಭಾಷಣೆಯ ವಿಡಿಯೊ ವೈರಲ್‌ ಆಗಿದೆ. ಶಿಕ್ಷಕರ ವಿರುದ್ಧ ಮಕ್ಕಳು ದೂರು ನೀಡುವಂತೆ ಬಲವಂತ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮಕ್ಕಳಿಗೆ ಯಾವುದೇ ಶಿಕ್ಷೆ ನೀಡಿಲ್ಲ. ಪೋಷಕರನ್ನು ಕರೆದುಕೊಂಡು ಬರುವಂತೆ ಶಿಕ್ಷಕರು ಸೂಚಿಸಿದ್ದರು. ಇದು ಹಾನಿ ಮಾಡುವ ಉದ್ದೇಶವಾಗುವುದಿಲ್ಲ ಎಂದರು.

ಆಗ ನ್ಯಾಯಪೀಠ, ಮಕ್ಕಳಿಗೆ ಹೊಡೆದಿದ್ದಾರೆ ಎಂದು ಹೇಳಲಾಗಿದೆ. 2 ನಿಮಿಷ ತಡವಾಗಿದ್ದಕ್ಕೆ 2 ಗಂಟೆ ಬಿಸಿಲಿನಲ್ಲಿ ನಿಲ್ಲಿಸಿದ್ದಾರೆ ಎನ್ನುವುದು ಆರೋಪವಾಗಿದೆ ಎಂದು ಹೇಳಿತು. ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಲಾಗುವುದು ಎಂದರು.

ಇದನ್ನು ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಮಾಡಿತಲ್ಲದೆ, ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಪ್ರಕರಣವೇನು?
ಯಲಹಂಕ ನ್ಯೂಟೌನ್‌ನ ತಿರುಮಲ‌ ನಗರದಲ್ಲಿರುವ ಚೈತನ್ಯ ಟೆಕ್ನೋ ಶಾಲೆಯ 7ನೇ ತರಗತಿಯಿಂದ 10ನೇ ತರಗತಿ ಏಳು ವಿದ್ಯಾರ್ಥಿಗಳು 2026ರ ಮಾರ್ಚ್‌ 13ರಂದು ತಡವಾಗಿ ಶಾಲೆಗೆ ಬಂದಿದ್ದರಿಂದ ಅವರನ್ನು ತರಗತಿಗೆ ಸೇರಿಸದೇ ಆವರಣದಲ್ಲಿ ನಿಲ್ಲಿಸಲಾಗಿತ್ತು ಎಂದು ಬೆಂಗಳೂರಿನ ಯಲಹಂಕ ಉಪನಗರದ ತಿರುಮಲ ನಗರದಲ್ಲಿರುವ ಚೈತನ್ಯ ಟೆಕ್ನೋ ಶಾಲೆಯ ವಿರುದ್ಧ ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಮಕ್ಕಳ ಹಕ್ಕುಗಳ ಆಯೋಗ ಭೇಟಿ ನೀಡಿ ಬಾದಿತ ವಿದ್ಯಾರ್ಥಿಗಳ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ಮುಖ್ಯಸ್ಥ ವಂಶಿಕೃಷ್ಣ ಅವರ ಜತೆ ಸಮಾಲೋಚಿಸಿದ್ದರು. ಶಾಲೆಗೆ ತಡವಾಗಿ ಬಂದರೆ ಸುಮಾರು 50 ಬಸ್ಕಿ ಹೊಡೆಸುವುದು, ಆವರಣದಲ್ಲಿ 50 ರೌಂಡ್‌ ಓಡಿಸುವುದು ಹಾಗೂ ಕೆಟ್ಟ ಭಾಷೆ ಬಳಸಿರುವುದರ ಬಗ್ಗೆ ಮಕ್ಕಳು ಹೇಳಿಕೆ ನೀಡಿದ್ದರು.

ಶಾಲೆಯ ಪ್ರಾಂಶುಪಾಲೆ ಮೀನಾಕ್ಷಿ ವಿನೋದಿನಿ, ನರೇಶ್‌, ಭೌತಶಾಸ್ತ್ರ ಶಿಕ್ಷಕ ಭರತ್‌, ಗಣಿತ ಶಿಕ್ಷಕ ಶ್ರೀನಿವಾಸ್‌ ಮಕ್ಕಳಿಗೆ ಶಿಕ್ಷೆ ನೀಡಿದ್ದಾರೆ ಎನ್ನಲಾಗಿದೆ. ಶಿಕ್ಷಕರು ಕೆಟ್ಟ ಭಾಷೆ ಬಳಸಿರುವುದು 8ನೇ ತರಗತಿ ವಿದ್ಯಾರ್ಥಿ ಪುನೀತ್‌ ಗೌಡ ತಾಯಿ ಅರ್ಪಿತಾ ಅವರ ಸಹೋದರನ ಫೋನ್‌ನಲ್ಲಿ ವಿಡಿಯೊ ರೆಕಾರ್ಡ್‌ ಆಗಿದೆ. ಆದ್ದರಿಂದ, ಆರೋಪಿತರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಏಳು ಸಂತ್ರಸ್ತ ವಿದ್ಯಾರ್ಥಿಗಳು ದೂರು ನೀಡಿದ್ದರು. ಇದರ ಆಧಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನೀಡಿದ್ದ ದೂರಿನ ಅನ್ವಯ ಯಲಹಂಕ ನ್ಯೂ ಟೌನ್‌ ಪೊಲೀಸರು ನಾಲ್ವರ ವಿರುದ್ಧ ಬಾಲ ನ್ಯಾಯ ಕಾಯ್ದೆ ಸೆಕ್ಷನ್‌ 75, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 115(2), 352 ಜತೆಗೆ 3(5)ರ ಅಡಿ ಪ್ರಕರಣ ದಾಖಲಿಸಿದ್ದಾರೆ.

Related Articles

Comments (0)

Leave a Comment